ಲಖನೌ (ಉತ್ತರ ಪ್ರದೇಶ): ಆನ್ಲೈನ್ ಶಿಕ್ಷಣಕ್ಕಾಗಿ ಆರಂಭಿಸಿರುವ ಮೊದಲ ಪೋರ್ಟಲ್ ಸ್ಲೇಟ್ (SLATE)ಗಾಗಿ ಮೊದಲ ಕಾಪಿರೈಟ್ ಹಾಗೂ ಟ್ರೇಡ್ಮಾರ್ಕ್ ಅನ್ನು ಲಖನೌ ವಿಶ್ವವಿದ್ಯಾಲಯ ಪಡೆದುಕೊಂಡಿದೆ.
ಕೊರೊನಾ ನಂತರದಲ್ಲಿ ವಿದ್ಯಾರ್ಥಿಗಳು ಶಾಲೆಗೆ ಬರಲಾಗದೇ ಮನೆಯಲ್ಲಿಯೇ ಉಳಿಯುವಂತಾದಾಗ ಲಖನೌ ವಿಶ್ವವಿದ್ಯಾಲಯವು ಹೊಸದೊಂದು ಆನ್ಲೈನ್ ಶಿಕ್ಷಣ ನೀಡುವ ಪೋರ್ಟಲ್ ಆರಂಭಿಸಿದ್ದು, ಈ ಪೋರ್ಟಲ್ಗೆ ಕಾಪಿರೈಟ್ ಹಕ್ಕುಗಳನ್ನು ಪಡೆದುಕೊಳ್ಳಲಾಗಿದೆ.
ವಿಶ್ವವಿದ್ಯಾಲಯ ನೂರು ವರ್ಷಗಳ ಇತಿಹಾಸದಲ್ಲೇ ಮೊದಲ ಬಾರಿಗೆ ಲಖನೌ ವಿಶ್ವವಿದ್ಯಾಲಯದ ಹೆಸರಿನಲ್ಲಿ ಕಾಪಿರೈಟ್ ನೋಂದಣಿಯಾಗಿದೆ ಎಂದು ವಿಶ್ವವಿದ್ಯಾಲಯದ ಕುಲಪತಿ ಎ.ಕೆ.ರಾಯ್ ಸಂತಸ ವ್ಯಕ್ತಪಡಿಸಿದ್ದಾರೆ.
ಆನ್ಲೈನ್ ಮಾದರಿಯ ಬೋಧನಾ ವ್ಯವಸ್ಥೆ ಲಾಕ್ಡೌನ್ ವೇಳೆ ಪರಿಹಾರವಾಗಿದ್ದು, ಇದು ಸಂಪೂರ್ಣ ಪರಿಹಾರ ನೀಡುವುದಿಲ್ಲ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
ಮುಂದಿನ ಭವಿಷ್ಯದಲ್ಲೂ ಕೂಡ ಈ ಮಾದರಿಯನ್ನು ಅಳವಡಿಸಿಕೊಳ್ಳಲಾಗುತ್ತದೆ. ಈ ಮೂಲಕ ದೂರದ ಸ್ಥಳಗಳಲ್ಲಿರುವ ವಿದ್ಯಾರ್ಥಿಗಳಿಗೆ ಶಿಕ್ಷಣ ನೀಡಲಾಗುತ್ತದೆ ಎಂದು ರಾಯ್ ವಿಶ್ವಾಸ ವ್ಯಕ್ತಪಡಿಸಿದ್ದು, ಸ್ಲೇಟ್ ಅನ್ನು ಅಳವಡಿಸಿಕೊಳ್ಳಬೇಕಾದರೆ ಯಾವುದೇ ವಿಶ್ವವಿದ್ಯಾಲಯ ನಮ್ಮ ಅನುಮತಿ ಪಡೆಯಬೇಕು ಎಂದಿದ್ದಾರೆ.