ಕರ್ನಾಟಕ

karnataka

ETV Bharat / bharat

ಬಿಜೆಪಿ ಮಿಂಚಿನ ಬಳ್ಳಿ... ಮಹಿಳಾ ಮಣಿಗಳಿಗೆ ಆದರ್ಶ ಪ್ರಾಯ.. ಈ ಸುಷ್ಮಾ ಸ್ವರಾಜ್​ - ಸುಷ್ಮಾ ಸ್ವರಾಜ್

ಭಾರತದ ಮಿಂಚಿನ ಬಳ್ಳಿ ಎಂದು ಹೆಸರು ಮಾಡಿದ್ದ ಸುಷ್ಮಾ ಸ್ವರಾಜ್​ ಬಿಜೆಪಿ ಅಧಿಕಾರಕ್ಕೇರದ ದಿನಗಳಲ್ಲಿ ಪಕ್ಷದ ಮುಖವಾಣಿಯಾಗಿದ್ದರು. ತಮ್ಮ ಮಾತಿನ ಮೂಲಕ ಹೆಸರು ಮಾಡಿದ್ದ ಅವರು, ಅಂದಿನ ಪತ್ರಿಕೆಗಳ ಕಣ್ಮಣಿ ಆಗಿದ್ದರು. ಎಲ್ಲರೂ ಇವರನ್ನು ಬಿಜೆಪಿಯ ಮಿಂಚಿನ ಬಳ್ಳಿ ಎಂದೇ ಕರೆಯುತ್ತಿದ್ದರು.

Sushma Swaraj
ಸುಷ್ಮಾ

By

Published : Mar 1, 2020, 9:55 AM IST

ಮಧ್ಯಪ್ರದೇಶದ ವಿದಿಶಾ ಲೋಕಸಭಾ ಕ್ಷೇತ್ರವನ್ನು ಪ್ರತಿನಿಧಿಸುವ 66 ವರ್ಷದ ಸುಷ್ಮಾ, ಹರಿಯಾಣ ಮೂಲದವರಾಗಿದ್ದು, ರಾಜಕೀಯ ಪ್ರವೇಶಕ್ಕೂ ಮೊದಲು ವಕೀಲ ವೃತ್ತಿಯಲ್ಲಿದ್ದರು. ಸಂಸದೆಯಾಗಿ ಏಳು ಬಾರಿ ಮತ್ತು ವಿಧಾನಸಭಾ ಸದಸ್ಯೆಯಾಗಿ ಮೂರು ಬಾರಿ ಆಯ್ಕೆಯಾಗಿರುವ ಸುಷ್ಮಾ, 1977ರಲ್ಲಿ 25 ನೆಯ ವಯಸ್ಸಿಗೆ ಹರಿಯಾಣದ ಅತ್ಯಂತ ಕಿರಿಯ ಸಂಪುಟ ಸಚಿವೆ ಎಂಬ ಹೆಸರು ಪಡೆದಿದ್ದರು.

ಅಟಲ್ ಬಿಹಾರಿ ವಾಜಪೇಯಿ ಅವರ ಸಂಪುಟದಲ್ಲಿ ಮಾಹಿತಿ ಪ್ರಸಾರ ಸಚಿವರಾಗಿ ಕಾರ್ಯ ನಿರ್ವಹಿಸಿದ್ದ ಸುಷ್ಮಾ ಸ್ವರಾಜ್, ಮೋದಿ ಸಂಪುಟದಲ್ಲಿ ವಿದೇಶಾಂಗ ಸಚಿವರಾಗಿ ಸೇವೆ ಸಲ್ಲಿಸಿದ್ದರು. 2019ರ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸುವುದಿಲ್ಲ ಎಂದು ಹೇಳುವ ಮೂಲಕ ಕೇಂದ್ರ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ರಾಜಕೀಯ ನಿವೃತ್ತಿ ಘೋಷಿಸಿದ್ದರು.

