ಮಧುರೈ (ತಮಿಳುನಾಡು):ನಮ್ಮ ಪಕ್ಷವೇನಾದರೂ ಅಧಿಕಾರಕ್ಕೆ ಬಂದರೆ ಮದ್ಯ ಮಾರಾಟವನ್ನು ಖಾಸಗೀಕರಣ ಮಾಡಿ, ಜನರಿಗೆ ಉಚಿತವಾಗಿ ಕುಡಿಯುವ ನೀರು ನೀಡುತ್ತೇವೆ ಎಂದು ನಟ ಮತ್ತು ರಾಜಕಾರಣಿ ಕಮಲ್ ಹಾಸನ್ ಹೇಳಿದ್ದಾರೆ.
ತಮಿಳುನಾಡಿನಲ್ಲಿ ವಿಧಾನಸಭಾ ಚುನಾವಣೆಗಳು ಸಮೀಪಿಸುತ್ತಿದ್ದಂತೆ ರಾಜಕೀಯ ಪಕ್ಷಗಳು ತಮ್ಮ ಪ್ರಚಾರವನ್ನು ಈಗಲೇ ಆರಂಭಿಸಿದ್ದು, ಈ ಹಿನ್ನೆಲೆಯಲ್ಲಿ ಮಕ್ಕಳ್ ನಿಧಿ ಮೈಯಂ(ಎಂಎನ್ಎಂ) ಮುಖ್ಯಸ್ಥ ಕಮಲ್ ಹಾಸನ್ ಮಧುರೈನಲ್ಲಿ ಚುನಾವಣಾ ಪ್ರಚಾರದಲ್ಲಿ ಭಾಗವಹಿಸಿ ಈ ರೀತಿಯಾಗಿ ಮಾತನಾಡಿದ್ದಾರೆ.
ಪ್ರಚಾರದ ಭಾಗವಾಗಿ ಮಹಿಳೆಯರು, ಯುವಕರು ಹಾಗೂ ವಿದ್ಯಾರ್ಥಿಗಳೊಡನೆ ಸಂವಾದ ನಡೆಸಿದ ಕಮಲ್ ಹಾಸನ್ 'ಮಧುರೈ ತಮಿಳುನಾಡಿನ ಎರಡನೇ ರಾಜಧಾನಿಯಾಗಬೇಕು ಎಂದು ಎಂಜಿಆರ್ ಆಶಯವಾಗಿದ್ದು, ಅದನ್ನು ಎಂಎನ್ಎಂ ಪೂರ್ಣಗೊಳಿಸುತ್ತದೆ' ಎಂದು ಕಮಲ್ ಹಾಸನ್ ಹೇಳಿದ್ದಾರೆ.