ಹೈದರಾಬಾದ್:ಇಂದು (ಜೂನ್ 26) ಅಂತಾರಾಷ್ಟ್ರೀಯ ಮಾದಕ ವಸ್ತು ವಿರೋಧಿ ದಿನಾಚರಣೆಯನ್ನು ವಿಶ್ವಾದ್ಯಂತ ಆಚರಿಸಲಾಗುತ್ತಿದೆ. ಈ ಜಗತ್ತನ್ನು ಮಾದಕ ವಸ್ತುಗಳಿಂದ ಮುಕ್ತವಾಗಿಸಿ ಆರೋಗ್ಯಕರ ಸಮಾಜ ನಿರ್ಮಾಣಕ್ಕಾಗಿ ಜಾಗತಿಕ ಸಹಕಾರ ಬೆಸೆಯಲು ಈ ದಿನ ಮುಡುಪಾಗಿದೆ.
1987 ರಲ್ಲಿ ಪ್ರಥಮ ಬಾರಿಗೆ ವಿಶ್ವಸಂಸ್ಥೆಯ ವತಿಯಿಂದ ಅಂತಾರಾಷ್ಟ್ರೀಯ ಮಾದಕ ವಸ್ತು ವಿರೋಧಿ ದಿನ ಆಚರಿಸಲಾಯಿತು. ಮಾದಕ ವಸ್ತುಗಳ ಬಳಕೆಯನ್ನು ತಡೆಯುವುದು ಹಾಗೂ ಮಾದಕ ವಸ್ತುಗಳ ಅಕ್ರಮ ಸಾಗಾಟ ನಿಯಂತ್ರಿಸುವುದು ಈ ದಿನಾಚರಣೆಯ ಮುಖ್ಯ ಉದ್ದೇಶವಾಗಿದೆ.
"ಉತ್ತಮ ಆರೈಕೆಗಾಗಿ ಉತ್ತಮ ಜ್ಞಾನ" (Better Knowledge for Better Care) ಎಂಬುದು ಈ ವರ್ಷದ ಘೋಷವಾಕ್ಯವಾಗಿದೆ. ಜಗತ್ತಿನಲ್ಲಿ ಮಾದಕ ವಸ್ತುಗಳಿಂದ ಉಂಟಾಗುತ್ತಿರುವ ಅನಾಹುತ, ಇದರಿಂದ ಮನುಷ್ಯರ ಆರೋಗ್ಯದ ಮೇಲಾಗುತ್ತಿರುವ ಪರಿಣಾಮಗಳ ಬಗ್ಗೆ ಜಾಗೃತಿ ಮೂಡಿಸಿ ಮಾದಕ ವಸ್ತು ಮುಕ್ತ ವಿಶ್ವವನ್ನು ನಿರ್ಮಾಣ ಮಾಡುವುದು ಈ ಘೋಷವಾಕ್ಯದ ಧ್ಯೇಯವಾಗಿದೆ.
ಭಾರತದಲ್ಲಿ ಹೆಚ್ಚುತ್ತಿದೆ ಮಾದಕ ವಸ್ತುಗಳ ಬಳಕೆ
ಕಳೆದ ಕೆಲ ದಶಕಗಳಲ್ಲಿ ಮಾದಕ ವಸ್ತುಗಳಿಂದಾಗಿ ದೇಶದ ಮಕ್ಕಳು ಹಾಗೂ ಯುವಜನತೆಯ ಭವಿಷ್ಯ ಹಾಳಾಗುತ್ತಿದೆ. ದೇಶದಲ್ಲಿ ಡ್ರಗ್ಸ್ ಹಾಗೂ ಅಲ್ಕೊಹಾಲ್ ಸೇವನೆಯಿಂದ ಸಂಭವಿಸುವ ಅರ್ಧಕ್ಕೂ ಹೆಚ್ಚು ಅಪರಾಧ ಪ್ರಕರಣಗಳು ಅಸ್ಸಾಂ, ದೆಹಲಿ, ಹರಿಯಾಣ, ಮಣಿಪುರ, ಮಿಜೋರಾಂ, ಸಿಕ್ಕಿಂ ಮತ್ತು ಉತ್ತರ ಪ್ರದೇಶ ರಾಜ್ಯಗಳಿಂದಲೇ ವರದಿಯಾಗುತ್ತಿವೆ. ಇನ್ನು ಡ್ರಗ್ಸ್ ಬಳಕೆಯಲ್ಲಿ ಪಂಜಾಬ್ ರಾಜ್ಯ ದೇಶದಲ್ಲೇ ಪ್ರಥಮ ಸ್ಥಾನದಲ್ಲಿದೆ. ಇನ್ನು ಕಳೆದ ಕೆಲ ವರ್ಷಗಳಿಂದೀಚೆಗೆ ಮಾದಕ ವಸ್ತುಗಳ ಅಕ್ರಮ ಸಾಗಾಟ ದೇಶದಲ್ಲಿ ವಿಪರೀತ ಹೆಚ್ಚುತ್ತಿರುವುದು ಕಳವಳಕಾರಿಯಾಗಿದೆ.
ಮಾದಕ ವ್ಯಸನಕ್ಕೆ ಬಲಿಯಾದವರಲ್ಲಿ ಕಂಡು ಬರುವ ಲಕ್ಷಣಗಳು
* ಪದೇ ಪದೇ ಡ್ರಗ್ಸ್ ಮೊರೆ ಹೋಗುವುದು
* ಮಾದಕ ಪದಾರ್ಥ ಸಿಗದಿದ್ದಾಗ ಹುಚ್ಚುಚ್ಚಾಗಿ ವರ್ತಿಸುವುದು