ಬಾಲ್ಯ ಜೀವನ:

ಸುಷ್ಮಾ ಸ್ವರಾಜ್ ಅವರು 1952ರ ಫೆಬ್ರವರಿ 14 ರಂದು ಹರಿಯಾಣದ ಅಂಬಾಲಾ ಕ್ಯಾಂಟ್ನಲ್ಲಿ ಜನಿಸಿದರು. ಇವರ ತಂದೆ ಹಾರ್ದೇವ್ ಶರ್ಮಾ ಮತ್ತು ತಾಯಿ ಲಕ್ಷ್ಮಿ ದೇವಿ. ಅವರು ಅಂಬಾಲಾ ಕಂಟೋನ್ಮೆಂಟ್​​​ನ ಸನಾತನ ಧರ್ಮ ಕಾಲೇಜಿನಲ್ಲಿ ಸಂಸ್ಕೃತ ಮತ್ತು ರಾಜ್ಯಶಾಸ್ತ್ರ ವಿಷಯಗಳಲ್ಲಿ ಪದವಿ ಪಡೆದರು. ಅವರು ಪಂಜಾಬ್ ವಿಶ್ವವಿದ್ಯಾಲಯದಲ್ಲಿ ಕಾನೂನು ಅಭ್ಯಾಸ ಮಾಡಿದರು.1973ರಲ್ಲಿ ಭಾರತದ ಸುಪ್ರೀಂ ಕೋರ್ಟ್​ನಲ್ಲಿ ವಕೀಲರಾಗಿ ಅಭ್ಯಾಸ ಆರಂಭಿಸಿದರು.

ರಾಜಕೀಯ ಜೀವನ:

ಸುಷ್ಮಾ ಸ್ವರಾಜ್ ಅವರು 1970ರಲ್ಲಿ ರಾಜಕೀಯ ವೃತ್ತಿಜೀವನವನ್ನು ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್​ನೊಂದಿಗೆ ಆರಂಭಿಸಿದರು. ಅವರ ಪತಿ ಸ್ವರಾಜ್ ಕೌಲ್, ಸಮಾಜವಾದಿ ನಾಯಕ ಜಾರ್ಜ್ ಫರ್ನಾಂಡಿಸ್​ ಅವರೊಂದಿಗೆ ನಿಕಟ ಸಂಬಂಧ ಹೊಂದಿದ್ದರು. ಸುಷ್ಮಾ ಸ್ವರಾಜ್ 1975ರಲ್ಲಿ ಜಾರ್ಜ್ ಫರ್ನಾಂಡಿಸ್ ಅವರ ಕಾನೂನು ರಕ್ಷಣಾ ತಂಡದ ಅಂಗವಾಗಿದ್ದರು. ಜಯಪ್ರಕಾಶ್ ನಾರಾಯಣರ ಒಟ್ಟು ಕ್ರಾಂತಿಯ ಚಳವಳಿಯಲ್ಲಿ ಅವರು ಸಕ್ರಿಯವಾಗಿ ಪಾಲ್ಗೊಂಡರು. ತುರ್ತು ಪರಿಸ್ಥಿತಿಯ ನಂತರ ಅವರು ಭಾರತೀಯ ಜನತಾ ಪಕ್ಷಕ್ಕೆ ಸೇರಿದರು. ನಂತರ ಅವರು ಬಿಜೆಪಿಯ ರಾಷ್ಟ್ರೀಯ ನಾಯಕರಾದರು.ಶಾಸಕರಾಗಿ ಮೊದಲ ಜರ್ನಿ ಯಾವಾಗ?ಅವರು 1977 ರಿಂದ 1983ರವರೆಗೆ ಹರಿಯಾಣ ವಿಧಾನಸಭೆಯ ಸದಸ್ಯರಾಗಿದ್ದರು. 25ನೇ ವಯಸ್ಸಿನಲ್ಲಿ ಅಂಬಾಲಾ ಕಂಟೋನ್ಮೆಂಟ್ ಶಾಸನ ಸಭೆಗೆ ಅವಕಾಶ ಪಡೆದರು.

