ಕರ್ನಾಟಕ

karnataka

ETV Bharat / bharat

ಕೋವಿಡ್-19 ಮತ್ತು ತ್ಯಾಜ್ಯ ಸಂಗ್ರಹ; ವಿಲೇವಾರಿಯೇ ದೊಡ್ಡ ಸವಾಲು!

ದೇಶದಲ್ಲಿ ವರ್ಷಂಪ್ರತಿ ಏನಿಲ್ಲವೆಂದರೂ 62 ಮಿಲಿಯನ್ ಟನ್‍ಗಳಷ್ಟು ಕಸ ಉತ್ಪತ್ತಿಯಾಗುತ್ತದೆ. ಇದರಲ್ಲಿ 42 ಮಿಲಿಯನ್‍ ಟನ್‍ ಕಸವನ್ನು ಯಾವುದೇ ಸಂಸ್ಕರಣೆಗೆ ಒಳಪಡಿಸದೆ, ಒಟ್ಟಾರೆ ಸುರಿಯಲಾಗುತ್ತಿದೆ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಇಂತಹ ಮಾರಕ ಕಸವನ್ನು ಹತೋಟಿಗೆ ತರಲು ಪರಿಣಾಮಕಾರಿ ಕ್ರಮಗಳನ್ನು ಕೈಗೊಳ್ಳದೇ ಗತ್ಯಂತರವಿಲ್ಲ.

By

Published : Aug 11, 2020, 5:22 PM IST

wastes
ಕೋವಿಡ್-19

ಪರಿಸರಕ್ಕೆ ಹಾನಿಕಾರಕವಾದ ಘನ-ರಾಸಾಯನಿಕ ತ್ಯಾಜ್ಯಗಳು ಪ್ಲಾಸ್ಟಿಕ್ ಕಸದೊಂದಿಗೆ ಸೇರಿಕೊಂಡು ಹಲವು ವರ್ಷಗಳಿಂದಲೂ ಭೀತಿ ಹುಟ್ಟಿಸುತ್ತಿವೆ. 7 ಕೋಟಿಗಿಂತ ಕಡಿಮೆ ಜನಸಂಖ್ಯೆಯಿರುವ ಬ್ರಿಟನ್​ ದೇಶವೊಂದರಲ್ಲೇ ಒಬ್ಬ ವ್ಯಕ್ತಿ ದಿನಕ್ಕೊಂದರಂತೆ ಒಂದು ವರ್ಷಗಳ ಕಾಲ ಮಾಸ್ಕ್ ಧರಿಸಿಸುತ್ತಾನೆ ಎಂದರೆ, ಒಂದು ವರ್ಷದಲ್ಲಿ 66,000 ಟನ್‍ಗಳಷ್ಟು ಕಸ ಸೃಷ್ಟಿಯಾಗುತ್ತದೆ ಎಂದು ಅಂದಾಜಿಸಲಾಗಿದೆ. ಕೋವಿಡ್ ಸೋಂಕು ಯಾವ ಮಟ್ಟಿಗಿನ ಸವಾಲನ್ನು ತಂದಿರಿಸಿದೆ ಎಂಬುದನ್ನು ಇದು ಸೂಚಿಸುತ್ತದೆ.

ರಾಷ್ಟ್ರೀಯ ಹಸಿರು ನ್ಯಾಯಮಂಡಳಿಯು ಇತ್ತೀಚೆಗೆ ಕೋವಿಡ್‍ ಕಾರಣದಿಂದ ದೇಶದಲ್ಲಿ ಉಂಟಾಗುತ್ತಿರುವ ಜೀವವೈದ್ಯಕೀಯ (ಬಯೋಮೆಡಿಕಲ್) ಕಸದ ಪ್ರಮಾಣ ಪ್ರತಿ ದಿನಕ್ಕೆ 700 ಮೆಟ್ರಿಕ್ ಟನ್​ಗಳಿಗಿಂತಲೂ ಹೆಚ್ಚು ಎಂದು ಘೋಷಿಸಿದೆ. ಈ ಹಿನ್ನೆಲೆಯಲ್ಲಿ ಎಲ್ಲ ರಾಜ್ಯಗಳು ಕೂಡಲೇ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ತಿಳಿಸಿದೆ. ತೆಲಂಗಾಣ ಮಾಲಿನ್ಯ ನಿಯಂತ್ರಣ ಮಂಡಳಿಯು ಕೋವಿಡ್‍ ಕಸವನ್ನು ಕೊಂಡೊಯ್ಯುವ ವಾಹನಗಳನ್ನು ತಡೆಯಕೂಡದು ಎಂದು ಪೊಲೀಸ್ ಇಲಾಖೆಗೆ ತಿಳಿಸಿದ್ದನ್ನು ಗಮನಿಸಬಹುದು. ಈ ಕಸವನ್ನು 48 ಗಂಟೆಯ ಒಳಗೆ ವಿಲೇವಾರಿ ಮಾಡದಿದ್ದಲ್ಲಿ ಆ ಕಸದ ಮೂಲಕವೇ ವೈರಾಣುಗಳು ಗಾಳಿಗೆ ಹರಡಬಹುದು ಎಂದೂ ಅದು ತಿಳಿಸಿದೆ. ಈ ಕೋವಿಡ್ ಕಸವನ್ನು ಸುಟ್ಟು ಹಾಕಲು ಸೂಕ್ತ ಏರ್ಪಾಡುಗಳನ್ನು ಮಾಡಿಕೊಳ್ಳುವ ಭರವಸೆಗಳ ಹೊರತಾಗಿಯೂ ವಸ್ತುಸ್ಥಿತಿ ಮಾತ್ರ ದಿಗಿಲುಬಡಿಸುವಂತಿದೆ.

