ತಿರುವನಂತಪುರಂ: ಕೇರಳ ಗೋಲ್ಡ್ ಸ್ಮಗ್ಲಿಂಗ್ ಪ್ರಕರಣಕ್ಕೆ ಸಂಬಂಧಪಟ್ಟಂತೆ ಸಿಎಂ ಪಿಣರಾಯಿ ವಿಜಯನ್ ಅವರ ಮಾಜಿ ಪ್ರಧಾನ ಕಾರ್ಯದರ್ಶಿ, ಹಾಗೂ ಅಮಾನತುಗೊಂಡಿರುವ ಐಎಎಸ್ ಅಧಿಕಾರಿ ಎಂ. ಶಿವಶಂಕರ್ ಅವರನ್ನ ಬಂಧನ ಮಾಡಲಾಗಿದೆ.
ಕೇರಳ ಹೈಕೋರ್ಟ್ ಮುಂಗಡ ಜಾಮೀನು ನೀಡಲು ನಿರಾಕರಿಸಿದ ಹಿನ್ನೆಲೆಯಲ್ಲಿ ಎಂ ಶಿವಶಂಕರ್ ಅವರನ್ನು ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಬಂಧನ ಮಾಡಿದ್ದಾರೆ. ನಾಳೆ ಕೋರ್ಟ್ಗೆ ಹಾಜರು ಪಡಿಸಿ, ಹೆಚ್ಚಿನ ವಿಚಾರಣೆಗೋಸ್ಕರ ವಶಕ್ಕೆ ಪಡೆದುಕೊಳ್ಳುವ ಸಾಧ್ಯತೆ ಇದೆ.
ಕೇರಳದ ಗೋಲ್ಡ್ ಸ್ಮಗ್ಲಿಂಗ್ ಪ್ರಕರಣವನ್ನ ಜಾರಿ ನಿರ್ದೇಶನಾಲಯ, ರಾಷ್ಟ್ರೀಯ ತನಿಖಾ ಸಂಸ್ಥೆ ಹಾಗೂ ಕಸ್ಟಮ್ಸ್ ಇಲಾಖೆ ತನಿಖೆ ನಡೆಸುತ್ತಿದ್ದು, ಜುಲೈ 5ರಂದು ತಿರುವನಂತಪುರಂ ಏರ್ಪೋರ್ಟ್ನಲ್ಲಿ 14.82 ಕೋಟಿ ರೂ. ಮೌಲ್ಯದ ಚಿನ್ನವನ್ನ ವಶಕ್ಕೆ ಪಡೆದುಕೊಂಡ ಬಳಿಕ ಈ ಪ್ರಕರಣ ಬೆಳಕಿಗೆ ಬಂದಿದೆ. ಚಿನ್ನ ಕಳ್ಳಸಾಗಣೆ ಪ್ರಕರಣದಲ್ಲಿ ಆರೋಪಿಗಳೊಂದಿಗೆ ನಿಕಟ ಸಂಬಂಧವಿದೆ ಎಂಬ ಆರೋಪದ ಮೇಲೆ ಎಂ ಶಿವಶಂಕರ್ ಅವರನ್ನ ಕೇಂದ್ರ ತನಿಖಾ ಸಂಸ್ಥೆ ಈಗಾಗಲೇ ಅನೇಕ ಸಲ ಪ್ರಶ್ನೆ ಮಾಡಿವೆ.
ಐಎಎಸ್ ಅಧಿಕಾರಿ ಎಂ.ಶಿವಶಂಕರ್ ಬಂಧನ
ಅಕ್ಟೋಬರ್ 16 ರಂದು ಶಿವಶಂಕರ್ ಅವರನ್ನು ಇಡಿ ಅಧಿಕಾರಿಗಳು ವಶಕ್ಕೆ ತೆಗೆದುಕೊಂಡಿದ್ದರು. ಇದಾದ ಬಳಿಕ ಎದೆನೋವಿನ ಕಾರಣ ಅವರನ್ನ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಇದೀಗ ಅವರನ್ನ ಬಂಧನ ಮಾಡಲಾಗಿದ್ದು, ಹೆಚ್ಚಿನ ವಿಚಾರಣೆಗೊಳಪಡಿಸುವ ಸಾಧ್ಯತೆ ದಟ್ಟವಾಗಿದೆ.
2019ರಿಂದ ಇಲ್ಲಿಯವರೆಗೆ 200 ಕೆ.ಜಿಗೂ ಅಧಿಕ ಚಿನ್ನ ಅಕ್ರಮವಾಗಿ ರವಾನೆ ಮಾಡಿರುವ ಶಂಕೆ ವ್ಯಕ್ತವಾಗಿದ್ದು, ಪ್ರಕರಣಕ್ಕೂ ಸಿಎಂ ಕಚೇರಿಗೂ ನೇರ ಸಂಬಂಧವಿದೆ ಎಂದು ಪ್ರತಿಪಕ್ಷಗಳು ಆರೋಪ ಮಾಡಿವೆ.