ಟ್ಯುಟಿಕೋರಿನ್( ತಮಿಳುನಾಡು):ಲಾಕ್‌ಡೌನ್ ವ್ಯವಸ್ಥೆ ಅದೆಷ್ಟೋ ಐಟಿಬಿಟಿ ಕಂಪನಿಗಳು, ಬಡವರು, ಕೂಲಿ ಕಾರ್ಮಿಕರು, ರೈತರಿಗೆ ಅಪಾರ ತೊಂದರೆಯನ್ನು ಉಂಟುಮಾಡಿದೆ. ಆದರೆ , ಪ್ರಸ್ತುತ ಸನ್ನಿವೇಶದಲ್ಲಿ ಇದು ಅನಿವಾರ್ಯ. ಆದರೆ ಉಪ್ಪು ಉದ್ಯಮದ ಮೇಲೂ ಕೊರೊನಾ ಕರಿಛಾಯೆ ಆವರಿಸಿಕೊಂಡಿದೆ.
ಲಾಕ್‌ಡೌನ್‌ನಿಂದ ಸರಕುಗಳ ಉತ್ಪಾದನೆ, ಸಾರಿಗೆ ಸೌಲಭ್ಯ ನಿಲ್ಲಿಸಿದ್ದರಿಂದ ತಮಿಳುನಾಡಿನ ಉಪ್ಪು ಕಾರ್ಮಿಕರ ಮೇಲೆ ತೀವ್ರ ಪರಿಣಾಮ ಬೀರಿದೆ. ದೇಶದ ಈ ಪರಿಸ್ಥಿತಿಯಿಂದ ಉಪ್ಪು ಉದ್ಯಮವು ಸಂಪೂರ್ಣವಾಗಿ ಕುಂಠಿತಗೊಂಡಿದೆ.
ಉಪ್ಪು ಉದ್ಯಮದ ಮೇಲೂ ಕೊರೊನಾ ಕರಿಛಾಯೆ ಉಪ್ಪು ಅತ್ಯಗತ್ಯ ವಸ್ತುವಾಗಿರುವುದರಿಂದ ಲಾಕ್‌ಡೌನ್ ಮಧ್ಯೆ ಉತ್ಪಾದನಾ ಪ್ರಕ್ರಿಯೆಗೆ ವಿನಾಯಿತಿ ನೀಡಬೇಕು ಎಂದು ಉಪ್ಪು ಕಾರ್ಮಿಕರು ಒತ್ತಾಯಿಸಿದ್ದಾರೆ. ಉಪ್ಪು ಉತ್ಪಾದನಾ ವಲಯವು ಈಗಾಗಲೇ ತನ್ನ ದಿನನಿತ್ಯದ ಕಾರ್ಯಚಟುವಟಿಕೆಯಲ್ಲಿ ಸುರಕ್ಷಿತತೆಯನ್ನು ಅಳವಡಿಸಿಕೊಂಡಿದೆ. ಏಪ್ರಿಲ್ ನಿಂದ ಜುಲೈವರೆಗಿನ ಗರಿಷ್ಠ ಬೇಸಿಗೆಯ ತಿಂಗಳುಗಳಲ್ಲಿ ಮಾತ್ರ ಉಪ್ಪನ್ನು ಉತ್ಪಾದಿಸಬಹುದು .ಆದರೆ, ಈಗ ಕೊರೊನಾ ಪರಿಣಾಮ ಲಾಕ್‌ಡೌನ್ ಮಾಡಿರುವುದರಿಂದ ಉಪ್ಪು ಉತ್ಪಾದನೆ ಮೇಲೆ ತೀವ್ರ ಪರಿಣಾಮ ಬೀರಲಿದೆ. ವಾರ್ಷಿಕ ಆದಾಯದ ಮೇಲೂ ಪರಿಣಾಮ ಬೀರುವುದರಿಂದ ಕಾರ್ಮಿಕರು ಸಂಕಷ್ಟಕ್ಕೆ ಒಳಗಾಗಿದ್ದಾರೆ.
ಉಪ್ಪು ತಯಾರಕರಾದ ಪೇಚಿಮುತ್ತು ಈ ಬಗ್ಗೆ ಮಾತನಾಡಿದ್ದು, ಕೊರೊನಾ ಸೋಂಕಿನ ಬಗ್ಗೆ ಹಾಗೂ ಸಾಮಾಜಿಕ ಅಂತರದ ಬಗ್ಗೆ ಈಗಾಗಲೇ ಜನರು ಎಲ್ಲವನ್ನು ತಿಳಿದುಕೊಂಡಿದ್ದಾರೆ. ಈ ಹಿನ್ನೆಲೆ ಲಾಕ್‌ಡೌನ್ ಪ್ರಮವನ್ನು ಸ್ವಲ್ಪಮಟ್ಟಿಗೆ ಸಡಿಲಿಸಿದರೆ ಕಾರ್ಮಿಕರು ಜೀವನ ನಡೆಸಬಹುದು. ಅಲ್ಲದೆ, ಉಪ್ಪಿನ ಕೊರತೆಯನ್ನು ನೀಗಬಹುದು ಎಂದು ಹೇಳಿದರು.
