ಹೈದರಾಬಾದ್: ಆಗ್ನೇಯ ಏಷ್ಯಾದಲ್ಲಿ ಕೊರೊನಾ ಪ್ರಕಣರಗಳು ಏರುತ್ತಲೇ ಇವೆ. ಇದನ್ನು ತಡೆಯಲು ಮಾಹಿತಿ ಆಧಾರಿತ ಸೂಕ್ತ ನಿರ್ಧಾರಗಳನ್ನು ಕೈಗೊಳ್ಳುವುದರ ಜೊತೆಗೆ ಸ್ಥಳೀಯ ಮಟ್ಟದ ಸಾಂಕ್ರಾಮಿಕ ರೋಗಗಳ ಬಗ್ಗೆಯೂ ಎಚ್ಚರಿಕೆ ವಹಿಸಬೇಕು. ಇದಕ್ಕಾಗಿ ಸಾಮಾಜಿಕ ಅಂತರದಂತ ಕ್ರಮಗಳನ್ನು ಕೈಗೊಳ್ಳಬೇಕೆಂದು ವಿಶ್ವ ಆರೋಗ್ಯ ಸಂಸ್ಥೆ ಎಚ್ಚರಿಕೆ ನೀಡಿದೆ.
ಕೋವಿಡ್-19 ರೀತಿಯಲ್ಲಿ ಸ್ಥಳೀಯ ಸಾಂಕ್ರಾಮಿಕ ರೋಗಗಳ ತಡೆಗೂ ಹೆಚ್ಚಿನ ಆದ್ಯತೆ ನೀಡಬೇಕು. ಹಾಟ್‌ಸ್ಪಾಟ್ಸ್ ಮತ್ತು ಕ್ಲಸ್ಟರ್ಸ್‌ಗಳನ್ನು ಗುರುತಿಸಬೇಕು ಎಂದು ವಿಶ್ವ ಸಂಸ್ಥೆಯ ಆಗ್ನೇಯ ಏಷ್ಯಾದ ಪ್ರಾದೇಶಿಕ ನಿರ್ದೇಶಕ ಡಾ. ಪೂನಂ ಕೇಟ್ರಪಾಲ್ ಸಿಂಗ್ ತಿಳಿಸಿದ್ದಾರೆ.
73ನೇ ವಿಶ್ವ ಆರೋಗ್ಯ ಅಧಿವೇಶನದ ಹಿನ್ನೆಲೆಯಲ್ಲಿ 11 ಸದಸ್ಯ ರಾಷ್ಟ್ರಗಳ ಆರೋಗ್ಯ ಅಧಿಕಾರಿಗಳೊಂದಿಗೆ ಚರ್ಚೆ ನಡೆಸಿದ ಬಳಿಕ ಮಾಹಿತಿ ನೀಡಿರುವ ಸಿಂಗ್, ಜನವರಿ 13 ರಿಂದಲೇ ಥೈಲ್ಯಾಂಡ್ ಕೋವಿಡ್-19 ತಡೆಗಟ್ಟಲು ದೈಹಿಕವಾಗಿ ಅಂತರ ಕಾಯ್ದುಕೊಳ್ಳುವುದು ಸೇರಿದಂತೆ ಕಟ್ಟುನಿಟ್ಟಿನ ಮಾರ್ಗಸೂಚಿಗಳನ್ನು ಜಾರಿಗೆ ತಂದಿದೆ. ಇದರಿಂದಾಗಿ ಅಲ್ಲಿ ವಿಶ್ವದ ಇತರೆ ದೇಶಗಳಿಗಿಂತ ಕಡಿಮೆ ಪ್ರಕರಣಗಳು ದಾಖಲಾಗಿವೆ ಎಂದು ಹೇಳಿದ್ದಾರೆ.
ಸಾಮಾಜಿಕ ಮತ್ತು ಆರ್ಥಿಕ ಸುಧಾರಣೆಗಾಗಿ ಹೊಸ ರೀತಿಯಲ್ಲಿರುವ ಸಾಮಾನ್ಯ ಜೀವನಕ್ಕಾಗಿ ರಾಷ್ಟ್ರಗಳು ಸಿದ್ಧತೆಗಳನ್ನು ನಡೆಸುತ್ತಿವೆ. ಸರ್ಕಾರ ಮತ್ತು ಎಲ್ಲಾ ವರ್ಗಗಳು ಸಂಕಷ್ಟವನ್ನು ಎದುರಿಸುತ್ತಿವೆ. ಆಗ್ನೇಯ ಏಷ್ಯಾದಲ್ಲಿ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಮಾರ್ಗಸೂಚಿಗಳನ್ನು ಮತ್ತಷ್ಟು ತ್ವರಿತವಾಗಿ ಜಾರಿಗೊಳಿಸಬೇಕು ಎಂದು ಸಲಹೆ ನೀಡಿದ್ದಾರೆ.