ಪಾಟ್ನ(ಬಿಹಾರ): 17 ಸಾರ್ವತ್ರಿಕ ಲೋಕಸಭಾ ಚುನಾವಣೆಯಲ್ಲಿ ಮೋದಿ ನೇತೃತ್ವದ ಎನ್ಡಿಎ ಪಕ್ಷ ಪ್ರಚಂಡ ಬಹುಮತ ಸಾಧಿಸಿದ್ದು, ಬಹುತೇಕ ರಾಜ್ಯಗಳಲ್ಲಿ ಹೆಚ್ಚು ಸ್ಥಾನಗಳನ್ನ ಗೆಲ್ಲುವಲ್ಲಿ ಯಶಸ್ವಿಯಾಗಿದೆ.
ಜೆಡಿ(ಯು) ಪಕ್ಷದೊಂದಿಗೆ ಮೈತ್ರಿ ಮಾಡಿಕೊಂಡು ಬಿಹಾರದಲ್ಲಿ ಲೋಕಸಭಾ ಚುನಾವಣೆ ಎದುರಿಸಿದ ಬಿಜೆಪಿ ಪಕ್ಷ ಲಾಲೂ ಪಕ್ಷವನ್ನ ಬುಡಮೇಲು ಮಾಡಿದೆ. ಎಷ್ಟರ ಮಟ್ಟಿಗೆಂದರೆ ಆರ್ಜೆಡಿ ಪಕ್ಷ ಒಂದೇ ಒಂದು ಕ್ಷೇತ್ರದಲ್ಲಿ ಜಯಗಳಿಸಲು ಸಾಧ್ಯವಾಗಿಲ್ಲ.
ಲಾಲು ಪ್ರಸಾದ್ ಯಾದವ್ ಪುತ್ರ ತೇಜಸ್ವಿ ಯಾದವ್ ನೇತೃತ್ವದ ಆರ್ಜೆಡಿ ಪಕ್ಷ, ಕಾಂಗ್ರೆಸ್ ಮತ್ತು ಇತರೆ ಪಕ್ಷಗಳೊಂದಿಗೆ ಮೈತ್ರಿ ಮಾಡಿಕೊಂಡು 20 ಕ್ಷೇತ್ರಗಳಲ್ಲಿ ಸ್ಪರ್ಧೆ ಮಾಡಿತ್ತು. ಆದರೆ, ಒಂದೂ ಕ್ಷೇತ್ರದಲ್ಲೂ ಗೆಲುವು ಸಾಧಿಸಲಾಗಲಿಲ್ಲ. 2008 ರಿಂದ ರಾಷ್ಟ್ರೀಯ ಪಕ್ಷವಾಗಿ ಗುರ್ತಿಸಿಕೊಂಡಿದ್ದ ಆರ್ಜೆಡಿ ಪಕ್ಷ 1998 ತಾನು ಸ್ಪರ್ಧೆ ಮಾಡಿದ್ದ ಮೊದಲ ಚುನಾವಣೆಯಲ್ಲೇ 17 ಸ್ಥಾನ ಗೆದ್ದಿತ್ತು.
ಕಾಂಗ್ರೆಸ್ ಕೂಡ ಬಿಹಾರದಲ್ಲಿ ಹೀನಾಯ ಸ್ಥಿತಿ ತಲುಪಿದ್ದು, ಕೇವಲ ಒಂದು ಸ್ಥಾನ ಗೆಲ್ಲುವಲ್ಲಿ ಯಶಸ್ವಿಯಾಗಿದೆ. ಒಟ್ಟು 40 ಸ್ಥಾನಗಳಲ್ಲಿ ಎನ್ಡಿಎ ಮೈತ್ರಿಕೂಟ 39 ಸ್ಥಾನಗಳಲ್ಲಿ ಗೆಲುವು ದಾಖಲಿಸಿದೆ.