ದೇಶದಾದ್ಯಂತ ಇರುವ 84,000ಕ್ಕಿಂತಲೂ ಹೆಚ್ಚು ಆಸ್ಪತ್ರೆಗಳ ಪೈಕಿ ತಮ್ಮದೇ ಕಸ ವಿಲೆವಾರಿ ಘಟಕಗಳನ್ನು ಹೊಂದಿರುವ ಆಸ್ಪತ್ರೆಗಳ ಸಂಖ್ಯೆ ಕೇವಲ 200. ಆಸ್ಪತ್ರೆಗಳಲ್ಲದೆ ಹಲವಾರು ರೋಗಿಗಳಿಗೆ ಅವರವರ ಮನೆಗಳಲ್ಲೇ ಐಸೊಲೇಶನ್‍ನಲ್ಲಿ ಆರೈಕೆ ಮಾಡಲಾಗುತ್ತಿದೆ. ತಳಮಟ್ಟದ ವರದಿಗಳು ತಿಳಿಸುವ ಪ್ರಕಾರ ಇವರ ಆರೈಕೆಗೆ ಬಳಸುತ್ತಿರುವ ಮಾಸ್ಕ್​ಗಳು, ಕೈಗವಸುಗಳು, ಸಿರಿಂಜ್ ಇತ್ಯಾದಿಗಳನ್ನು ಮನೆಗಳ ಇತರೆ ದೈನಂದಿನ ಕಸದ ಜೊತೆ ಸೇರಿಸಿಬಿಡಲಾಗುತ್ತಿದೆ. ವೈದ್ಯಕೀಯ ಕಸದ ಸಂಗ್ರಹ ಮತ್ತು ವಿಲೇವಾರಿಗೆ ಬೇರೆಯದೇ ಆದ ಏರ್ಪಾಡು ಇಲ್ಲದಿರುವುದರಿಂದ ಹೀಗೆ ಮಾಡಲಾಗುತ್ತಿದೆ.

ಒಂದೊಮ್ಮೆ ಕೋವಿಡ್ ಸೋಂಕಿಗೆ ಲಸಿಕೆ ಕಂಡುಹಿಡಿದು ಕೊರೊನಾ ನಿಯಂತ್ರಣ ಸಾಧ್ಯವಾದ ಪಕ್ಷದಲ್ಲಿ ಕೋವಿಡ್‍ ಕಸದ ಪ್ರಮಾಣ ತಗ್ಗಬಹುದು. ಆದರೆ ಆಗಲೂ ನಿಜವಾದ ಸಮಸ್ಯೆ ಬಗೆಹರಿಯುವುದಿಲ್ಲ. ಈ ದೇಶದಲ್ಲಿ ವರ್ಷಂಪ್ರತಿ ಏನಿಲ್ಲವೆಂದರೂ 62 ಮಿಲಿಯನ್ ಟನ್‍ಗಳಷ್ಟು ಕಸ ಉತ್ಪತ್ತಿಯಾಗುತ್ತದೆ. ಇದರಲ್ಲಿ 42 ಮಿಲಿಯನ್‍ ಟನ್‍ ಕಸವನ್ನು ಯಾವುದೇ ಸಂಸ್ಕರಣೆಗೆ ಒಳಪಡಿಸದೆ, ಒಟ್ಟಾರೆ ಸುರಿಯಲಾಗುತ್ತಿದೆ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಇಂತಹ ಮಾರಕ ಕಸವನ್ನು ಹತೋಟಿಗೆ ತರಲು ಪರಿಣಾಮಕಾರಿ ಕ್ರಮಗಳನ್ನು ಕೈಗೊಳ್ಳದೇ ಗತ್ಯಂತರವಿಲ್ಲ.

