ನವದೆಹಲಿ:ವಿಶ್ವ ಪರಿಸರ ದಿನದ ನಿಮಿತ್ತ ರಾಷ್ಟ್ರೀಯ ನಾಯಕರು ಜನತೆಗೆ ಶುಭಾಶಯ ವಿನಿಮಯ ಮಾಡುವುದರ ಜೊತೆಗೆ ಪರಿಸರ ಉಳಿಸಿ ಬೆಳೆಸುವ ಸಂದೇಶ ನೀಡಿದ್ದಾರೆ.
ಟ್ವೀಟ್ ಮೂಲಕ ಪರಿಸರ ದಿನದ ಶುಭ ಕೋರಿರುವ ಪ್ರಧಾನಿ ನರೇಂದ್ರ ಮೋದಿ, ವಿಶ್ವ ಪರಿಸರ ದಿನವಾದ ಇಂದು ಭೂಮಿಯ ಶ್ರೀಮಂತ ಜೀವವೈವಿಧ್ಯತೆ ಕಾಪಾಡುವ ನಮ್ಮ ಪ್ರತಿಜ್ಞೆಯನ್ನು ಪುನರುಚ್ಛರಿಸೋಣ. ನಮ್ಮೊಂದಿಗೆ ಧರಣಿಯಲ್ಲಿರುವ ಸಸ್ಯ ಮತ್ತು ಪ್ರಾಣಿಗಳ ಸಮೃದ್ಧತೆಯನ್ನು ಕಾಪಾಡಲು ಸಾಧ್ಯವಾದಷ್ಟು ಒಟ್ಟಾಗಿ ಕೆಲಸ ಮಾಡೋಣ. ಮುಂಬರುವ ಪೀಳಿಗೆಗೆ ಇನ್ನೂ ಉತ್ತಮವಾದ ಭೂಮಿಯನ್ನು ನೀಡೋಣ ಎಂದು ಮೋದಿ ಟ್ವೀಟ್ ಮಾಡಿದ್ದಾರೆ.
ಇನ್ನೊಂದೆಡೆ ಪರಿಸರ ದಿನದ ಶುಭಕೋರಿದ ರಾಷ್ಟ್ರಪತಿ ರಾಮನಾಥ್ ಕೋವಿಂದ್, ನಮ್ಮ ಪೂರ್ವಜರ ಬುದ್ಧಿವಂತಿಕೆಯು ಜೀವವೈವಿಧ್ಯತೆಯನ್ನು ರಕ್ಷಿಸಲು ಮತ್ತು ಪರಿಸರವನ್ನು ಸಂರಕ್ಷಿಸಲು ಕಲಿಸಿದೆ. ನಮ್ಮ ತಲೆಮಾರಿನ ನಂತರ ಈ ಹಸಿರು ಭೂಮಿಯನ್ನು ಉಳಿಸಲು ನಾವು ಇತರ ರಾಷ್ಟ್ರಗಳೊಂದಿಗೆ ಕೈಜೋಡಿಸಲು ಬದ್ಧರಾಗಿದ್ದೇವೆ ಎಂದು ತಿಳಿಸಿದರು.
ಪರಿಸರ ದಿನದ ನಿಮಿತ್ತ ಗಿಡ ನೆಡುವ ಮೂಲಕ ಬಿಜೆಪಿ ರಾಷ್ಟ್ರಾಧ್ಯಕ್ಷ ಜೆಪಿ ನಡ್ಡಾ, ಪರಿಸರ ಬೆಳೆಸುವ ಸಂದೇಶ ನೀಡಿದ್ದಾರೆ. ಪರಿಸರ ಉಳಿಸುವ ನಿಟ್ಟಿನಲ್ಲಿ ನಾವು ಇಡುವ ಒಂದು ಸಣ್ಣ ಹೆಜ್ಜೆ ಮುಂದೆ ಹೆಮ್ಮರವಾಗಿ ಬೆಳೆಯವಂತೆ ಮಾಡುತ್ತದೆ ಎಂದು ನಡ್ಡಾ ತಿಳಿಸಿದ್ದಾರೆ.