ಹೈದರಾಬಾದ್:ಕೊರೊನಾ ವೈರಸ್ನ ಕೇಂದ್ರ ಸ್ಥಾನವಾಗಿದ್ದ ವುಹಾನ್ನಲ್ಲಿ ಸೋಂಕಿನ ಬಾಧೆಯನ್ನು ಕಡಿಮೆ ಮಾಡಿಕೊಂಡ ಚೀನಾ ಇದೀಗ 9 ವಾರಗಳ ನಂತರ ಹುಬೇ ಪ್ರಾಂತ್ಯದಿಂದ ಜನರಿಗೆ ಹೊರ ಹೋಗಲು ಮತ್ತು ಒಳಬರಲು ವಿಧಿಸಿದ್ದ ಎಲ್ಲಾ ಸಾರಿಗೆ ನಿರ್ಬಂಧಗಳನ್ನು ರದ್ದುಪಡಿಸಿದೆ. ಸೆಂಟ್ರಲ್ ಹುಬೇ ಪ್ರಾಂತ್ಯದಲ್ಲಿ 56 ದಶಲಕ್ಷಕ್ಕಿಂತಲೂ ಹೆಚ್ಚು ಜನರ ಮೇಲೆ ಮೂರು ತಿಂಗಳ ಕಾಲ ವಿಧಿಸಿದ್ದ ಲಾಕ್ಡೌನನ್ನು ರದ್ದುಪಡಿಸಲು ಚೀನಾ ನಿರ್ಧರಿಸಿದೆ. ಒಂದೊಮ್ಮೆ ಚೀನಾ ಈ ರೀತಿಯಲ್ಲಿ ನಿರ್ಬಂಧ ಸಡಿಲಿಸಿದರೆ ಹೊಸ ಕೊರೊನಾ ಪ್ರಕರಣಗಳೇನಾದರೂ ಬರುತ್ತವೆಯೇ ಎಂಬ ಗುಮಾನಿ ಆತಂಕದಿಂದ ವಿಜ್ಞಾನಿಗಳು ಮತ್ತು ಇತರೆಲ್ಲಾ ದೇಶಗಳು ಸೂಕ್ಷ್ಮವಾಗಿ ಗಮನಿಸುತ್ತಿವೆ. ಚೀನಾದಲ್ಲಿ ಬಹಳ ಕಡಿಮೆ ಸಂಖ್ಯೆಯ ಕೊರೊನಾ ಪಾಸಿಟಿವ್ ಪ್ರಕರಣಗಳು ಕಂಡು ಬಂದಿರುವ ಹಿನ್ನೆಲೆಯಲ್ಲಿ ಇದುವರೆಗೂ ಈ ಆತಂಕಗಳಿಗೆ ಯಾವುದೇ ಆಧಾರ ಸಿಕ್ಕಿಲ್ಲ.
“ಲಾಕ್ ಡೌನ್ನನ್ನು ಸಡಿಲಗೊಳಿಸಲು ಇದು ಸರಿಯಾದ ಸಮಯ ಎನಿಸುತ್ತದೆ. ಆದರೆ ಇದೇ ವೇಳೆಗೆ ನಾವು ಎರಡನೆಯ ಸುತ್ತಿನ ಸೋಂಕಿನ ಕುರಿತು ಸಹ ಮುಂಜಾಗ್ರತೆ ವಹಿಸಬೇಕಾಗುತ್ತದೆ ಎನ್ನುತ್ತಾರೆ ಹಾಂಗ್ ಕಾಂಗ್ ವಿವಿಯ ಎಪಿಡರ್ಮಾಲಜಿಸ್ಟ್ ಬೆನ್ ಕೌಲಿಂಗ್. ವುಹಾನ್ ಪಟ್ಟಣದಲ್ಲಿ ಕೊರೊನಾ ಸೋಂಕು ಆತಂಕಕಾರಿ ಮಟ್ಟದಲ್ಲಿ ಹರಡಿದಾಗ ಇಡೀ ಪಟ್ಟಣವನ್ನು ಸಂಪೂರ್ಣ ಲಾಕ್ ಡೌನ್ ಮಾಡಲಾಯಿತು. ಚೀನಾವು ಈ ಮಾರಣಾಂತಿಕ ವೈರಸ್ ಹರಡುವುದನ್ನು ತಡೆಯಲು ತನ್ನ ಗಡಿಯ ಒಳಗೆ ಪ್ರಯಾಣ ಮಾಡುವುದನ್ನು ನಿರ್ಬಂಧಿಸಿ ಬಹುತೇಕ ಉದ್ಯಮಗಳು, ಶಾಲೆಗಳು ಮತ್ತು ವಿಶ್ವವಿದ್ಯಾಲಯಗಳು ಬಾಗಿಲು ಹಾಕುವಂತೆ ಮಾಡಿತು, ತನ್ನ ಜನರಿಗೆ ಮನೆಯಲ್ಲೇ ಇರಲು ತಿಳಿಸಿತು.
ಈಗ ಚೀನಾ ಲಾಕ್ ಡೌನ್ ಸಡಿಲಗೊಳಿಸುತ್ತಿದ್ದರೂ ಅದು ವ್ಯಾಪಕ ರೀತಿಯ ವೈದ್ಯಕೀಯ ತಪಾಸಣೆಗಳನ್ನು ಕೈಗೊಳ್ಳುತ್ತಿದೆಯಲ್ಲದೇ ಸೋಂಕಿತರು ಸಂಪರ್ಕಸಿರುವವರ ಜಾಡು ಹಿಡಿದು ಗುರುತಿಸಿ ಸೂಕ್ತ ಜಾಗೃತೆ ವಹಿಸಿ ಮತ್ತೆ ಕೊರೊನಾ ವೈರಸ್ ಹರಡಂತೆ ನೋಡಿಕೊಳ‍್ಳುತ್ತಿದೆ. ಜನರು ಸಾಮಾಜಿಕ ಅಂತರವನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆಯೂ ಮಾಡುತ್ತಿದೆ.