ನೀರಿನ ಸಂಪನ್ಮೂಲಗಳಲ್ಲಿ ಪ್ಲಾಸ್ಟಿಕ್‍ ಕಸದಿಂದಾಗಿ ಲೆಕ್ಕವಿಲ್ಲದಷ್ಟು ಸಂಖ್ಯೆಯಲ್ಲಿ ನೀರೊಳಗಿನ ಜೀವಿಗಳು ದಿನನಿತ್ಯವೂ ಸಾಯುತ್ತಿವೆ. ಬೀದಿ ಬದಿಗಳಲ್ಲಿ ಎಸೆಯುವ ಪ್ಲಾಸ್ಟಿಕ್ ಚೀಲಗಳನ್ನು ತಿಂದು ಜೀರ್ಣಿಸಿಕೊಳ್ಳಲಾಗದೆ ಅದೆಷ್ಟೋ ಪ್ರಾಣಿಗಳು ಮತ್ತು ದನಕರುಗಳು ಹಿಂಸೆ ಪಟ್ಟುಕೊಂಡು ಪ್ರಾಣ ಬಿಡುತ್ತಿವೆ. ಎಲ್ಲೆಂದರಲ್ಲಿ ಪೇರಿಸಲ್ಪಡುವ ಕಸದ ಗುಡ್ಡೆಗಳು ನೆರೆ-ಪ್ರವಾಹಗಳಿಗೂ ಕಾರಣವಾಗಿವೆ. ದೇಶದಲ್ಲಿ ಪ್ಲಾಸ್ಟಿಕ್ ಕಸ ವಿಲೇವಾರಿಗೆ ಒಂದು ಸರಿಯಾದ ವ್ಯವಸ್ಥೆಯಿಲ್ಲದೆ ಇರುವುದರ ಪರಿಣಾಮವೇ ಇದಾಗಿದೆ.

