ಮಹಾರಾಷ್ಟ್ರ/ಸಾಂಘ್ವಿ:ಗೂಗಲ್ ಟ್ರಾನ್ಸ್ಲೇಶನ್ ಯಡವಟ್ಟಿನಿಂದಾಗಿ ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ಯೋಜನೆಯಡಿ ಸರ್ಕಾರದಿಂದ ಹಣ ಪಡೆಯಬೇಕಿದ್ದ ರೈತರು ಫಜೀತಿಗೆ ಸಿಲುಕುವಂತಾಗಿದೆ.
ಹೌದು ಮಹಾರಾಷ್ಟ್ರದ ಸಾಂಘ್ವಿ ಜಿಲ್ಲೆಯ ಕೆಲವು ರೈತರು ತಮ್ಮ ಹೆಸರನ್ನ ಕಿಸಾನ್ ಪಿಎಂ ಯೋಜನೆಗೆ ಸೇರಿಸುವ ಸಮಯದಲ್ಲಿ ಮರಾಠಿಯಿಂದ ಇಂಗ್ಲಿಷ್ ಭಾಷೆಗೆ ಭಾಷಾಂತರಗೊಂಡ ಪರಿಣಾಮ, ಉತ್ತಮ್ ಎಂಬುವರ ಹೆಸರು 'ಬೆಸ್ಟ್' ಎಂದಾಗಿದೆ. ಅದೇ ರೀತಿ ಸುತಾರ್ ಎಂಬುವವರ ಹೆಸರು 'ಕಾರ್ಪೆಂಟರ್' ಎಂದಾಗಿದೆ. ಅಷ್ಟೇ ಅಲ್ಲ ಭಗವಾನ್ ಎಂಬ ಮತ್ತೊಬ್ಬ ರೈತನ ಹೆಸರು 'ಲಾರ್ಡ್' ಎಂದಾಗಿದ್ದು, ಇದ್ರಿಂದ ಫಲಾನುಭವಿಗಳ ಖಾತೆಗೆ ಕೃಷಿ ಹಣ ಜಮೆಯಾಗಲಿಲ್ಲ.
ಈ ಬಗ್ಗೆ ಪ್ರತಿಕ್ರಿಯಿಸಿರುವ ಜಿಲ್ಲಾಡಳಿತ ಯೋಜನೆಯ ಪ್ರಥಮ ಹಂತದಲ್ಲಿ ಹೆಸರು ನೋಂದಣಿ ವೇಳೆ ಈ ಪ್ರಮಾದ ಜರುಗಿದ್ದು, ಗೂಗಲ್ ಅನುವಾದದಿಂದ ಈ ರೀತಿ ಹೆಸರುಗಳು ತಪ್ಪಾಗಿ ನಮೂದಾಗಿವೆ. ಯೋಜನೆಯ ಅರ್ಹ ಫಲಾನುಭವಿ ರೈತರ ಹೆಸರಿನ ಪಟ್ಟಿಯನ್ನು ಮರಾಠಿ ಭಾಷೆಯಲ್ಲಿ ತಯಾರಿಸಿ ಗ್ರಾಮಸೇವಕರು ಕಂದಾಯ ಇಲಾಖೆಗೆ ನೀಡಿದ್ದಾರೆ. ಈ ವೇಳೆ ಅಲ್ಲಿನ ಅಧಿಕಾರಿಗಳು ರೈತರ ಹೆಸರುಗಳ ಉದ್ದುದ್ದ ಇರುವ ಕಾರಣ ಗೂಗಲ್ ಟ್ರಾನ್ಸ್ಲೇಟರ್ ಮೊರೆ ಹೋಗಿದ್ದು, ಇದರಿಂದ ಈ ರೀತಿ ಹೆಸರುಗಳು ತಪ್ಪಾಗಿ ನಮೂದಾಗಿವೆ ಎಂದು ಸಾಂಘ್ವಿ ಜಿಲ್ಲೆಯ ಪಿಎಂ ಕಿಸಾನ್ ಯೋಜನೆಯ ಸಂಯೋಜಕರಾದ ಯಾಸಿನ್ ಪಾಟೀಲ್ ಸ್ಪಷ್ಟಪಡಿಸಿದ್ದಾರೆ. ಅಲ್ಲದೇ ಇದು ಸಂಪೂರ್ಣವಾಗಿ ಡಾಟಾ ಎಂಟ್ರಿಯಿಂದ ಉಂಟಾದ ಸಮಸ್ಯೆ ಇದನ್ನು ಶೀಘ್ರ ಬಗೆಹರಿಸಲಾಗುವುದು ಎಂದು ಅವರು ತಿಳಿಸಿದ್ದಾರೆ. ಇದೇ ವೇಳೆ ಉಳಿದ ರೈತರಿಗೆ ಬ್ಯಾಂಕ್ ಖಾತೆ ಸಂಖ್ಯೆ ಮತ್ತು ಆಧಾರ್ ವಿವರಗಳನ್ನು ಬಳಸಿಕೊಂಡು ಹಣ ಜಮಾವಣೆ ಮಾಡಲಾಗಿದೆ ಎಂದು ಅವರು ತಿಳಿಸಿದ್ದಾರೆ.
ಈ ಬಗ್ಗೆ ಪ್ರತಿಕ್ರಿಯಿಸಿರುವ ರೈತ ಉತ್ತಮ್ ನನ್ನ ಹೆಸರು ಬೆಸ್ಟ್ ಎಂದಾಗಿತ್ತು. ಹೀಗಾಗಿ ನನಗೆ ಹಣ ಪಡೆಯಲು ಸಾಧ್ಯವಾಗಿರಲಿಲ್ಲ, ಇನ್ನು ಈ ಘಟನೆ ಬೆಳಕಿಗೆ ಬಂದ ನಂತರ ಹೆಸರು ಸರಿಪಡಿಸಲಾಗಿದ್ದು, ನನ್ನ ಖಾತೆಗೆ ಹಣ ಜಮಾವಣೆಯಾಗಿದೆ ಎಂದು ತಿಳಿಸಿದ್ದಾರೆ. ಒಟ್ಟಿನಲ್ಲಿ ಗೂಗಲ್ ಅನುವಾದದ ಎಡವಟ್ಟಿನಿಂದ ನಾಲ್ಕೈದು ಫಲಾನುಭವಿ ರೈತರು ಈ ರೀತಿ ಫಜೀತಿ ಪಡುವಂತಾಗಿದ್ದು, ತಾಂತ್ರಿಕತೆಯ ಪರಿಣಾಮ ಅನ್ನದಾತನನ್ನು ಕೂಡ ಸಂಕಷ್ಟಕ್ಕೆ ದೂಡಿದೆ.
ಇನ್ನು ಈ ಪಿಎಂ ಕಿಸಾನ್ ಯೋಜನೆಯನ್ನು ಸಣ್ಣ ರೈತರ ಅನುಕೂಲಕ್ಕಾಗಿ ಜಾರಿಗೊಳಿಸಲಾಗಿದ್ದು, ಈ ಯೋಜನೆಯಡಿ ವರ್ಷಕ್ಕೆ 6 ಸಾವಿರ ರೂಪಾಯಿಗಳನ್ನು, 2000 ರೂ ನಂತೆ 3 ಕಂತುಗಳಲ್ಲಿ ಅರ್ಹ ಫಲಾನುಭವಿ ರೈತರ ಖಾತೆಗೆ ಜಮೆ ಮಾಡಲಾಗುತ್ತದೆ.