ಲೇಹ್ (ಲಡಾಖ್):ಕೇಂದ್ರಾಡಳಿತ ಪ್ರದೇಶವಾಗಿ ಘೋಷಣೆಯಾದಾಗಿನಿಂದ ಇದೇ ಮೊದಲ ಬಾರಿಗೆ ಲಡಾಖ್ನಲ್ಲಿ ಚುನಾವಣೆಯ ಗಾಳಿ ಬೀಸುತ್ತಿದೆ. ಲೇಹ್ನಲ್ಲಿರುವ ಲಡಾಕ್ ಸ್ವಾಯತ್ತ ಬೆಟ್ಟ ಅಭಿವೃದ್ಧಿ ಮಂಡಳಿಯ 26 ಸ್ಥಾನಗಳಿಗೆ ಅಕ್ಟೋಬರ್ 22ರಂದು ಚುನಾವಣೆ ನಡೆಯಲಿದೆ.
ಈ ಚುನಾವಣೆಯಲ್ಲಿ ಬಿಜೆಪಿ, ಕಾಂಗ್ರೆಸ್ ಹಾಗೂ ಆಪ್ ಪಕ್ಷಗಳ ತ್ರಿಕೋನ ಸ್ಪರ್ಧೆ ಇದ್ದು, ಎಲ್ಲಾ ಪಕ್ಷಗಳು ಅತ್ಯಧಿಕ ಸ್ಥಾನಗಳನ್ನು ಗೆಲ್ಲುವ ಸಲುವಾಗಿ ನಾನಾ ರೀತಿಯಲ್ಲಿ ಕಸರತ್ತು ನಡೆಸುತ್ತಿವೆ.
ಅಬ್ ಕಿ ಬಾರ್ 26 ಪಾರ್ ಎಂಬ ಘೋಷವಾಕ್ಯವನ್ನು ಬಿಜೆಪಿ ಇಟ್ಟುಕೊಂಡಿದ್ದು, ಇದೇ 26 ಕ್ಷೇತ್ರಗಳಲ್ಲಿ ಅಭ್ಯರ್ಥಿಗಳು ಪ್ರಚಾರ ನಡೆಸುತ್ತಿದ್ದಾರೆ. ಈ ಅಭ್ಯರ್ಥಿಗಳು ಯುವಕರಾಗಿದ್ದಾರೆ ಎಂದು ಬಿಜೆಪಿಯ ಜಿಲ್ಲಾ ಅಧ್ಯಕ್ಷ ನವಾಮ್ಗ್ ಸಂಸ್ಥಾನ್ ಹೇಳಿದ್ದಾರೆ. ಇದರ ಜೊತೆಗೆ ಯುವಕರನ್ನು ಪಕ್ಷದೆಡೆಗೆ ಸೆಳೆಯುವುದು ನಮ್ಮ ಮೊದಲ ಆಧ್ಯತೆ, ಲಡಾಖ್ನಲ್ಲಿ ರಾಜಕೀಯ ಸಬಲೀಕರಣ ನಮ್ಮ ಸಿದ್ಧಾಂತ ಎಂದು ಇದೇ ವೇಳೆ ಸ್ಪಷ್ಟನೆ ನೀಡಿದ್ದಾರೆ.
ಚುನಾವಣೆ ಕುರಿತು ಮಾತನಾಡಿರುವ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಲಡಾಖ್ ಕೇಂದ್ರಾಡಳಿತ ಪ್ರದೇಶವಾಗಿ ಘೋಷಣೆಯಾದಾಗ ನಾವು ಶಾಸಕಾಂಗಕ್ಕೆ ಹಾಗೂ ಮುಖ್ಯಮಂತ್ರಿ ಸ್ಥಾನವನ್ನೂ ನೀಡುವಂತೆ ಬೇಡಿಕೆ ಇಟ್ಟಿದ್ದೆವು. ಆದರೆ ಅದು ಸಾಧ್ಯವಾಗಲಿಲ್ಲ. ಲಡಾಖ್ನಲ್ಲಿ ಶೇಕಡಾ 95ರಷ್ಟು ಮಂದಿ ಬುಡಕಟ್ಟು ಜನಾಂಗದವರಿದ್ದಾರೆ. ಆರನೇ ಶೆಡ್ಯೂಲ್ ಪ್ರಕಾರ ಲಡಾಖ್ಗೆ ರಕ್ಷಣೆ ನೀಡಬೇಕೆಂಬುದು ನಮ್ಮ ಒತ್ತಾಯವಾಗಿದೆ ಎಂದು ಕಾಂಗ್ರೆಸ್ ಮುಖಂಡ ಆಗ್ರಹಿಸಿದ್ದಾರೆ.
ಆಪ್ ಪಕ್ಷವೂ ಕೂಡಾ ಈ ಚುನಾವಣೆಯಲ್ಲಿ ಭಾಗವಹಿಸಲಿದ್ದು, ಮೂಲಭೂತ ಅಭಿವೃದ್ಧಿಗೆ ಆದ್ಯತೆ ನೀಡಲಾಗುತ್ತದೆ, ಜನರ ಸಮಸ್ಯೆಗಳಿಗೆ ಸ್ಪಂದಿಸುವ ಅಭ್ಯರ್ಥಿಗಳನ್ನು ಕಣಕ್ಕೆ ಇಳಿಸಲಾಗುತ್ತದೆ ಎಂದು ಆಪ್ ವಕ್ತಾರ ರಿಂಚಿನ್ ನಮ್ಗ್ಯಾಲ್ ಹೇಳಿದ್ದಾರೆ.