ಅಹಮದ್ ನಗರ:ಸಾಯಿಬಾಬಾ ಜನ್ಮಸ್ಥಳವಾಗಿ ಪರಭಾನಿ ಜಿಲ್ಲೆಯ ಪಾತ್ರಿ ಪಟ್ಟಣವನ್ನು ಅಭಿವೃದ್ಧಿಪಡಿಸುವುದಾಗಿ ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ನೀಡಿರುವ ಹೇಳಿಕೆ ವಿರುದ್ಧ ಶಿರಡಿ ಜನರು ಆಕ್ರೋಶ ವ್ಯಕ್ತಪಡಿಸಿ ಅನಿರ್ದಿಷ್ಟಾವಧಿವರೆಗೆ ಶಿರಡಿ ನಗರ ಬಂದ್ಗೆ ಕರೆ ನೀಡಿದ್ದರು. ಆದರೆ ನಿರ್ಧಾರ ಬದಲಿಸಿರುವ ಸ್ಥಳೀಯರು ನಾಳೆ ಬಂದ್ ಹಿಂತೆಗೆದುಕೊಳ್ಳುವುದಾಗಿ ತಿಳಿಸಿದ್ದಾರೆ.
ಸಾಯಿಬಾಬ ವಿವಾದ: ನಾಳೆ ಬಂದ್ ಹಿಂತೆಗೆದುಕೊಳ್ಳಲು ಶಿರಡಿ ಸ್ಥಳೀಯರಿಂದ ನಿರ್ಧಾರ
ಸಾಯಿಬಾಬಾ ಜನ್ಮಸ್ಥಳ ವಿಚಾರಕ್ಕೆ ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ನೀಡಿರುವ ಹೇಳಿಕೆ ವಿರುದ್ಧ ಕರೆ ನೀಡಿದ್ದ ಅನಿರ್ದಿಷ್ಟಾವಧಿ ಬಂದ್ ಅನ್ನು ಹಿಂತೆಗೆದುಕೊಳ್ಳಲು ಶಿರಡಿ ಸ್ಥಳೀಯರು ನಿರ್ಧರಿಸಿದ್ದಾರೆ.
ಸಾಯಿಬಾಬ ವಿವಾದ
ಸಾಯಿಬಾಬಾ ವಿವಾದದ ಕುರಿತು ಇಂದು ಸಂಜೆ 7 ಗಂಟೆಗೆ ಶಿರಡಿಯ ದ್ವಾರಕಾಮಯಿ ದೇವಸ್ಥಾನದ ರಂಗಮಂದಿರದಲ್ಲಿ ಶಿವಸೇನೆ ಸಂಸದ ಸದಾಶಿವ್ ಲೋಖಂಡೆ ಸಮ್ಮುಖದಲ್ಲಿ ಸಭೆ ನಡೆಸಲಾಗಿದೆ. ಈ ವೇಳೆ ಸಿಎಂ ಠಾಕ್ರೆಯೊಂದಿಗೆ ದೂರವಾಣಿ ಕರೆ ಮಾಡಿ ಲೋಖಂಡೆ ಚರ್ಚಿಸಿದ್ದು, ಮುಖ್ಯಮಂತ್ರಿಗೆ ಸಂದೇಶ ರವಾನಿಸಿದ್ದಾರೆ. ಈ ಬಳಿಕ ಸ್ಥಳೀಯರು ತಮ್ಮ ಪ್ರತಿಭಟನೆಯ ದಿಕ್ಕನ್ನು ಬದಲಿಸಿದ್ದು, ನಾಳೆ ಮಧ್ಯಾಹ್ನ 12 ಗಂಟೆಗೆ ಬಂದ್ ಹಿಂತೆಗೆದುಕೊಳ್ಳುವ ನಿರ್ಧಾರಕ್ಕೆ ಬಂದಿದ್ದಾರೆ.