ಕರ್ನಾಟಕ

karnataka

ETV Bharat / bharat

ನಾಳೆ ಸಂಭವಿಸುವ 'ಸ್ಟ್ರಾಬೆರಿ ಚಂದ್ರಗ್ರಹಣ' ಇತರೆ ಗ್ರಹಣಗಳಿಗಿಂತ ಹೇಗೆ ಭಿನ್ನ ಗೊತ್ತಾ? - 2020ರ ಚಂದ್ರಗ್ರಹಣ

ಶುಕ್ರವಾರ ರಾತ್ರಿ ವರ್ಷದ ಎರಡನೇ ಚಂದ್ರಗ್ರಹಣ ಸಂಭವಿಸಲಿದ್ದು, ಗ್ರಹಣದ ವೇಳೆ ಚಂದ್ರನ ಆಕಾರದಲ್ಲಿ ಯಾವುದೇ ಬದಲಾವಣೆ ಆಗುವುದಿಲ್ಲ. ಪ್ರಪಂಚದಾದ್ಯಂತದ ಖಗೋಳಶಾಸ್ತ್ರಜ್ಞರು ಜೂನ್ 5ರ ಚಂದ್ರ ಗ್ರಹಣವನ್ನು 'ಸ್ಟ್ರಾಬೆರಿ ಚಂದ್ರಗ್ರಹಣ' ಎಂದು ಕರೆದಿದ್ದಾರೆ.

Strawberry Moon Eclipse
ಸ್ಟ್ರಾಬೆರಿ ಚಂದ್ರಗ್ರಹಣ

By

Published : Jun 4, 2020, 9:44 PM IST

ನವದೆಹಲಿ: ನಾಳೆ ಜೂನ್‌ 5 (ಶುಕ್ರವಾರ) ರಂದು ವರ್ಷದ ಎರಡನೇ ಚಂದ್ರಗ್ರಹಣ ಸಂಭವಿಸಲಿದ್ದು, ಸಾಮಾನ್ಯವಾಗಿ ಸಂಭವಿಸುವ ಚಂದ್ರಗ್ರಹಣಕ್ಕಿಂತ ಭಿನ್ನವಾಗಿದೆ.

ಗ್ರಹಣದ ವೇಳೆ ಚಂದ್ರನ ಆಕಾರದಲ್ಲಿ ಯಾವುದೇ ಬದಲಾವಣೆ ಆಗುವುದಿಲ್ಲ. ಗ್ರಹಣದ ಸಮಯದಲ್ಲಿ ಚಂದ್ರನು ಅರ್ಧಾಕಾರದಲ್ಲಿ ಕಾಣದೇ ತನ್ನ ಪೂರ್ಣ ಗಾತ್ರದಲ್ಲೇ ಕಾಣಲಿರುವುದು ವಿಶೇಷವಾಗಿದೆ. ಚಂದ್ರ ಮತ್ತು ಸೂರ್ಯನ ನಡುವೆ ಭೂಮಿ ನಿಲ್ಲುತ್ತದೆ. ಹೀಗಾಗಿ, ಚಂದ್ರನ ಮೇಲೆ ಬೀಳುವ ಸೂರ್ಯನ ಕಿರಣಗಳನ್ನು ಭೂಮಿ ತಡೆಯೊಡ್ಡುತ್ತದೆ. ಇದರಿಂದ ಚಂದ್ರನ ಕಾಂತಿ ಕಡಿಮೆ ಆಗುತ್ತದೆ. ಭೂಮಿಯ ನೆರಳು ಬೀಳುವ ಚಂದ್ರನ ಮೇಲ್ಮೈ ಜಾಗವನ್ನು 'ಪೆನಂಬ್ರಲ್' ಎಂದು ಕರೆಯುತ್ತಾರೆ.

ಪ್ರಪಂಚದಾದ್ಯಂತದ ಖಗೋಳಶಾಸ್ತ್ರಜ್ಞರು ಜೂನ್ 5ರ ಚಂದ್ರ ಗ್ರಹಣವನ್ನು 'ಸ್ಟ್ರಾಬೆರಿ ಚಂದ್ರಗ್ರಹಣ' ಎಂದು ಕರೆದಿದ್ದಾರೆ. ಏಕೆಂದರೆ ಜೂನ್ ಹುಣ್ಣಿಮೆಯಂದು ಕಾಣುವ ಚಂದ್ರನನ್ನು ಸ್ಟ್ರಾಬೆರಿ ಚಂದ್ರ ಎಂದು ಕರೆಯಲಾಗುತ್ತದೆ.

ಶುಕ್ರವಾರ ಸಂಭವಿಸುವ ಗ್ರಹಣ ಪೂರ್ಣ ಅಥವಾ ಭಾಗಶಃ ಚಂದ್ರಗ್ರಹಣವಲ್ಲ, ನೆರಳು ಚಂದ್ರಗ್ರಹಣವಾಗಿರುತ್ತದೆ. ಆದ್ದರಿಂದ ಗ್ರಹಣ ಸಮಯದಲ್ಲಿ ದೇವಾಲಯ ಬಂದ್ ಮಾಡುವುದು, ದೇವರ ಜಪ ಮಾಡುವ ಮೂಲಕ ಎಚ್ಚರವಿರುವುದು, ಊಟ ಮಾಡದೆ ಇರುವುದು ಎಂಬ ಯಾವುದೇ ನಿರ್ಬಂಧ ಇರುವುದಿಲ್ಲ.

ಚಂದ್ರಗ್ರಹಣ ಜೂನ್​ 5ರ ರಾತ್ರಿ 11.16ಕ್ಕೆ ಆರಂಭಗೊಂಡು ತಡರಾತ್ರಿ 2.32ಕ್ಕೆ ಅಂತ್ಯವಾಗಲಿದೆ. ಭಾರತ ಸೇರಿದಂತೆ ಏಷ್ಯಾ, ಯುರೋಪ್, ಆಫ್ರಿಕಾ, ಆಸ್ಟ್ರೇಲಿಯಾ, ದಕ್ಷಿಣ ಅಮೆರಿಕಾ, ಪೆಸಿಫಿಕ್, ಹಿಂದೂ ಮಹಾಸಾಗರ ಮತ್ತು ಅಂಟಾರ್ಟಿಕಾದ ನಿವಾಸಿಗರು ಈ ಗ್ರಹಣ ಕಾಣಬಹುದು.

ಇದೇ ತಿಂಗಳ 21ರ ಭಾನುವಾರವನ್ನು ವರ್ಷದ ಅತಿ ದೊಡ್ಡ ದಿನ (longest day) ಎಂದು ಕರೆಯಲಾಗುತ್ತಿದ್ದು, ಅಂದೇ ಸೂರ್ಯಗ್ರಹಣ ಕೂಡ ಸಂಭವಿಸಲಿದೆ.

ABOUT THE AUTHOR

...view details