ನೀಮುಚ್ (ಮಧ್ಯ ಪ್ರದೇಶ): ಎಲ್ಲ ಅಡೆತಡೆಗಳನ್ನು ಮೀರಿ ಬಡ ಕುಟುಂಬದ ಯುವತಿಯೋರ್ವಳು ಏರ್ಫೋರ್ಸ್ ಅಧಿಕಾರಿಯಾಗಿ ಸಾಧನೆ ಮಾಡಿದ್ದು ಇಡೀ ದೇಶದ ಗಮನ ಸೆಳೆದಿದೆ. ಮಧ್ಯ ಪ್ರದೇಶದ ನೀಮುಚ್ನ 23 ವರ್ಷದ ಯುವತಿ ಆಂಚಲ್ ಗಂಗ್ವಾಲ್ ಎಂಬ ಯುವತಿಯೇ ಈ ಬಾನೆತ್ತರದ ಸಾಧನೆಗೈದು ಇತರರಿಗೆ ಮಾದರಿಯಾಗಿದ್ದಾಳೆ. ಟೀ ಮಾರುವವನ ಮಗಳಾಗಿ, ಬಡಕುಟುಂಬದ ಎಲ್ಲ ಅಡ್ಡಿ ಆತಂಕಗಳನ್ನು ಎದುರಿಸಿಯೂ ಛಲ ಬಿಡದೇ ಗುರಿ ಸಾಧಿಸಿದ್ದಾಳೆ ಆಂಚಲ್.
ಭಾರತೀಯ ವಾಯುಪಡೆಗೆ ಮಧ್ಯ ಪ್ರದೇಶ ರಾಜ್ಯದಿಂದ ಆಯ್ಕೆಯಾದ ಏಕೈಕ ವಿದ್ಯಾರ್ಥಿಯಾದ ಈಕೆ ಏರ್ಫೋರ್ಸ್ ಫ್ಲೈಯಿಂಗ್ ಆಫೀಸರ್ ಆಗಿ ನೇಮಕವಾಗಿದ್ದಾಳೆ. ಹೈದರಾಬಾದ್ನ ದುಂಡಿಗಲ್ ಬಳಿಯ ಇಂಡಿಯನ್ ಏರ್ಪೋರ್ಸ್ ಅಕಾಡೆಮಿಯಲ್ಲಿ ನಡೆದ ಗ್ರಾಜುಯೇಶನ್ ಪರೇಡ್ ಸಮಾರಂಭದಲ್ಲಿ ಆಂಚಲ್ಗೆ ರಾಷ್ಟ್ರಪತಿಗಳ ಪ್ರಶಂಸಾ ಪತ್ರವನ್ನು ನೀಡಲಾಯಿತು. ಒಟ್ಟು 123 ಫ್ಲೈಟ್ ಕೆಡೆಟ್ಗಳನ್ನು ಈ ಸಮಾರಂಭದಲ್ಲಿ ಏರ್ಫೋರ್ಸ್ ಫ್ಲೈಯಿಂಗ್ ಆಫೀಸರ್ಗಳಾಗಿ ಸೇರ್ಪಡೆಗೊಳಿಸಲಾಯಿತು.
ಆಫೀಸರ್ ಆಗಿರುವ ಯುವತಿ ಆಂಚಲ್ ಅವರ ತಂದೆ ಸುರೇಶ ಗಂಗ್ವಾಲ್, ನೀಮುಚ್ ಜಿಲ್ಲೆಯಲ್ಲಿ ಚಿಕ್ಕ ಟೀ ಅಂಗಡಿಯೊಂದನ್ನು ನಡೆಸುತ್ತ ಕುಟುಂಬ ನಿರ್ವಹಣೆ ಮಾಡುತ್ತಿದ್ದಾರೆ. ಆದರೆ ತನಗೆ ಬಡತನವಿದ್ದರೂ ಇಬ್ಬರು ಹೆಣ್ಣು ಹಾಗೂ ಓರ್ವ ಗಂಡು ಮಗನಿಗೆ ಯಾವುದೇ ಕೊರತೆಯಾಗದಂತೆ ಓದಿಸುತ್ತಿದ್ದಾರೆ.