ಆಗಸ್ಟ್ 13 ರಂದು ವಿಶ್ವ ಎಡಚರ (ಎಡಗೈಯನ್ನು ಹೆಚ್ಚಾಗಿ ಬಳಸುವವರು) ದಿನವಾಗಿದೆ. ಬಲಗೈ ಬಳಸುವವರ ಪ್ರಾಬಲ್ಯದ ಮಧ್ಯೆ ತಮ್ಮ ಎಡಗೈಯನ್ನು ಹೆಚ್ಚಾಗಿ ಬಳಕೆ ಮಾಡುವವರ ಅನುಕೂಲಗಳು ಹಾಗೂ ಅನಾನುಕೂಲಗಳ ಬಗ್ಗೆ ಜಾಗೃತಿ ಮೂಡಿಸಲೆಂದು ಅಂತಾರಾಷ್ಟ್ರೀಯ ಎಡಗೈ ಬಳಕೆದಾರರ ದಿನವನ್ನು ಆರಂಭಿಸಲಾಯಿತು.
ಮೆದುಳು ಒಂದು ನಿರ್ದಿಷ್ಟ ರೀತಿಯಲ್ಲಿ ಕಾರ್ಯ ನಿರ್ವಹಿಸುತ್ತದೆ. ಬಲ ಭಾಗದ ಮೆದುಳು ದೇಹದ ಎಡಭಾಗದ ಕಾರ್ಯಗಳನ್ನು ನಿಯಂತ್ರಿಸುತ್ತದೆ. ಅಂತೆಯೇ ಎಡ ಭಾಗದ ಮೆದುಳು ಬಲ ಭಾಗದ ದೇಹದ ಕಾರ್ಯಗಳನ್ನು ನಿಯಂತ್ರಿಸುತ್ತದೆ. ಯಾವ ವ್ಯಕ್ತಿ ಎಡಗೈಯನ್ನು ಹೆಚ್ಚಾಗಿ ಬಳಸುತ್ತಾರೆಯೋ ಅವರ ಬಲ ಭಾಗದ ಮೆದುಳು ಹೆಚ್ಚು ಕ್ರಿಯಾತ್ಮಕವಾಗಿರುತ್ತದೆ.
ವಿಶ್ವ ಎಡಚರ ದಿನ ಆಚರಣೆ: ಮೊದಲ ಅಂತಾರಾಷ್ಟ್ರೀಯ ಎಡಚರ ದಿನಾಚರಣೆಯನ್ನು ಆಗಸ್ಟ್ 13, 1992 ರಂದು ಪ್ರಾರಂಭಿಸಲಾಯಿತು. ಎಲ್ಲೆಡೆ ಎಡಗೈ ಬಳಕೆದಾರರು ತಮ್ಮ ದಿನವನ್ನು ಆಚರಿಸುತ್ತಾರೆ ಮತ್ತು ಈ ಮೂಲಕ ಎಡಗೈ ಬಳಕೆಯಿಂದಾಗುವ ಅನುಕೂಲಗಳು ಮತ್ತು ಅನಾನುಕೂಲಗಳ ಬಗ್ಗೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲಾಗುತ್ತಿದೆ.
ಜನಸಂಖ್ಯೆಯ ಸುಮಾರು 10 ಪ್ರತಿಶತ ದಷ್ಟು ಜನ ಎಡಗೈಯನ್ನು ಹೆಚ್ಚಾಗಿ ಬಳಸುತ್ತಾರೆ. ಎಡಗೈ ಬಳಕೆಯಿಂದ ಕೆಲವು ಅನುಕೂಲಗಳು ಮತ್ತು ಅನಾನುಕೂಲಗಳಿವೆ.
ಅನುಕೂಲಗಳು:
- ಲೆಫ್ಟೀಸ್ ಚುರುಕಾಗಿರುತ್ತಾರೆ ಮತ್ತು ಬುದ್ಧಿವಂತರು
- ಮಲ್ಟಿ ಟಾಸ್ಕಿಂಗ್ನಲ್ಲಿ ಉತ್ತಮರಾಗಿರುತ್ತಾರೆ
- ಲೆಫ್ಟೀಸ್ ಉತ್ತಮ ಜ್ಞಾಪಕ ಶಕ್ತಿ ಹೊಂದಿರುತ್ತಾರೆ
- ಕಲೆಯಲ್ಲಿ ಪರಿಣಿತರು
- ಪಾರ್ಶ್ವವಾಯುವಿನಿಂದ ಬೇಗ ಚೇತರಿಸಿಕೊಳ್ಳುತ್ತಾರೆ
- ವೇಗವಾಗಿ ಟೈಪ್ ಮಾಡಬಲ್ಲರು
ಅನಾನುಕೂಲಗಳು:
- ಎಡಗೈ ಹೆಚ್ಚಾಗಿ ಬಳಸುವ ಮಹಿಳೆಯರು ಸ್ತನ ಕ್ಯಾನ್ಸರ್ಗೆ ಗುರಿಯಾಗುವ ಸಾಧ್ಯತೆ ಹೆಚ್ಚು
- ಆವರ್ತಕ ಅಂಗ ಚಲನೆಯ ಅಸ್ವಸ್ಥತೆ ಹೆಚ್ಚು
- ಎಡಚರು ಖಿನ್ನತೆ ಮತ್ತು ಬೈಪೋಲಾರ್ ಡಿಸಾರ್ಡರ್ ಅಂತಹ ಮಾನಸಿಕ ಅಸ್ವಸ್ಥತೆಗೆ ಒಳಗಾಗುವ ಸಾಧ್ಯತೆ ಹೆಚ್ಚು
- ದಿ ಬ್ರಿಟಿಷ್ ಜರ್ನಲ್ ಆಫ್ ಹೆಲ್ತ್ ಸೈಕಾಲಜಿಯಲ್ಲಿ ಪ್ರಕಟವಾದ 2011 ರ ಅಧ್ಯಯನದ ಪ್ರಕಾರ ಎಡಚರು ಬಲಗೈ ಬಳಕೆದಾರರಿಗಿಂತ ಹೆಚ್ಚು ಅಲ್ಕೋಹಾಲ್ ಸೇವಿಸುತ್ತಿದ್ದಾರೆಂದು ವರದಿ ಮಾಡಿದೆ.
