ಪೂರ್ವ ಲಡಾಖ್ನಲ್ಲಿ 100 ದಿನಗಳಿಗಿಂತಲೂ ಹೆಚ್ಚು ಸಮಯದಿಂದ ನಡೆಯುತ್ತಿರುವ ಪ್ರಕ್ಷುಬ್ಧ ವಾತಾವರಣದ ಬಳಿಕವೂ ಚೀನಾದ ಸೇನೆಯು ಯಥಾಸ್ಥಿತಿ ಪುನಃಸ್ಥಾಪನೆಗಾಗಿ ಭಾರತದ ಬೇಡಿಕೆಯನ್ನು ಒಪ್ಪಿಕೊಳ್ಳುವ ಮನಸ್ಸು ಮಾಡುವ ಯಾವುದೇ ಲಕ್ಷಣ ತೋರಿಸುತ್ತಿಲ್ಲ ಎಂಬುದು ಹೆಚ್ಚು ಸ್ಪಷ್ಟವಾಗುತ್ತಿದೆ. ವಾಸ್ತವಿಕ ನಿಯಂತ್ರಣ ರೇಖೆಯ (ಎಲ್‌ಎಸಿ) ಉದ್ದಕ್ಕೂ ಯಾವುದೇ ಸಂಭವನೀಯತೆಗಳನ್ನು ಎದುರಿಸಲು ದೇಶದ ಸಶಸ್ತ್ರ ಪಡೆಗಳು ಸಿದ್ಧವಾಗಿವೆ ಮತ್ತು ದೀರ್ಘಾವಧಿಯವರೆಗೆ ಅಂದರೆ ಕಠಿಣ ಚಳಿಗಾಲದ ತಿಂಗಳುಗಳುಲ್ಲೂ ಗಡಿ ರಕ್ಷಣೆಗೆ ಸನ್ನದ್ಧವಾಗಿದ್ದೇವೆ ಎಂದು ರಕ್ಷಣಾ ಇಲಾಖೆ ಮುಖ್ಯಸ್ಥರು ಸಂಸತ್ತಿನ ಸಾರ್ವಜನಿಕ ಖಾತೆಗಳ ಸಮಿತಿಗೆ ತಿಳಿಸಿದ ಹೇಳಿಕೆಯಲ್ಲಿ ಅಲ್ಲಿನ ಪರಿಸ್ಥಿತಿಯ ವಾಸ್ತವತೆಯು ಸ್ಪಷ್ಟವಾಗಿದೆ.
ಲಡಾಖ್‌ನಲ್ಲಿನ ಚಳಿಗಾಲದಲ್ಲಿಯೂ ಗಡಿ ರಕ್ಷಣೆಗೆ ಸನ್ನದ್ಧವಾಗಿದ್ದೇವೆ ಎಂದು ರಕ್ಷಣಾ ಮುಖ್ಯಸ್ಥರ ಉಲ್ಲೇಖವು ನಮ್ಮ ಪಟ್ಟಣಗಳು ಮತ್ತು ನಗರಗಳಲ್ಲಿ ನಾವು ಉಸಿರಾಡುವ ಅರ್ಧದಷ್ಟು ಆಮ್ಲಜನಕ ಪ್ರಮಾಣ ಇರುವ ಎತ್ತರದ ಘನೀಕರಿಸುವ ಪರಿಸ್ಥಿತಿಗಳಲ್ಲಿ ನಮ್ಮ ಸೈನಿಕರು ಹೋರಾಡುವ ಚಿತ್ರಣವನ್ನು ನಮ್ಮ ಕಣ್ಣ ಮುಂದೆ ತಂದಿಡುತ್ತದೆ. ಅಂತಹ ಅತ್ಯಂತ ಕಠಿಣ ಪ್ರದೇಶದಲ್ಲಿ ಎಲ್ಲವೂ ಹೆಪ್ಪುಗಟ್ಟಿರುವುದರಿಂದ ನೀರಿನಂತಹ ಮೂಲಭೂತ ಅವಶ್ಯಕತೆ ಕೂಡ ಪಡೆಯುವುದು ಕಷ್ಟ ಸಾಧ್ಯ. ಪ್ರತಿ ಚಳಿಗಾಲದಲ್ಲಿ ಐದರಿಂದ ಆರು ತಿಂಗಳವರೆಗೆ, ರೋಹ್ಟಾಂಗ್ ಮತ್ತು ಜೊಜಿ ಲಾ ಮೂಲಕ ಲಡಾಖ್‌ಗೆ ಹೋಗುವ ಎರಡೂ ರಸ್ತೆಗಳಲ್ಲಿ ಸಂಪೂರ್ಣ ಹಿಮಪಾತವಾಗುವುದರಿಂದ ಲಡಾಖ್ ಪ್ರದೇಶಕ್ಕೆ ದೇಶದ ಉಳಿದ ಭಾಗಗಳಿಂದ ಸಂಪರ್ಕ ಕಡಿತಗೊಳ್ಳಲಿದೆ.
