ಕೊಲ್ಕತ್ತಾ (ಪಶ್ಚಿಮ ಬಂಗಾಳ) : ಇಂಟರ್ ನೆಟ್ ಸಮಸ್ಯೆಯನ್ನು ಪರಿಹರಿಸಲು ಶಿಕ್ಷಕನೊಬ್ಬ ಮನೆಯ ಪಕ್ಕದ ಬೇವಿನ ಮರದ ಮೇಲೆ ಬಿದಿರಿನ ಮನೆ ಮಾಡಿ ತನ್ನ ವಿದ್ಯಾರ್ಥಿಗಳಿಗೆ ಆನ್ಲೈನ್ ಪಾಠ ಮಾಡುವ ಮೂಲಕ ಗಮನ ಸೆಳೆದಿದ್ದಾರೆ.
ಇಂಟರ್ ನೆಟ್ ಸಮಸ್ಯೆ: ಮರದ ಮೇಲೆ ಮನೆ ಮಾಡಿ ವಿದ್ಯಾರ್ಥಿಗಳಿಗೆ ಆನ್ ಲೈನ್ ಪಾಠ ಮಾಡುತ್ತಿರುವ ಶಿಕ್ಷಕ - ವಿದ್ಯಾರ್ಥಿಗಳಿಗೆ ಆನ್ ಲೈನ್ ಪಾಠ
ಹಳ್ಳಿ ಪ್ರದೇಶಗಳಲ್ಲಿ ಇಂಟರ್ ನೆಟ್ ಸಮಸ್ಯೆ ಸರ್ವೇ ಸಾಮಾನ್ಯ. ಆದರೆ, ಈ ಸಮಸ್ಯೆಯನ್ನು ಪರಿಹರಿಸಲು ಪಶ್ಚಿಮ ಬಂಗಾಳದ ಶಿಕ್ಷಕನೋರ್ವ ವಿನೂತನ ಐಡಿಯಾ ಮಾಡಿದ್ದು, ಮರದ ಮೇಲೆ ಮನೆ ಮಾಡಿ ವಿದ್ಯಾರ್ಥಿಗಳಿಗೆ ಆನ್ ಲೈನ್ ಪಾಠ ಮಾಡುತ್ತಿದ್ದಾರೆ.
ಅಡಮಾಸ್ ಮತ್ತು ರೈಸ್ ವಿಶ್ವವಿದ್ಯಾನಿಲಯದಲ್ಲಿ ಉಪನ್ಯಾಸಕನಾಗಿರುವ ಪಾಟಿ ಈ ವಿನೂತನ ಪ್ರಯತ್ನ ಮಾಡಿದ ಶಿಕ್ಷಕ. ಕೊಲ್ಕತ್ತಾ ನಗರದಲ್ಲಿ ವಾಸವಾಗಿದ್ದ ಶಿಕ್ಷ ಪಾಟಿ, ಲಾಕ್ ಡೌನ್ ಹಿನ್ನೆಲೆ ತನ್ನ ಸ್ವಂತ ಊರಾದ ಬಂಕಾಪುರ ಜಿಲ್ಲೆಯ ಜಂಗಲ್ ಮಲಾಲ್ ಗ್ರಾಮಕ್ಕೆ ತೆರಳಿದ್ದ. ಇತಿಹಾಸ ಶಿಕ್ಷಕನಾಗಿರುವ ಈತನಿಗೆ, ಮನೆಯಲ್ಲೇ ಕೂತು ವಿದ್ಯಾರ್ಥಿಗಳಿಗೆ ಆನ್ ಲೈನ್ ಪಾಠ ಮಾಡಬೇಕಾದ ಅನಿವಾರ್ಯತೆ ಇತ್ತು. ಆದರೆ, ಹಳ್ಳಿಯಲ್ಲಿ ಇಂಟರ್ ನೆಟ್ ಸಮಸ್ಯೆ ಕಾಡುತ್ತಿತ್ತು. ಹೀಗಾಗಿ, ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಶಿಕ್ಷಕ ಈ ವಿನೂತನ ಐಡಿಯಾ ಮಾಡಿದ್ದಾರೆ.
ಆಹಾರ ಮತ್ತು ನೀರಿನೊಂದಿಗೆ ಮರ ಹತ್ತುವ ಶಿಕ್ಷಕ ಪಾಟಿ, ಅಲ್ಲೇ ಕೂತು ವಿದ್ಯಾರ್ಥಿಗಳಿಗೆ ಎರಡರಿಂದ ಮೂರು ತರಗತಿಗಳನ್ನು ನಡೆಸುತ್ತಾರೆ. ಈ ಬಗ್ಗೆ ಅಭಿಪ್ರಾಯ ಹಂಚಿಕೊಂಡಿರುವ ಅವರು, ಕೆಲವೊಮ್ಮೆ ಬಿರುಗಾಳಿಗೆ ಮನೆ ಹಾನಿಗೊಳಗಾಗುತ್ತದೆ. ಆದರೆ, ನಾನದನ್ನು ಮತ್ತೆ ಸರಿಪಡಿಸುತ್ತೇನೆ. ಯಾವುದೇ ರೀತಿಯಲ್ಲೂ ನನ್ನ ವಿದ್ಯಾರ್ಥಿಗಳಿಗೆ ಅನಾನುಕೂಲ ಆಗಬಾರದು ಎಂದಿದ್ದಾರೆ.