ಜಗತ್ತಿನ ಪ್ರಖ್ಯಾತ ಎಡಚರರು:
ಲಿಯನಾರ್ಡೊ ಡ ವಿಂಚಿ:ಎಡಚರಾಗಿದ್ದ ಲಿಯನಾರ್ಡೊ ಡ ವಿಂಚಿ ಬಹುಶಃ ಸಾರ್ವಕಾಲಿಕ ಪ್ರಸಿದ್ಧ ಎಡಗೈ ಕಲಾವಿದರಲ್ಲಿ ಒಬ್ಬರು. ಮ್ಯೂಸಿಯಂ ಆಫ್ ಸೈನ್ಸ್ ಪ್ರಕಾರ, ಡಾ.ವಿಂಚಿ ಮಿರರ್ ಬರಹಕ್ಕೆ (mirror writing) ಹೆಸರುವಾಸಿಯಾಗಿದ್ದರು. ಲಿಯನಾರ್ಡೊ ಡ ವಿಂಚಿ ವಿಶ್ವವಿಖ್ಯಾತ ‘ಮೊನಾಲಿಸಾ’, ‘ಲಾಸ್ಟ್ ಸಪ್ಪರ್’ ಸೇರಿದಂತೆ ಮುಂತಾದ ಅದ್ಭುತ ವರ್ಣಚಿತ್ರಗಳನ್ನು ರಚಿಸಿದರು.
ಮಹಾತ್ಮ ಗಾಂಧಿ: ರಾಷ್ಟ್ರಪಿತ ಮಹಾತ್ಮ ಗಾಂಧಿ ಅವರ ಅಹಿಂಸೆಯ ಮೇಲೆ ದೃಢವಾಗಿ ರೂಪಿಸಲ್ಪಟ್ಟ ಸಾಮೂಹಿಕ ಅವಿಧೇಯತೆಯ ಮೂಲಕ ದಬ್ಬಾಳಿಕೆಗೆ ಪ್ರತಿರೋಧವನ್ನು ಒಡ್ಡುವ ಸತ್ಯಾಗ್ರಹದ ಪರಿಕಲ್ಪನೆ ಭಾರತವನ್ನು ಸ್ವಾತಂತ್ರ್ಯಗೊಳಿಸಿತು. ಜಗತ್ತಿನಾದ್ಯಂತ ನಾಗರಿಕ ಹಕ್ಕುಗಳ ಮತ್ತು ಸ್ವಾತಂತ್ರ್ಯ ಆಂದೋಲನಗಳಿಗೆ ಸ್ಫೂರ್ತಿಯನ್ನು ನೀಡಿತು. ಇವರು ಸಹ ಎಡಗೈಯನ್ನೇ ಹೆಚ್ಚಾಗಿ ಬಳಸುತ್ತಿದ್ದರು.
ಮದರ್ ತೆರೇಸಾ:ಮದರ್ ತೆರೇಸಾ ಅನೇಕ ವಿಷಯಗಳಿಗೆ ಹೆಸರುವಾಸಿಯಾಗಿದ್ದಾರೆ. ಅದರಲ್ಲಿ ಒಂದು ಎಡಗೈ ಬಳಕೆ. ಅವರು ಸಹಿ ಮಾಡುತ್ತಿರುವ ಫೋಟೋಗಳಲ್ಲಿ ಎಡಗೈ ಬಳಸುತ್ತಿರುವುದನ್ನು ಕಾಣಬಹುದು. ಬಡವರ, ನಿರ್ಗತಿಕರ, ರೋಗಿಗಳ, ಅನಾಥರ, ವೃದ್ಧರ ಪರವಾಗಿ ಸಲ್ಲಿಸಿದ ಸೇವೆಯನ್ನು ಪರಿಗಣಿಸಿ ವಿಶ್ವದ ಅತ್ಯುನ್ನತ ಗೌರವವಾದ ನೊಬೆಲ್ ಶಾಂತಿ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗಿದೆ.
ಚಾರ್ಲಿ ಚಾಪ್ಲಿನ್: ವಿಶ್ವ ಕಂಡ ಮಹಾನ್ ಹಾಸ್ಯನಟ ಚಾರ್ಲಿ ಚಾಪ್ಲಿನ್, ಮೂಕ ಚಲನಚಿತ್ರ ಯುಗದ ಹಾಸ್ಯಕ್ಕೆ ಹೆಸರುವಾಸಿ. ಇವರು ಪಿಟೀಲು ನುಡಿಸುವ ದೃಶ್ಯಗಳನ್ನ ಸಹ ತೆರೆಯ ಮೇಲೆ ಕಾಣಬಹುದು. ಗಮನ ಹರಿಸುವ ವಿಚಾರವೆಂದರೆ ಅವರು ಯಾವಾಗಲೂ ತಮ್ಮ ಎಡಗೈಯನ್ನು ಪಿಟೀಲು ನುಡಿಸಲು ಬಳಸುತ್ತಿರುವುದನ್ನು ಗಮನಿಸಿರಬಹುದು.