ಚಳಿಗಾಲವು ಸೈನಿಕರಿಗೆ ಹೆಚ್ಚು ಸಂಕಷ್ಟ ನೀಡುವುದರಲ್ಲಿ ಯಾವುದೇ ಸಂಶಯವಿಲ್ಲ, ಆದರೆ, ಮಿಲಿಟರಿ ಯೋಜಕರಿಗೆ ನಿಜವಾದ ಸವಾಲು ಎಂದರೆ 'ರಸ್ತೆ ಮುಚ್ಚಿದ' ಲಡಾಖ್ ಪ್ರದೇಶಕ್ಕೆ ರಸ್ತೆ ಸಂಪರ್ಕ ಕಡಿತವಾಗುವ ಸಂದರ್ಭದಲ್ಲಿ ಲಡಾಖ್‌ನಲ್ಲಿನ ಸೈನಿಕರು ತಮಗೆ ಬೇಕಾದ ಎಲ್ಲ ಅಗತ್ಯ ವಸ್ತುಗಳನ್ನು ಸಂಪೂರ್ಣವಾಗಿ ಹೊಂದಿದ್ದಾರೆ ಎಂಬುದನ್ನು ಖಚಿತಪಡಿಸಿಕೊಳ್ಳುವುದು. ಇದು ಪ್ರತಿವರ್ಷ ಸೇನೆಯು ಕೈಗೊಳ್ಳುವ ಅತಿದೊಡ್ಡ ಲಾಜಿಸ್ಟಿಕ್ಸ್ ತಾಲೀಮುಗಳಲ್ಲಿ ಒಂದಾಗಿದೆ. ಇದನ್ನು ‘ಅಡ್ವಾನ್ಸ್ ವಿಂಟರ್ ಸ್ಟಾಕಿಂಗ್’ (ಎಡಬ್ಲ್ಯೂಎಸ್) ಎಂದು ಕರೆಯಲಾಗುತ್ತದೆ. ಲಡಾಖ್ ರಸ್ತೆಗಳ ಸಂಪರ್ಕ ಕಡಿತಗೊಂಡಾಗ ಆರು ತಿಂಗಳ ಅವಧಿಗೆ ಸೈನಿಕರಿಗೆ ಅಗತ್ಯವಿರುವ ಪ್ರತಿಯೊಂದು ವಸ್ತುವಿನ ಖರೀದಿ ಮತ್ತು ಸಾಗಣೆಯನ್ನು ಇದು ಒಳಗೊಂಡಿರುತ್ತದೆ.