ಹೊಸ ಕೊರೊನಾ ಪ್ರಕರಣಗಳು ದೇಶಕ್ಕೆ ಆಮದಾಗದ ರೀತಿಯಲ್ಲಿ ಚೀನಾ ತನ್ನ ಗಡಿಗಳನ್ನು ಬಂದೋಬಸ್ತ್ ಮಾಡಿಕೊಂಡಿದೆ. ಹೊರ ದೇಶದಲ್ಲಿದ್ದು ತಮ್ಮ ದೇಶಕ್ಕೆ ಮರಳುತ್ತಿರುವ ಚೀನಾ ಪ್ರಜೆಗಳನ್ನು ಕಡ್ಡಾಯವಾಗಿ 14 ದಿನಗಳ ಕಾಲ ಕ್ವಾರಂಟೈನ್ನಲ್ಲಿ ಇಡಲಾಗುತ್ತಿದೆ. ಚೀನಾ ತಾನು ಅನುಸರಿಸಿದ ಆಕ್ರಮಣಕಾರಿ ನೀತಿಯಿಂದಾಗಿ ವೈರಸ್ ಹರಡುವಿಕೆಯನ್ನು ನಿಯಂತ್ರಿಸಲು ಸಾಧ್ಯವಾಯಿತು ಎಂದು ಸಂಶೋಧಕರು ಅಭಿಪ್ರಾಯಪಟ್ಟಿದ್ದಾರೆ. ಸಾಮಾಜಿಕ ಅಂತರ ಕಾಯುವ ಕ್ರಮಗಳು, ತೀವ್ರತರದ ವೈದ್ಯಕೀಯ ತಪಾಸಣೆ ಮತ್ತು ಸೋಂಕಿತ ಜನರನ್ನು ಪ್ರತ್ಯೇಕಗೊಳಿಸುವುದು ಇವೆಲ್ಲವೂ ಸೋಂಕು ಮತ್ತಷ್ಟು ಹರಡುವುದನ್ನು ಹತೋಟಿಗೆ ತಂದವು.
ಇಟಲಿ ಮತ್ತು ಸ್ಪೇನ್ ದೇಶಗಳು ಕೇವಲ ಸಾಮಾಜಿಕ ಅಂತರದ ಮೇಲಷ್ಟೇ ಗಮನ ನೀಡಿ ವೈರಸ್ ಹರಡುವಿಕೆಯನ್ನು ನಿಧಾನಗೊಳಿಸುವುದಕ್ಕೆ ಮಾತ್ರ ಪ್ರಾಮುಖ್ಯತೆ ನೀಡಿವೆ. ಆದರೆ ರೋಗವನ್ನು ಸಂಪೂರ್ಣ ನಿರ್ಮೂಲನೆ ಮಾಡಲು ಬೇಕಾದ ತೀವ್ರತರದ ಪರೀಕ್ಷೆ, ತಪಾಸಣೆ ಮತ್ತು ಸಂಪರ್ಕಗಳ ಜಾಡುಹಿಡಿದು ಗುರುತಿಸಲು ಗಮನ ನೀಡದೇ ಹೋದ ಕಾರಣ ಆ ದೇಶಗಳ ಜನರು ಸಹಜ ಸ್ಥಿತಿಗೆ ಮರಳಲು ಬಹಳ ಕಷ್ಟವೇ ಆಗಬಹುದು ಎನ್ನುತ್ತಾರೆ ಕೌಲಿಂಗ್.
ಇಷ್ಟಾಗಿಯೂ ಚೀನಾದಲ್ಲಿ ಹೊಸ ಸುತ್ತಿನ ಸೋಂಕು ಹರಡುವ ಸಾಧ್ಯತೆಯೂ ಬಹಳ ಇದೆ. ಯಾಕೆಂದರೆ ಈ ವೈರಸ್ ಬಹಳ ಸಾಂಗವಾಗಿ ಜನರಿಂದ ಜನರಿಗೆ ಹರಡುತ್ತದಲ್ಲದೇ ಕೆಲವು ಸೋಂಕುಗಳು ಪತ್ತೆಯೇ ಆಗಿರುವುದಿಲ್ಲ ಎಂಬುದು ಹಾಂಕಾಂಗ ವಿವಿಯ ಸೋಂಕು ರೋಗ ವಿಭಾಗದ ಸಂಶೋಧಕರಾದ ಗೇಬ್ರಿಯೆಲ್ ಲೀಯುಂಗ್ ಅವರ ಅಭಿಮತ. ಒಂದು ಸಲದ ಲಾಕ್ ಡೌನ್ ಸಾಲದೆಯೂ ಹೋಗಬಹುದು. ವೈರಸ್ ಹತ್ತಿಕ್ಕಲು ತೀವ್ರ ಪ್ರಯತ್ನಗಳು ಮತ್ತೆ ಮತ್ತೆ ನಡೆಯಬೇಕಾಗಬಹುದು ಎನ್ನುತ್ತಾರೆ ಅವರು.