ಉಪ್ಪಿನ ಮುಕ್ತ ಉತ್ಪಾದನೆ ಮತ್ತು ದೊಡ್ಡ ಟ್ರಕ್‌ಗಳಲ್ಲಿ ಈ ಉಪ್ಪನ್ನು ವಿವಿಧ ಸ್ಥಳಗಳಿಗೆ ಸಾಗಿಸಲು ಸರ್ಕಾರ ಅನುಮತಿ ನೀಡಬೇಕು. ಈ ರೀತಿ ಮಾಡಿದರೆ, ನನ್ನಂತಹ ಉಪ್ಪು ತಯಾರಕರು ನಮ್ಮ ನೌಕರರ ಸಾಮಾಜಿಕ ಅಂತರ ಮತ್ತು ಸುರಕ್ಷತಾ ಮಾನದಂಡಗಳ ಜವಾಬ್ದಾರಿಯನ್ನು ತೆಗೆದುಕೊಳ್ಳುತ್ತಾರೆ ಎಂದರು. ಇನ್ನು ಸುಮಾರು 60,000 ಜನರು ಈ ಉದ್ಯಮವನ್ನು ಅವಲಂಬಿಸಿದ್ದಾರೆ. ಇದರಲ್ಲಿ 30,000 ಜನರು ಉಪ್ಪು ಉತ್ಪಾದಿಸುವ ಕ್ಷೇತ್ರದಲ್ಲಿ ತೊಡಗಿಸಿಕೊಂಡಿದ್ದಾರೆ ಮತ್ತು 25,000 ಜನರು ಲಾಜಿಸ್ಟಿಕ್ಸ್ ಮತ್ತು ಇತರ ಸಂಬಂಧಿತ ಉದ್ಯೋಗಗಳಲ್ಲಿ ತೊಡಗಿಸಿಕೊಂಡಿದ್ದಾರೆ. 25 ಸಾವಿರ ಎಕರೆಗಿಂತ ಹೆಚ್ಚಿನ ಪ್ರದೇಶದಲ್ಲಿ ಉಪ್ಪು ಉತ್ಪಾದನ ಕಾರ್ಯ ನಡೆಯುತ್ತದೆ ಎಂದು ಮಾಹಿತಿ ನೀಡಿದ್ದಾರೆ.
ಗುಜರಾತ್ ನಂತರ ಭಾರತದಲ್ಲಿ ಎರಡನೇ ಅತಿ ದೊಡ್ಡ ಉಪ್ಪು ಉತ್ಪಾದನೆ ಕೇಂದ್ರ ತಮಿಳುನಾಡು. ದೇಶದ ಒಟ್ಟು ಉಪ್ಪು ಉತ್ಪಾದನೆಯಲ್ಲಿ ಶೇ 12 ರಷ್ಟು ರಾಜ್ಯ ಕೊಡುಗೆ ಇರುತ್ತದೆ. ತೂತುಕುಡಿ, ರಾಮನಾಥಪುರಂ, ನಾಗಪಟ್ಟಣಂ, ವಿಲುಪ್ಪುರಂ ಮತ್ತು ಕಾಂಚೀಪುರಂ ಪ್ರಮುಖ ಉಪ್ಪು ಉತ್ಪಾದಿಸುವ ಜಿಲ್ಲೆಗಳಾಗಿವೆ. ಭಾರತದಲ್ಲಿ 16,000 ಕೈಗಾರಿಕೆಗಗಳು ಉಪ್ಪು ಉತ್ಪಾದಿಸುತ್ತವೆ.
ಕೃಷಿ ಕ್ಷೇತ್ರಕ್ಕೆ ಲಾಕ್‌ಡೌನ್‌ನಿಂದ ವಿನಾಯಿತಿ ನೀಡಲಾಗಿರುವುದರಿಂದ, ಅದೇ ರೀತಿ ಉಪ್ಪು ಉದ್ಯಮವನ್ನೂ ತಮಿಳುನಾಡು ಸರ್ಕಾರ ಪರಿಗಣಿಸಬೇಕು ಎಂದು ಉಪ್ಪು ಕಾರ್ಮಿಕರು ಆಗ್ರಹಿಸಿದ್ದಾರೆ. ಲಾಕ್ ಡೌನ್ ವಿಸ್ತರಿಸಲು ಸರ್ಕಾರ ಯೋಜಿಸುತ್ತಿರುವ ಬೆನ್ನಲ್ಲೇ ಕಾರ್ಮಿಕರ ಜೀವನೋಪಾಯವನ್ನು ಕಾಪಾಡಲು ಸರ್ಕಾರ ನಿರ್ಧಾರ ತೆಗೆದುಕೊಳ್ಳಬಹುದು ಎಂಬ ಭರವಸೆಯಲ್ಲಿದ್ದಾರೆ.