ನವದೆಹಲಿ: ನೂತನ ಕೃಷಿ ಮಸೂದೆಗಳನ್ನು ವಿರೋಧಿಸಿ ರೈತರು ಹಾಗೂ ರೈತಪರ ಸಂಘಟನೆಗಳು ಪ್ರತಿಭಟನೆ ನಡೆಸುತ್ತಿರುವ ಬೆನ್ನಲ್ಲೇ ಕೇಂದ್ರ ಸರ್ಕಾರದ ಆರ್ಥಿಕ ನೀತಿಗಳನ್ನು ವಿರೋಧಿಸಿ ಕಾರ್ಮಿಕ ಒಕ್ಕೂಟಗಳು ಹಾಗೂ ಕಾಂಗ್ರೆಸ್ ಅಂಗ ಪಕ್ಷಗಳು ನವೆಂಬರ್ 26ರಂದು ರಾಷ್ಟ್ರವ್ಯಾಪಿ ಮುಷ್ಕರಕ್ಕೆ ಕರೆ ನೀಡಿವೆ.
16 ಎಡ ಸಂಘಟನೆಗಳು ಹಾಗೂ ಕಾಂಗ್ರೆಸ್ ಕರೆ ಕೊಟ್ಟಿರುವ ರಾಷ್ಟ್ರವ್ಯಾಪಿ ಪ್ರತಿಭಟನೆಗೆ ಪ್ರತಿಪಕ್ಷ ಕಾಂಗ್ರೆಸ್ಗೆ ಅದರ ಮಿತ್ರ ಪಕ್ಷಗಳು ಸಹ ಕೈಜೋಡಿಸಲಿವೆ. ಹೀಗಾಗಿ, ದೇಶದ ಹಲವು ಭಾಗಗಳಲ್ಲಿ ಸಾಮಾನ್ಯ ಜನಜೀವನದಲ್ಲಿ ವ್ಯತ್ಯಯ ಉಂಟಾಗುವ ಸಾಧ್ಯತೆ ಇದೆ.
ಕೇಂದ್ರ ಕಾರ್ಮಿಕ ಸಂಘಗಳ ಜಂಟಿ ಸಮಿತಿ ನೀಡಿದ ರಾಷ್ಟ್ರವ್ಯಾಪಿ ಮುಷ್ಕರ ಕರೆಗೆ ಬೆಂಬಲವಾಗಿ ಎಡ ಮತ್ತು ಕಾಂಗ್ರೆಸ್ ಕಾರ್ಯಕರ್ತರು ಸೋಮವಾರ ಕೋಲ್ಕತ್ತಾ, ದೆಹಲಿ ಸೇರಿದಂತೆ ಇತರೆ ನಗರಗಳಲ್ಲಿ ಬೀದಿಗಿಳಿದು ಧರಣಿ ನಡೆಸಿದರು.
ಎಡಪಂಥೀಯ ಅಧ್ಯಕ್ಷ ಬಿಮನ್ ಬೋಸ್, ಸಿಪಿಐ (ಎಂ) ರಾಜ್ಯ ಕಾರ್ಯದರ್ಶಿ ಸೂರ್ಯಕಾಂತ ಮಿಶ್ರಾ, ಕಾಂಗ್ರೆಸ್ ಸಂಸದ ಪ್ರದೀಪ್ ಭಟ್ಟಾಚಾರ್ಯ ಮತ್ತು ಟ್ರೇಡ್ ಯೂನಿಯನ್ ವಿಭಾಗಗಳ ಮುಖಂಡರ ನೇತೃತ್ವದಲ್ಲಿ 16 ಎಡ ಸಂಘಟನೆಗಳು ಮತ್ತು ಕಾಂಗ್ರೆಸ್ ಸದಸ್ಯರು ಲೆನಿನ್ ಪ್ರತಿಮೆಯಿಂದ ಉತ್ತರ ಕೋಲ್ಕತ್ತಾದ ಹೆಡುವಾ ಪಾರ್ಕ್ ಮೆರವಣಿಗೆ ನಡೆಸಿದರು.