ಭೀಕರ ಚಳಿಯ ಲಡಾಖ್ ಪರಿಸ್ಥಿತಿಯಲ್ಲಿ ಸೈನಿಕರ ಅಗತ್ಯಕ್ಕೆ ತಕ್ಕಂತೆ ಸಿದ್ಧತೆಗಳು ತಿಂಗಳ ಮುಂಚಿತವಾಗಿಯೇ ಪ್ರಾರಂಭವಾಗುತ್ತವೆ, ಹಲ್ಲುಜ್ಜುವ ಬ್ರಶ್ನಿಂದ ಬಟ್ಟೆ, ಟಿನ್ ಮಾಡಿದ ಆಹಾರ, ಪಡಿತರ, ಇಂಧನ, ಔಷಧಿಗಳು, ಮದ್ದುಗುಂಡು, ಸಿಮೆಂಟ್, ವಸತಿ ಸೌಕರ್ಯಗಳು ಇತ್ಯಾದಿಗಳವರೆಗೆ ಎಲ್ಲಾ ಸರಕುಗಳಿಗೆ ವಿವರವಾದ ಲೆಕ್ಕಾಚಾರಗಳನ್ನು ಮಾಡಲಾಗುತ್ತದೆ. ಗಡಿ ರಸ್ತೆಗಳ ಸಂಘಟನೆಗಳು ಲಡಾಖ್‌ಗೆ ಹೋಗುವ ಎರಡು ರಸ್ತೆಗಳಲ್ಲಿ ಹಿಮವನ್ನು ತೆರವುಗೊಳಿಸುವ ಕಾರ್ಯದಲ್ಲಿ ನಿರತರಾಗಿರುತ್ತವೆ. ಈ ಸಂದರ್ಭ ಪಠಾಣ್‌ಕೋಟ್ ಮತ್ತು ಜಮ್ಮುವಿನ ಸುತ್ತಮುತ್ತಲಿನ ಡಿಪೋಗಳಿಗೆ ಅಗತ್ಯ ವಸ್ತುಗಳು ಬರಲು ಪ್ರಾರಂಭಿಸುತ್ತವೆ. ಲಡಾಖ್‌ಗೆ ತೆರಳುವ ರಸ್ತೆ ಮುಕ್ತವೆಂದು ಘೋಷಿಸಿದ ತಕ್ಷಣ (ಮೇ ಆಸುಪಾಸಿನಲ್ಲಿ), ಮಳಿಗೆಗಳಿಂದ ಅಗತ್ಯ ಸರಕುಗಳನ್ನು ತುಂಬಿದ ಮೊದಲ ವಾಹನ ಲಡಾಖ್‌ಗೆ ಹೊರಡುತ್ತದೆ.
ಲೇಹ್ಗೆ ತೆರಳುವ ಮತ್ತು ವಾಪಸ್ ಆಗುವ ಪ್ರಯಾಣವು ಝೋಗಿ ಲಾ ರಸ್ತೆ ಮೂಲಕ ಸುಮಾರು 10 ದಿನಗಳು ಮತ್ತು ರೋಹ್ಟಾಂಗ್ ಮಾರ್ಗದ ಮೂಲಕ 14 ದಿನಗಳನ್ನು ತೆಗೆದುಕೊಳ್ಳುತ್ತದೆ. ರಾತ್ರಿಯಿಡೀ ಚಾಲಕರು ವಿಶ್ರಾಂತಿ ಪಡೆಯಲು ಎರಡು ಮಾರ್ಗಗಳಲ್ಲಿ ಸಾರಿಗೆ ಶಿಬಿರಗಳನ್ನು ಸ್ಥಾಪಿಸಲಾಗಿದೆ. ಎರಡು ವಾರಗಳ ಈ ಪ್ರಯಾಣದ ಸಮಯದಲ್ಲಿ, ಚಾಲಕನು ಪ್ರತಿ ರಾತ್ರಿ ಬೇರೆ ಸ್ಥಳದಲ್ಲಿ ಮಲಗುತ್ತಾನೆ ಮತ್ತು ಪ್ರವಾಸವನ್ನು ಪೂರ್ಣಗೊಳಿಸಿದ ನಂತರ, ಮತ್ತೊಂದು ಟ್ರಿಪ್ ಅನ್ನು ಮರು ಪ್ರಾರಂಭಿಸುವ ಮೊದಲು ಎರಡು ದಿನಗಳ ವಿಶ್ರಾಂತಿ ಪಡೆಯುತ್ತಾನೆ. ಅಂದಿನಿಂದ ಮುಂದಿನ ಆರು ತಿಂಗಳುಗಳವರೆಗೆ ಇದು ಅವರ ದಿನಚರಿಯಾಗಲಿದೆ. ಕಷ್ಟಕರವಾದ ಪರ್ವತದ ರಸ್ತೆಗಳಲ್ಲಿ ಒಂದು ಋತುವಿನಲ್ಲಿ ಸುಮಾರು ಹತ್ತು ಸಾವಿರ ಕಿಲೋಮೀಟರ್ ನಷ್ಟು ವಾಹನ ಸಂಚಾರ ಆಗುತ್ತದೆ. ಮಿಲಿಟರಿ ಸಾರಿಗೆಯನ್ನು ಬಾಡಿಗೆ ಸಿವಿಲ್ ಟ್ರಕ್‌ಗಳು ಮತ್ತು ಇಂಡಿಯನ್ ಆಯಿಲ್ ಕಾರ್ಪೊರೇಶನ್ ಇಂಧನ ಟ್ಯಾಂಕರ್‌ಗಳು ಪೂರೈಸುತ್ತವೆ.