ಲಕ್ನೋ:1992ರಲ್ಲಿ ನಡೆದ ಬಾಬ್ರಿ ಮಸೀದಿ ಧ್ವಂಸ ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಜೆಪಿ ಹಿರಿಯ ಮುಖಂಡ ಎಲ್.ಕೆ ಅಡ್ವಾಣಿ ಇಂದು ತಮ್ಮ ಹೇಳಿಕೆ ದಾಖಲು ಮಾಡಿದ್ದು, ಬರೋಬ್ಬರಿ 4 ಗಂಟೆಗಳ ಕಾಲ ಅವರು ವಿಚಾರಣೆ ಎದುರಿಸಿದ್ದಾಗಿ ತಿಳಿದು ಬಂದಿದೆ.
ಸಿಬಿಐನ ವಿಶೇಷ ಕೋರ್ಟ್ ಎದುರು ವಿಡಿಯೋ ಕಾನ್ಪರೆನ್ಸ್ ಮೂಲಕ ತಮ್ಮ ಹೇಳಿಕೆ ನೀಡಿದ್ದು, ಬೆಳಗ್ಗೆ 11ಗಂಟೆಯಿಂದ ಮಧ್ಯಾಹ್ನ 3:30ರವರೆಗೆ ಅವರನ್ನ ವಿಚಾರಣೆಗೊಳಪಡಿಸಲಾಗಿತ್ತು ಎಂದು ಅಡ್ವಾಣಿ ಪರ ವಕೀಲರು ಮಾಹಿತಿ ನೀಡಿದ್ದಾರೆ. ತಮ್ಮ ಮೇಲೆ ಕೇಳಿ ಬಂದಿರುವ ಎಲ್ಲ ಆರೋಪ ಅಡ್ವಾಣಿ ಅಲ್ಲಗಳೆದಿದ್ದಾರೆ ಎನ್ನಲಾಗಿದೆ. ಇದೇ ವಿಷಯವಾಗಿ ಕಳೆದೆರಡು ದಿನಗಳ ಹಿಂದೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಮಾಜಿ ಉಪ ಪ್ರಧಾನಿ ಅಡ್ವಾಣಿ ಅವರನ್ನ ಭೇಟಿ ಮಾಡಿ ಮಾತುಕತೆ ನಡೆಸಿದ್ದರು.
ಬಾಬ್ರಿ ಮಸೀದಿ ಧ್ವಂಸ ಪ್ರಕರಣದ ವಿಚಾರಣೆ ಪ್ರಸ್ತುತ ಸಿಆರ್ಪಿಸಿಯ ಸೆಕ್ಷನ್ 313ರ ಅಡಿಯಲ್ಲಿ ಪ್ರಕರಣದ ಆರೋಪಿಗಳ ಹೇಳಿಕೆ ದಾಖಲು ಮಾಡಿಕೊಂಡಿರುವ ಸಿಬಿಐ ವಿಶೇಷ ನ್ಯಾಯಾಲಯ ಆಗಸ್ಟ್ 31ರಂದು ಅಂತಿಮ ತೀರ್ಪು ಹೊರಹಾಕಲಿದೆ.