ನವದೆಹಲಿ: ವಾಸನೆ ಮತ್ತು ರುಚಿ ಗೊತ್ತಾಗದಿರುವುದನ್ನೂ ಕೋವಿಡ್-19 ರೋಗ ಲಕ್ಷಣಗಳ ಪಟ್ಟಿಗೆ ಸೇರಿಸಲಾಗಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಶನಿವಾರ ಬಿಡುಗಡೆ ಮಾಡಿದ ಪರಿಷ್ಕೃತ ಕ್ಲಿನಿಕಲ್ ಮ್ಯಾನೇಜ್‌ಮೆಂಟ್ ಪ್ರೋಟೋಕಾಲ್ನಲ್ಲಿ ತಿಳಿಸಿದೆ.
ಕೊರೊನಾ ಸೋಂಕಿಗೆ ತುತ್ತಾಗುತ್ತಿದ್ದ ರೋಗಿಗಳು ಜ್ವರ, ಕೆಮ್ಮು, ಆಯಾಸ, ಉಸಿರಾಟದ ತೊಂದರೆ, ಸ್ನಾಯುಗಳಲ್ಲಿ ನೋವು, ಶೀತ, ಗಂಟಲು ನೋವು ಮತ್ತು ಅತಿಸಾರದಂತಹ ಲಕ್ಷಣಗಳನ್ನು ಹೊಂದಿದ್ದರು. ಇದೀಗ ವಾಸನೆ ಮತ್ತು ರುಚಿ ಗೊತ್ತಾಗದಿರುವ ಬಗ್ಗೆಯೂ ದೂರಿದ್ದಾರೆ ಎಂದು ಸಚಿವಾಲಯ ತಿಳಿಸಿದೆ.
ವಾಸನೆ ಅಥವಾ ರುಚಿ ಗೊತ್ತಾಗದಿರುವುದೂ ಕೊರೊನಾ ಲಕ್ಷಣ ಅಮೆರಿಕದ ರಾಷ್ಟ್ರೀಯ ಸಾರ್ವಜನಿಕ ಆರೋಗ್ಯ ಸಂಸ್ಥೆ ಸೆಂಟರ್ಸ್ ಫಾರ್ ಡಿಸೀಸ್ ಕಂಟ್ರೋಲ್ ಅಂಡ್ ಪ್ರಿವೆನ್ಷನ್ (ಸಿಡಿಸಿ), ರುಚಿ ಅಥವಾ ವಾಸನೆ ಗೊತ್ತಾಗದಿರುವುದೂ ಕೋವಿಡ್ -19 ರೋಗ ಲಕ್ಷಣಗಳ ಪಟ್ಟಿಗೆ ಸೇರಿಸಿತ್ತು.
ಇಂಟಿಗ್ರೇಟೆಡ್ ಹೆಲ್ತ್ ಇನ್ಫಾರ್ಮೇಷನ್ ಪ್ಲಾಟ್‌ಫಾರ್ಮ್ ಮತ್ತು ಇಂಟಿಗ್ರೇಟೆಡ್ ಡಿಸೀಸ್ ಸರ್ವೈಲೆನ್ಸ್ ಮಾಹಿತಿಯ ಪ್ರಕಾರ, 15,366 ಕೊರೊನಾ ರೋಗಿಗಳಲ್ಲಿ ಜೂನ್ 11ರವರೆಗೆ ವರದಿಯಾದ ರೋಗ ಲಕ್ಷಣಗಳ ವಿವರ ನೋಡುವುದಾದ್ರೆ ಶೇಕಡಾ 27ರಷ್ಟು ಮಂದಿಯಲ್ಲಿ ಜ್ವರದ ಲಕ್ಷಣ ಕಾಣಿಸಿಕೊಂಡಿದೆ. 21ರಷ್ಟು ಸೋಂಕಿತರು ಕೆಮ್ಮು, 10ರಷ್ಟು ಸೋಂಕಿತರು ಗಂಟಲು ನೋವು, 8ರಷ್ಟು ಸೋಂಕಿತರು ಉಸಿರಾಟದ ತೊಂದರೆ, 7ರಷ್ಟು ಸೋಂಕಿತರು ದೌರ್ಬಲ್ಯ, 3ರಷ್ಟು ಸೋಂಕಿತರು ನೆಗಡಿ ಮತ್ತು 24ರಷ್ಟು ಸೋಂಕಿತರು ಇತರೆ ಲಕ್ಷಣಗಳನ್ನು ಹೊಂದಿದ್ದರು ಎಂದು ತಿಳಿಸಲಾಗಿದೆ.