ದೆಹಲಿ: ಇಂದು ಅಮೆರಿಕಾ ಹಾಗೂ ಭಾರತದ ನಡುವೆ 2+2 ಸಚಿವರ ಸಂವಾದದ 3 ನೇ ಆವೃತ್ತಿ ನಡೆದಿದೆ. ಈ ಸಂಬಂಧ ಯುಎಸ್ ವಿದೇಶಾಂಗ ಕಾರ್ಯದರ್ಶಿ ಮೈಕ್ ಪೊಂಪಿಯೋ, ರಕ್ಷಣಾ ಕಾರ್ಯದರ್ಶಿ ಮಾರ್ಕ್ ಟಿ.ಎಸ್ಪರ್ ಹಾಗೂ ಭಾರತದ ವಿದೇಶಾಂಗ ಸಚಿವ ಜೈಶಂಕರ್ ಮತ್ತು ರಕ್ಷಣಾ ಸಚಿವ ರಾಜ್ನಾಥ್ ಸಿಂಗ್ ಸುದ್ದಿಗೋಷ್ಠಿ ನಡೆಸಿದ್ದಾರೆ.
ಯುಎಸ್ ವಿದೇಶಾಂಗ ಕಾರ್ಯದರ್ಶಿ ಮೈಕ್ ಪೊಂಪಿಯೋ ಮಾತನಾಡಿ, ನಾವಿಂದು ರಾಷ್ಟ್ರೀಯ ಯುದ್ಧ ಸ್ಮಾರಕಕ್ಕೆ ಭೇಟಿ ನೀಡಿ ಗಾಲ್ವಾನ್ ಕಣಿವೆಯಲ್ಲಿ ದೇಶಕ್ಕಾಗಿ ಪ್ರಾಣ ತೆತ್ತ ಯೋಧರಿಗೆ ಗೌರವ ಸಲ್ಲಿಸಿದ್ದೇವೆ. ತನ್ನ ಸಾರ್ವಭೌಮತ್ವ ಹಾಗೂ ಸ್ವಾತಂತ್ರ್ಯ ಕಾಪಾಡಿಕೊಳ್ಳುವ ನಿಟ್ಟಿನಲ್ಲಿ ಭಾರತ ಹೋರಾಡಬೇಕಾದ್ರೆ, ನಾವು ಜೊತೆಯಾಗಿ ನಿಲ್ಲುತ್ತೇವೆ ಅನ್ನೋ ಮೂಲಕ ಗಡಿ ವಿಚಾರದಲ್ಲಿ ಕ್ಯಾತೆ ತೆಗೆಯುತ್ತಿರುವ ಚೀನಾಗೆ ಪರೋಕ್ಷ ಎಚ್ಚರಿಕೆ ನೀಡಿದ್ದಾರೆ.
ಭಾರತ ಹಾಗೂ ಅಮೆರಿಕಾದ ಪ್ರಜಾಪ್ರಭುತ್ವ ವ್ಯವಸ್ಥೆಯೊಂದಿಗೆ ಚೀನಿ ಕಮ್ಯುನಿಸ್ಟ್ ಪಕ್ಷ ಮತ್ತೆಂದೂ ಸ್ನೇಹ ಬೆಳೆಸಲು ಸಾಧ್ಯವಿಲ್ಲ. ಚೀನಾ ಬೆದರಿಕೆಗಳಿಗೆ ಇಂಡೋ, ಯುಎಸ್ ಒಟ್ಟಾಗಿ ಕ್ರಮ ಕೈಗೊಳ್ಳುತ್ತವೆ. ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿ ಭಾರತ, ಅಮೆರಿಕಾ ಒಟ್ಟಾಗಿ ಕೆಲಸ ಮಾಡಲಿದ್ದು, ಯುಎನ್ನಲ್ಲಿ ಭಾರತದ ಖಾಯಂ ಸದಸ್ಯತ್ವವನ್ನು ನಾವು ಪ್ರತಿ ಬಾರಿ ಬೆಂಬಲಿಸುತ್ತಲೇ ಇದ್ದೇವೆ ಎಂದರು.
ಅಲ್ಲದೆ ಕಳೆದ ವರ್ಷ ಭಾರತೀಯ ಸೇನೆಯೊಂದಿಗೆ ನಮ್ಮ ಸೈನ್ಯ ಜಂಟಿ ಸಮರಾಭ್ಯಾಸ ನಡೆಸಿದೆ. ಆ ಮೂಲಕ ಭಾರತದ ರಕ್ಷಣೆಗೆ ನಾವು ಸದಾ ಜತೆಗಿರುತ್ತೇವೆ ಎಂದು ಮೈಕ್ ಪೊಂಪಿಯೊ ಹೇಳಿದರು.