1977 ರ ಜುಲೈನಲ್ಲಿ ಆಗಿನ ಮುಖ್ಯಮಂತ್ರಿ ದೇವಿ ಲಾಲ್ ಅವರ ನೇತೃತ್ವದಲ್ಲಿ ಜನತಾ ಪಕ್ಷದ ಸರಕಾರದಲ್ಲಿ ಕ್ಯಾಬಿನೆಟ್ ಸಚಿವರಾಗಿ ಅವರು ಪ್ರಮಾಣವಚನ ಸ್ವೀಕರಿಸಿದರು. ಅವರು 1979ರಲ್ಲಿ ಹರಿಯಾಣ ರಾಜ್ಯದ ಜನತಾ ಪಕ್ಷದ ರಾಜ್ಯ ಅಧ್ಯಕ್ಷರಾದರು. ಅವರು 1987 ರಿಂದ 1990ರ ಅವಧಿಯಲ್ಲಿ ಭಾರತೀಯ ಜನತಾ ಪಾರ್ಟಿ-ಲೋಕಸಭೆ ಒಕ್ಕೂಟದ ಸರಕಾರದಲ್ಲಿ ಹರಿಯಾಣದ ಶಿಕ್ಷಣ ಸಚಿವೆಯಾಗಿದ್ದರು.

ಮಾಹಿತಿ ಮತ್ತು ಪ್ರಸಾರ ಖಾತೆ ಸಚಿವೆಯಾಗಿ ಸಾಧನೆ

ದಕ್ಷಿಣ ದೆಹಲಿ ವಿಧಾನ ಸಭಾ ಕ್ಷೇತ್ರದಿಂದ 1998 ಮಾರ್ಚ್​​ನಲ್ಲಿ ಎರಡನೆಯ ಅವಧಿಗೆ ಆಯ್ಕೆ ಆಗಿದ್ದರು. ವಾಜಪೇಯಿ ಸರ್ಕಾರದಲ್ಲಿ ದೂರಸಂಪರ್ಕ ಸಚಿವಾಲಯದ ಮಾಹಿತಿ ಮತ್ತು ಪ್ರಸಾರದ ಕೇಂದ್ರ ಸಂಪುಟ ಸಚಿವರಾಗಿ ಕೆಲಸ ಮಾಡಿದ್ದರು.ವಿದೇಶಾಂಗ ಸಚಿವರಾಗಿ ಮೋದಿ ಅವಧಿಯಲ್ಲಿ ಭಾರಿ ಜನಮನ್ನಣೆ ಗಳಿಸಿದ್ದ ಸುಷ್ಮಾ ಸ್ವರಾಜ್​ ಅಮೆರಿಕ, ರಷ್ಯಾ, ಚೀನಾ, ಜಪಾನ್ ಗಳೊಂದಿಗೆ ಸ್ನೇಹ ಗಟ್ಟಿಗೊಳಿಸುವಲ್ಲಿ ಯಶಸ್ವಿಯಾಗಿದ್ದರು.

ಗಮನ ಸೆಳೆದಿದ್ದ ಬಳ್ಳಾರಿ ಚುನಾವಣೆ:

1999ರ ಲೋಕಸಭಾ ಚುನಾವಣೆಯಲ್ಲಿ ಬಳ್ಳಾರಿಯು ಇಡೀ ದೇಶದ ಗಮನ ಸೆಳೆದಿತ್ತು. ಕಾರಣ ಇಬ್ಬರು ಪ್ರಬಲ ಮಹಿಳಾ ರಾಜಕಾರಣಿಗಳ ರಾಜಕೀಯ ಕದನಕ್ಕೆ ಗಣಿನಾಡು ಸಾಕ್ಷಿಯಾಗಿತ್ತು. ಆ ಚುನಾವಣೆಯಲ್ಲಿ ಸೋನಿಯಾ ಗಾಂಧಿ ಅವರು ಬಳ್ಳಾರಿ ಹಾಗೂ ಅಮೇಠಿ ಎರಡೂ ಕಡೆ ಕಾಂಗ್ರೆಸ್​ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದರು. ಸುಷ್ಮಾ ಸ್ವರಾಜ್​ ಅವರು ಬಿಜೆಪಿ ಅಭ್ಯರ್ಥಿಯಾಗಿ ಕಣಕ್ಕೆ ಧುಮುಕಿದ್ದರು.

