ನವದೆಹಲಿ: ಕೃಷಿ ಸಾಲ ಮನ್ನಾ ಮತ್ತು ಅತಿಥಿ ಶಿಕ್ಷಕರನ್ನು ಖಾಯಂಗೊಳಿಸುವುದೂ ಸೇರಿದಂತೆ ಚುನಾವಣೆಗೂ ಮೊದಲು ನೀಡಿದ್ದ ಭರವಸೆಗಳನ್ನು ಈಡೇರಿಸಲು ಮಧ್ಯಪ್ರದೇಶ ಸರ್ಕಾರ ವಿಫಲವಾದರೆ ಬೀದಿಗಿಳಿದು ಪ್ರತಿಭಟನೆ ನಡೆಸುವ ಬೆದರಿಕೆ ಹಾಕಿರುವ ಸಹೋದ್ಯೋಗಿ ಜ್ಯೋತಿರಾದಿತ್ಯ ಸಿಂಧಿಯಾ ಮಾತಿಗೆ ಪ್ರತಿಕ್ರಿಯಿಸಿರುವ ಮುಖ್ಯಮಂತ್ರಿ ಕಮಲ್ ನಾಥ್, ಮಾಡಲಿ ಬಿಡಿ ಎಂದಿದ್ದಾರೆ.
ನವದೆಹಲಿ ನಡೆದ ಸಮನ್ವಯ ಸಮಿತಿಯಲ್ಲಿ ಪಾಲ್ಗೊಳ್ಳಲು ತೆರಳುವ ಮೊದಲು ಮಾತನಾಡಿರುವ ಕಮಲ್ನಾಥ್, ಅವರು ಬೀದಿಗಿಳಿಯಲಿ ಎಂದು ಪ್ರತಿಕ್ರಿಯೆ ನೀಡಿದ್ದಾರೆ.
ಕಮಲ್ ನಾಥ್ ಅವರ ನಾಯಕತ್ವದಲ್ಲಿ ಸಿಂಧಿಯಾ ಅಸಮಾಧಾನ ಹೊಂದಿದ್ದಾರೆ ಎಂಬ ಊಹಾಪೋಹಗಳು ಹರಿದಾಡುತ್ತಿವೆ. ಕಳೆದ ಎರಡು ದಿನಗಳ ಹಿಂದೆ ಅತಿಥಿ ಉಪನ್ಯಾಸಕರನ್ನ ಕುರಿತು ಮಾತನಾಡಿದ್ದ ಸಿಂಧಿಯಾ, ನಿಮ್ಮ ಬೇಡಿಕೆಯನ್ನು ನಮ್ಮ ಸರ್ಕಾರದ ಪ್ರಣಾಳಿಕೆಯಲ್ಲಿ ಸೇರಿಸಲಾಗಿದೆ. ಪ್ರಣಾಳಿಕೆ ನಮ್ಮ ಪವಿತ್ರ ಪಠ್ಯವಾಗಿದೆ ಎಂದು ನಾನು ನಿಮಗೆ ಭರವಸೆ ನೀಡಲು ಬಯಸುತ್ತೇನೆ. ಸರ್ಕಾರಕ್ಕೆ ಬಂದು ವರ್ಷವಾಗಿದೆ, ಶಿಕ್ಷಕರು ಸ್ವಲ್ಪ ತಾಳ್ಮೆಯಿಂದಿರಬೇಕು. ನಿಮ್ಮ ಸರದಿ ಬರುತ್ತದೆ, ಇಲ್ಲದಿದ್ದರೆ ನಾನು ನಿಮಗೆ ಬೆಂಬಲ ನೀಡುತ್ತೇನೆ ಎಂದು ಸಿಂಧಿಯಾ ಹೇಳಿದ್ದರು.
'ಪ್ರಣಾಳಿಕೆಯಲ್ಲಿನ ಎಲ್ಲಾ ಭರವಸೆಗಳು ಈಡೇರದಿದ್ದರೆ, ನೀವು ಒಬ್ಬಂಟಿಯಾಗಿರುವಿರಿ ಎಂದು ಭಾವಿಸಬೇಡಿ. ಸಿಂಧಿಯಾ ಸಹ ನಿಮ್ಮೊಂದಿಗೆ ಬೀದಿಗಿಳಿಯಲಿದ್ದಾರೆ' ಎಂದು ಹೇಳಿದ್ದರು. ಈ ಹಿಂದೆ ಪ್ರತಿಕ್ರಿಯಿಸಿದ್ದ ಕಮಲ್ ನಾಥ್ 'ಪ್ರಣಾಳಿಕೆಗೆ ಐದು ವರ್ಷಗಳ ಕಾಲಾವಕಾಶ ಇದೆ ? ಇದು ಐದು ತಿಂಗಳುಗಳಲ್ಲ ಎಂದಿದ್ದರು.
ಮಧ್ಯಪ್ರದೇಶದಲ್ಲಿ 'ಪ್ರಣಾಳಿಕೆ ಭರವಸೆಗಳು' ಎಂಬ ಪದದ ಯುದ್ಧವು ರಾಜಕೀಯ ಮುಖಂಡರಿಂದ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗುತ್ತಿದ್ದು ಪಕ್ಷದೊಳಗಿನ ಆಂತರಿಕ ಭಿನ್ನಾಭಿಪ್ರಾಯಗಳನ್ನು ಪರಿಹರಿಸಬೇಕು ಎಂಬ ಮಾತು ಕೇಳಿಬರುತ್ತಿದೆ.