ಚೆನ್ನೈ:ಭಾರತೀಯ ಚಿತ್ರರಂಗದ ಮೇರು ಗಾಯಕ ಡಾ. ಎಸ್.ಪಿ. ಬಾಲಸುಬ್ರಹ್ಮಣ್ಯಂ ನಿಧನರಾಗಿದ್ದಾರೆ. ಅವರಿಗೆ 74 ವರ್ಷ ವಯಸ್ಸಾಗಿತ್ತು. ಕೊರೊನಾ ಸೋಂಕು ದೃಢಪಟ್ಟ ಹಿನ್ನೆಲೆಯಲ್ಲಿ ಎಸ್ಪಿಬಿ ಅವರನ್ನು ಕಳೆದ ಆಗಸ್ಟ್ 5ರಂದು ಚೆನ್ನೈನ ಎಂಜಿಎಂ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಎಸ್ಪಿಬಿ ಅವರಿಗೆ ಗರಿಷ್ಠ ಲೈಫ್ ಸಪೋರ್ಟ್ ನೀಡಲಾಗಿತ್ತು. ಆದರೂ ಅವರನ್ನು ಉಳಿಸಿಕೊಳ್ಳಲು ಸಾಧ್ಯವಾಗಿಲ್ಲ. ಚಿಕಿತ್ಸೆ ಫಲಕಾರಿಯಾಗದೆ ಎಸ್.ಪಿ. ಬಾಲಸುಬ್ರಹ್ಮಣ್ಯಂ ಇವತ್ತು ಇಹಲೋಕದ ಯಾತ್ರೆ ಮುಗಿಸಿದರು. ದಕ್ಷಿಣ ಭಾರತ ಮಾತ್ರವಲ್ಲದೆ ಬಾಲಿವುಡ್ ಸೇರಿದಂತೆ ದೇಶದ ವಿವಿಧ ಭಾಷೆಗಳಲ್ಲಿ 40 ಸಾವಿರಕ್ಕೂ ಹೆಚ್ಚು ಹಾಡುಗಳನ್ನು ಎಸ್ಪಿಬಿ ಹಾಡಿದ್ದಾರೆ.
ಶ್ರೀಪತಿ ಪಂಡಿತಾರಾಧ್ಯುಲ ಬಾಲಸುಬ್ರಮಣ್ಯಂ, ಇದು ಎಸ್.ಪಿ. ಬಾಲಸುಬ್ರಮಣ್ಯಂ ಅವರ ಪೂರ್ತಿ ಹೆಸರು. 1946 ಜೂನ್ 4 ರಂದು ಆಂಧ್ರಪ್ರದೇಶದ ನೆಲ್ಲೂರಿನ ಕೊನೆಟಮ್ಮಪೇಟ ಎಂಬಲ್ಲಿ ಜನಿಸಿದ ಬಾಲು, ಹರಿಕಥಾ ವಿದ್ವಾಂಸ ಎಸ್.ಪಿ. ಸಾಂಬಮೂರ್ತಿ ಹಾಗೂ ಶಕುಂತಲಮ್ಮ ದಂಪತಿಯ ಸುಪುತ್ರ. ಅವರಿಗೆ ಒಬ್ಬ ಸಹೋದರ ಹಾಗೂ ಐವರು ಸಹೋದರಿಯರಿದ್ದಾರೆ. ಎಸ್ಪಿಬಿ ಪತ್ನಿಯ ಹೆಸರು ಸಾವಿತ್ರಿ. ಎಸ್ಪಿಬಿ-ಸಾವಿತ್ರಿ ದಂಪತಿಗೆ ಪಲ್ಲವಿ ಹಾಗೂ ಎಸ್.ಪಿ. ಚರಣ್ ಎಂಬ ಇಬ್ಬರು ಮಕ್ಕಳಿದ್ದು, ಎಸ್.ಪಿ. ಚರಣ್ ಕೂಡಾ ಹಿನ್ನೆಲೆ ಗಾಯಕರು. ಎಸ್ಪಿಬಿ ಸಹೋದರಿ ಎಸ್.ಪಿ. ಶೈಲಜಾ ಕೂಡಾ ಖ್ಯಾತ ಹಿನ್ನೆಲೆ ಗಾಯಕಿ.