ಸುಷ್ಮಾ ಸ್ವರಾಜ್ ನಿರ್ವಹಿಸಿದ ಹುದ್ದೆಗಳು:
1977-82 –ಹರಿಯಾಣ ಶಾಸಕಿಯಾಗಿ ಆಯ್ಕೆ
1977-79 –ಹರಿಯಾಣ ಕಾರ್ಮಿಕ ಮತ್ತು ಉದ್ಯೋಗ ಸಚಿವೆ
1982-90 –ಹರಿಯಾಣ ಎಂಎಲ್‍ಎ ಆಗಿ ಆಯ್ಕೆ
1982-90 –ಶಿಕ್ಷಣ, ಆಹಾರ & ನಾಗರಿಕ ಸರಬರಾಜು ಸಚಿವೆ
1990-96– ರಾಜ್ಯಸಭೆಗೆ ಆಯ್ಕೆ
1996-97 –11ನೇ ಲೋಕಸಭೆ ಸದಸ್ಯೆ(ಎರಡನೆಯ ಅವಧಿ)
1996 –ಕೇಂದ್ರ ಮಾಹಿತಿ & ಪ್ರಸಾರ ಖಾತೆ ಸಚಿವೆ
1998 –ಹಾಜ್ ಖಾಸ್ ಕ್ಷೇತ್ರದಿಂದ ದೆಹಲಿ ಅಸೆಂಬ್ಲಿಗೆ ಆಯ್ಕೆ
1999 –ದೆಹಲಿ ಮುಖ್ಯಮಂತ್ರಿ
2000-06 –ರಾಜ್ಯಸಭಾ ಸದಸ್ಯೆ
2003-04 –ಆರೋಗ್ಯ & ಕುಟುಂಬ ಕಲ್ಯಾಣ ಹಾಗೂ ಸಂಸದೀಯ ವ್ಯವಹಾರಗಳ ಸಚಿವೆ
2006-09 –ರಾಜ್ಯಸಭಾ ಸದಸ್ಯೆ
2009-14 –15ನೇ ಲೋಕಸಭಾ ಸದಸ್ಯೆ
2009 –ಲೋಕಸಭೆಯಲ್ಲಿ ಪ್ರತಿಪಕ್ಷದ ಉಪ ನಾಯಕಿ
2009-14 –ಅಡ್ವಾಣಿ ಬದಲಿಗೆ ಪ್ರತಿಪಕ್ಷ ನಾಯಕಿ
2014 –16ನೇ ಲೋಕಸಭಾ ಸದಸ್ಯೆಯಾಗಿ ಆಯ್ಕೆಯಾಗಿ ವಿದೇಶಾಂಗ ಸಚಿವೆ ಆಗಿದ್ದರು.
ಹೀಗಿತ್ತು ಅವರ ವಿದೇಶಾಂಗ ನೀತಿಯ ಗಮ್ಮತ್ತು:
ಅದ್ಭುತ ವಾಗ್ಮಿಯಾಗಿದ್ದ ಸುಷ್ಮಾ ಅವರು, ಪಕ್ಷದ ತತ್ವ-ಸಿದ್ಧಾಂತಕ್ಕಾಗಿ ಸದಾ ಬದ್ಧರಾಗಿದ್ದರು. ಬಿಜೆಪಿಯ ಪ್ರಾಮಾಣಿಕ ನಾಯಕಿಯಾಗಿ, ಜನಪರ ಕೆಲಸಗಳನ್ನು ಮಾಡಿ ಭೇಷ್ ಎನಿಸಿಕೊಂಡಿದ್ದರು. ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ ಅವಧಿಯಿಂದ ಈಗಿನ ಪ್ರಧಾನಿ ನರೇಂದ್ರ ಮೋದಿ ನಾಯಕತ್ವದವರೆಗೂ ಅತ್ಯುತ್ತಮ ಕೆಲಸ ಮಾಡಿ ಎಲ್ಲರ ಮೆಚ್ಚುಗೆ ಪಡೆದಿದ್ದರು.ಜಮ್ಮು-ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ರದ್ದುಗೊಳಿಸಿದ್ದಕ್ಕೆ ಪ್ರಧಾನಿ ಮೋದಿಗೆ ಅಭಿನಂದನೆ ಸಲ್ಲಿಸಿದ್ದ ಸುಷ್ಮಾ ಸ್ವರಾಜ್ ಟ್ವೀಟ್ ಸಾವಿನ ಕೊನೆಯ ಕ್ಷಣಗಳಲ್ಲಿಯೂ ಪಕ್ಷದ ಸಿದ್ಧಾಂತಕ್ಕೆ ಬದ್ಧರಾಗಿದ್ದಾರೆ.

