ನವದೆಹಲಿ: ದೆಹಲಿಯಲ್ಲಿರುವ ಎಲ್ಲ ಸರ್ಕಾರಿ ಮತ್ತು ಖಾಸಗಿ ಆಸ್ಪತ್ರೆಯನ್ನು ಸ್ಥಳೀಯರಿಗೆ ಮಾತ್ರ ಮೀಸಲಿಡಬೇಕು ಎಂದು ಆದೇಶ ಹೊರಡಿಸಿದ್ದ ದೆಹಲಿ ಎಎಪಿ ಸರ್ಕಾರಕ್ಕೆ ಇದೀಗ ಮುಖಭಂಗವಾಗಿದ್ದು, ಈ ಆದೇಶವನ್ನ ಲೆಫ್ಟಿನೆಂಟ್ ಗವರ್ನರ್ ಅನಿಲ್ ಬೈಜರ್ ರದ್ಧುಗೊಳಿಸಿದ್ದಾರೆ.
ದೆಹಲಿಯಲ್ಲಿ ಪ್ರತೀಯೊಬ್ಬರಿಗೂ ಚಿಕಿತ್ಸೆ ದೊರೆಯಬೇಕು. ಕೊರೊನಾ ವೈರಸ್ ಹರಡುತ್ತಿರುವ ಈ ಸಮಯದಲ್ಲಿ ರೋಗಿಗಳೊಂದಿಗೆ ತಾರತಮ್ಯ ಸರಿಯಲ್ಲ. ಬೇರೆ ರಾಜ್ಯದವರು ಎಂಬ ಕಾರಣಕ್ಕಾಗಿ ರೋಗಿಗಳಿಗೆ ಚಿಕಿತ್ಸೆ ನಿರಾಕರಿಸಬಾರದು ಎಂದಿದ್ದಾರೆ.
ಭಾನುವಾರ ಸುದ್ಧಿಗೊಷ್ಠಿ ನಡೆಸಿ ಮಾಹಿತಿ ನೀಡಿದ್ದ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ದೆಹಲಿಯಲ್ಲಿನ ಖಾಸಗಿ ಮತ್ತು ಸರ್ಕಾರಿ ಆಸ್ಪತ್ರೆ ಕೇವಲ ಇಲ್ಲಿನ ಜನರಿಗೆ ಮಾತ್ರ ಚಿಕಿತ್ಸೆ ನೀಡಲು ಮೀಸಲು ಎಂದು ಘೋಷಣೆ ಹೊರಡಿಸಿದ್ದರು. ಇಲ್ಲಿನ ಆಸ್ಪತ್ರೆಗಳು ಹೊರ ರಾಜ್ಯದ ಜನರಿಂದ ತುಂಬಿ ತುಳುಕುವುದನ್ನ ತಪ್ಪಿಸಲು ಈ ನಿರ್ಧಾರ ಕೈಗೊಂಡಿದ್ದಾಗಿ ಹೇಳಿದ್ದರು. ಆದರೆ ಇದೀಗ ಈ ನಿರ್ಧಾರ ರದ್ಧುಗೊಳಿಸಲಾಗಿದೆ.
ಇದೇ ವಿಚಾರಕ್ಕೆ ಸಂಬಂಧಿಸಿದಂತೆ ಕೇಜ್ರಿವಾಲ್ ಅಸಮಾಧಾನ ಹೊರಹಾಕಿ ಟ್ವೀಟ್ ಮಾಡಿದ್ದು, ಲೆಫ್ಟಿನೆಂಟ್ ಗವರ್ನರ್ ತೆಗೆದುಕೊಂಡಿರುವ ನಿರ್ಧಾರದಿಂದ ದೊಡ್ಡ ಸಮಸ್ಯೆ ಉದ್ಭವವಾಗಲಿದ್ದು, ದೆಹಲಿಯಲ್ಲಿ ಸ್ಥಳೀಯ ಜನರೇ ಚಿಕಿತ್ಸೆಗೆ ಪರದಾಡಬೇಕಾಗುತ್ತದೆ ಎಂದಿದ್ದಾರೆ. ಇದೇ ವಿಷಯಕ್ಕೆ ಸಂಬಂಧಿಸಿದಂತೆ ಮಾತನಾಡಿರುವ ಡಿಸಿಎಂ ಸಿಸೋಡಿಯಾ, ಈ ವಿಚಾರದಲ್ಲಿ ಬಿಜೆಪಿ ರಾಜಕೀಯ ಮಾಡ್ತಿದ್ದು, ಇದು ಸಲ್ಲದು ಎಂದಿದ್ದಾರೆ.