ಪ್ಲಾಸ್ಟಿಕ್​ನ ಬಳಕೆಯ ಮೇಲೆ ನಿಷೇಧ ಹೇರಿ ಪ್ಲಾಸ್ಟಿಕ್ ವಸ್ತುಗಳ ಮರುಬಳಕೆಗೆ ಪ್ರೋತ್ಸಾಹ ನೀಡುವ ಮೂಲಕ ಆಸ್ಟ್ರೇಲಿಯಾ, ಥೈಲ್ಯಾಂಡ್, ಸ್ವೀಡನ್ ಮತ್ತು ಐರ್ಲೆಂಡ್ ದೇಶಗಳು ಕಸ ಸಂಗ್ರಹಣೆ ವಿಷಯದಲ್ಲಿ ಉತ್ತಮ ಪ್ರಗತಿ ತೋರಿವೆ. ಜಪಾನ್ ಸಹ ತನ್ನ ದೇಶದಲ್ಲಿ ಉತ್ಪತ್ತಿಯಾಗುವ ಪ್ಲಾಸ್ಟಿಕ್​ನ ಮೂರನೇ ಒಂದು ಭಾಗವನ್ನು ಮರುಬಳಕೆಗೆ ಹಾಗೂ ಮರುಉತ್ಪಾದನೆಗೆ ತೊಡಗಿಸುವ ಮೂಲಕ ಪ್ಲಾಸ್ಟಿಕ್ ಮಾರಿಯನ್ನು ಎದುರಿಸುವಲ್ಲಿ ಹೊಸ ದಿಕ್ಕು ನೀಡಿದೆ ಎನ್ನಬಹುದು. ಉಗಾಂಡಾ ದೇಶವು ಪ್ಲಾಸ್ಟಿಕ್ ಕಸವನ್ನು ಕರಗಿಸಿ ಅದನ್ನು ಮುಖಗವಸು ತಯಾರಿಕೆಗೆ ಬಳಸಿಕೊಂಡು ಕೋವಿಡ್ ಸವಾಲನ್ನು ಆದಾಯ ಗಳಿಕೆಯ ಹೊಸ ಅವಕಾಶವನ್ನಾಗಿಸಿಕೊಂಡಿದೆ. ಸ್ಕಾಟ್ಲೆಂಡ್‍ನಂತಹ ದೇಶಗಳು ಕಸದಿಂದ ರಸ್ತೆ ನಿರ್ಮಿಸುವ ಹೊಸ ತಂತ್ರಜ್ಞಾನವನ್ನೇ ಅಭಿವೃದ್ಧಿಪಡಿಸಿಕೊಂಡಿವೆ. ಸಿಂಗಾಪುರದಲ್ಲಿ ನಿರ್ಮಾಣ ಕೆಲಸಲ್ಲಿ ಉಂಟಾಗುವ ಕಸದ ಶೇ. 98ರಷ್ಟನ್ನು ಮರುಉತ್ಪಾದನೆಗೆ ಬಳಸಿ ಜಗತ್ತನ್ನೇ ತಬ್ಬಿಬ್ಬುಗೊಳಿಸುತ್ತಿದೆ. ಇನ್ನು ನಮ್ಮ ದೇಶದಲ್ಲಿ?.... ಭಾರತೀಯ ಪೆಟ್ರೋಲಿಯಂ ಕಾರ್ಪೊರೇಶನ್ (PCI) ಸಂಸ್ಥೆಯು ಪ್ಲಾಸ್ಟಿಕ್​ನಿಂದ ಪೆಟ್ರೋಲ್ ತಯಾರಿಸುವ ತಂತ್ರಜ್ಞಾನವನ್ನು ಅಭಿವೃದ್ಧಿಪಡಿಸಿದೆ. ನಗರ ಪಟ್ಟಣಗಳ ಕಸದಿಂದ ಗೊಬ್ಬರ ತಯಾರಿಸಿ ಹಳ್ಳಿಗಳಲ್ಲಿ ಕೃಷಿಗೆ ಒದಗಿಸುವ ಮಾರ್ಗಸೂಚಿಗಳನ್ನು ತೆಲಂಗಾಣ ಸರ್ಕಾರ ಇತ್ತೀಚೆಗೆ ಹೊರಡಿಸಿದೆ. ಹೈದರಾಬಾದ್​ದಲ್ಲಿ ಈ ತಿಂಗಳಲ್ಲಿ ಇಂಧನ ಉತ್ಪಾದನೆಯ ಒಂದು ಹೊಸ ಇಲಾಖೆ ಆರಂಭಗೊಳ್ಳಲಿದೆ. ಕಸದಿಂದ ಬೆಳಕನ್ನು ಸೃಷ್ಟಿಸುವ ಇಂತಹ ಘಟಕಗಳನ್ನು ದೇಶದ ಮೂಲೆ ಮೂಲೆಗಳನ್ನು ಸ್ಥಾಪಿಸಬೇಕು. ಸರ್ಕಾರಗಳು ವಾತಾವರಣದಲ್ಲಿರುವ ನೀರು, ಗಾಳಿಗಳನ್ನು ರಕ್ಷಿಸಲು ಸಿವಿಕ್‍ ಪ್ರಜ್ಞೆ ಬೆಳೆಸುವ ಸೂಕ್ತ ತಂತ್ರಗಳನ್ನು ಜನರಿಗೆ ಪರಿಚಯಿಸಬೇಕು. ಇದರಲ್ಲಿ ನವೀಕರಿಸಬಲ್ಲ ಸಂಪನ್ಮೂಲಗಳ ಕಡೆಗೆ ಹೆಚ್ಚು ಒತ್ತು ನೀಡಬೇಕು.

ಶಿಕ್ಷಣ ವ್ಯವಸ್ಥೆಯನ್ನು ಸಂಶೋಧನಾ ಆಧಾರಿತ ಪಠ್ಯಕ್ರಮದಿಂದ ಶುದ್ಧೀಕರಿಸಿ ನಾಳಿನ ಯುವ ಪೀಳಿಗೆಯಲ್ಲಿ ಸಾಮಾಜಿಕ ಎಚ್ಚರವನ್ನು ಬೆಳೆಸುವ ಕೆಲಸ ಮಾಡಬೇಕು. ಅಂತಹ ಹೊಸಬಗೆಯ ಮತ್ತು ಬಹುಮುಖಿಯಾದ ಚಟುವಟಿಕೆಗಳು ದೇಶದಿಂದ ಪ್ಲಾಸ್ಟಿಕ್​ಅನ್ನು ಒಳಗೊಂಡಂತೆ ಎಲ್ಲಾ ಬಗೆಯ ಕಸವನ್ನು ನಿರ್ಮೂಲನೆ ಮಾಡಿ ದೇಶಕ್ಕೆ ನೆಮ್ಮದಿಯ ನಿಟ್ಟುಸಿರನ್ನು ತರಬಹುದು.

ABOUT THE AUTHOR

...view details