ಸುಷ್ಮಾ ಸ್ವರಾಜ್ ವಿದೇಶಾಂಗ ಸಚಿವರಾಗಿದ್ದ ಅವಧಿಯ ಗಮನ ಸೆಳೆಯುವಂತಹ ಕೆಲಸಗಳನ್ನು ಮಾಡಿದ್ದಾರೆ. ಅನಿವಾಸಿ ಭಾರತೀಯರ ಕಷ್ಟಕ್ಕೆ ಸ್ಪಂದಿಸಿ, ವಿದೇಶಾಂಗ ಇಲಾಖೆಯಲ್ಲಿ ಸಿದ್ಧ ಸೂತ್ರಗಳನ್ನು ಮೀರಿ ಮಹತ್ವದ ಬದಲಾವಣೆ ತಂದಿದ್ದರು. ಪಾಸ್ಪೋರ್ಟ್ ಮೂಲಸೌಕರ್ಯ ವಿಸ್ತರಣೆ ವಿಚಾರ, ಪೂರ್ವ ದೇಶಗಳೊಂದಿಗೆ ಬಾಂಧವ್ಯ ಬೆಸೆಯುವಲ್ಲಿ ಹಾಗೂ ಸಾಮಾಜಿಕ ಜಾಲತಾಣದ ಮೂಲಕ ಸಾರ್ವಜನಿಕರೊಂದಿಗೆ ನಿರಂತರ ಸಂಪರ್ಕದಲ್ಲಿ ಇದ್ದು ಸಮಸ್ಯೆಗಳಿಗೆ ಸ್ಪಂದಿಸಿ ಜನರ ನೆಚ್ಚಿನ ರಾಜಕಾರಣಿಯಾಗಿದ್ದರು.

ಹಲವು ಪ್ರಥಮಗಳ ಸಾಧಕಿ:ಅತ್ತುತ್ತಮ ಸಂಸದೀಯ ಪಟು’ ಪ್ರಶಸ್ತಿಗಳಿಸಿದ ಏಕೈಕ ಮಹಿಳಾ ಸಂಸದೆ ಎಂಬ ಹೆಗ್ಗಳಿಕೆ ಪಡೆದಿದ್ದ ಅವರು,4 ರಾಜ್ಯಗಳಿಂದ 11 ಚುನಾವಣೆ ಎದುರಿಸಿದ ಏಕೈಕ ಮಹಿಳಾ ರಾಜಕಾರಣಿಯಾಗಿದ್ದರು.ಸ್ಪೇನ್‍ನ ‘ಗ್ರಾಂಡ್ ಕ್ರಾಸ್ ಆಫ್ ಆರ್ಡರ್ ಆಫ್ ಸಿವಿಲ್ ಮೆರಿಟ್’ ಪ್ರಶಸ್ತಿ ಪಡೆದ ಮೊದಲ ಭಾರತೀಯ ಮಹಿಳೆಯೂ ಆಗಿ ಮಿಂಚಿದ್ದಾರೆ.4 ವರ್ಷಗಳ ಕಾಲ ಹರಿಯಾಣದ ‘ಹಿಂದಿ ಸಾಹಿತ್ಯ ಸಮ್ಮೇಳನ’ದ ಅಧ್ಯಕ್ಷೆಯಾಗಿ ಸುಷ್ಮಾ ಸೇವೆ ಸಲ್ಲಿಸಿದ್ದರು.

ABOUT THE AUTHOR

...view details