ಹೈದರಾಬಾದ್: ನಿರ್ಬಂಧಿತ ವಲಯಗಳನ್ನು ಹೊರತುಪಡಿಸಿ ಮದ್ಯ ಮಾರಾಟ ಮಾಡಲು ತೆಲಂಗಾಣ ಸರ್ಕಾರ ಅವಕಾಶ ಕಲ್ಪಿಸಿದೆ.
ಮದ್ಯ ದರದಲ್ಲಿ ಏರಿಕೆ:
ರಾಜ್ಯದಲ್ಲಿ 2,200 ಮದ್ಯದ ಅಂಗಡಿ ತೆರೆಯಬಹುದಾಗಿದ್ದು ಶೇ.16ರಷ್ಟು ದರ ಏರಿಕೆ ಮಾಡಲಾಗಿದೆ. ಕಡಿಮೆ ಬೆಲೆಗೆ ಸಿಗುವ ಮದ್ಯದ ಮೇಲೆ ಶೇ.11ರಷ್ಟು ಅಬಕಾರಿ ಸುಂಕ ವಿಧಿಸಲಾಗಿದೆ. ಈ ಆದೇಶ ಕೆಲವು ಕಟ್ಟುನಿಟ್ಟಿನ ನಿಯಮಗಳನ್ನು ಒಳಗೊಂಡಿದ್ದು, ಮಾಸ್ಕ್ ಹಾಕಿಕೊಳ್ಳದೇ ಜನರು ಖರೀದಿ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳುವಂತಿಲ್ಲ.
ವಲಸೆ ಕಾರ್ಮಿಕರನ್ನು ಕಳುಹಿಸಲು ವಿಶೇಷ ವ್ಯವಸ್ಥೆ:
ನಿನ್ನೆ ವಿವಿಧ ರಾಜ್ಯಗಳಿಗೆ ವಲಸೆ ಕಾರ್ಮಿಕರನ್ನು ಹೊತ್ತು 11 ರೈಲುಗಳು ಹೊರಟಿದ್ದವು. ಬಿಹಾರಕ್ಕೆ 5, 1 ಜಾರ್ಖಂಡ್, 1 ರಾಜಸ್ಥಾನ ಹಾಗೂ 2 ರೈಲು ಉತ್ತರಪ್ರದೇಶಕ್ಕೆ ಪ್ರಯಾಣ ಬೆಳೆಸಿವೆ. ಒಟ್ಟು 40 ರೈಲುಗಳ ಮೂಲಕ ವಲಸೆ ಕಾರ್ಮಿಕರನ್ನು ತಲುಪಿಸಲು ಸರ್ಕಾರ ವಿಶೇಷ ವ್ಯವಸ್ಥೆ ಕಲ್ಪಿಸಿದೆ.
ತೆಲಂಗಾಣದಲ್ಲಿ ಲಾಕ್‌ಡೌನ್ ವಿಸ್ತರಣೆ ಏಕೆ?
ರಾಜಧಾನಿ ಹೈದರಾಬಾದ್, ಪಕ್ಕದ ಜಿಲ್ಲೆಗಳಾದ ರಂಗರೆಡ್ಡಿ ಹಾಗೂ ಮಲ್ಕಜಿಗಿರಿ-ಮೆಡ್ಚಲ್‌ನಲ್ಲಿ ಕೊರೊನಾ ವೈರಸ್ ಪ್ರಕರಣ ಹೆಚ್ಚಾಗುತ್ತಿರುವ ಕಾರಣ ಲಾಕ್‌ಡೌನ್ ವಿಸ್ತರಣೆ ಮಾಡಬೇಕಾದ ಅನಿವಾರ್ಯತೆ ನಿರ್ಮಾಣಗೊಂಡಿದೆ. ಹೀಗಾಗಿ ಮೇ.29ರವರೆಗೆ ಲಾಕ್‌ಡೌನ್ ಮುಂದುವರಿಕೆಯಾಗಲಿದೆ.
ಹಸಿರು ಮತ್ತು ಕಿತ್ತಳೆ ವಲಯದ ಎಲ್ಲ 25 ಜಿಲ್ಲೆಗಳಲ್ಲಿ ಇಂದಿನಿಂದ ಅಂಗಡಿ ಮುಂಗಟ್ಟುಗಳು ತೆರೆಯಲಿವೆ. ಕೆಂಪು ವಲಯದ ವ್ಯಾಪ್ತಿಯಲ್ಲಿ ಬರುವು ಜಿಲ್ಲೆಗಳಾದ ಹೈದರಾಬಾದ್, ರಂಗರೆಡ್ಡಿ ಮತ್ತು ಮೆಡ್ಚಲ್-ಮಲ್ಕಜಿಗಿರಿಗಳಲ್ಲಿ ಯಥಾಸ್ಥಿತಿ ಕಾಯ್ದುಕೊಳ್ಳಲು ತೆಲಂಗಾಣ ಸರ್ಕಾರ ಮಹತ್ವದ ನಿರ್ಧಾರ ತೆಗೆದುಕೊಂಡಿದೆ.