ನವದೆಹಲಿ:ಇ-ಸಿಗರೇಟ್,ತಂಬಾಕು ಸೇವನೆಯು ಆರೋಗ್ಯಕ್ಕೆ ಮಾರಕವಾದುದು. ಅಲ್ಲದೆ ಈ ಚಟದಿಂದ ಹೊರಬರುವುದು ಕೂಡ ಕಷ್ಟಸಾಧ್ಯವಾಗುತ್ತಿದೆ. ತಂಬಾಕು ಸೇವನೆಯಿಂದ ಜನರು ಕ್ಯಾನ್ಸರ್, ಡಯಾಬಿಟಿಸ್ ಹಾಗೂ ರಕ್ತದೊತ್ತಡಕ್ಕೆ ತುತ್ತಾಗುತ್ತಿದ್ದಾರೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು.
ಮನ್ ಕಿ ಬಾತ್ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಹಿರಿಯ ಹಿನ್ನೆಲೆ ಗಾಯಕಿ ಲತಾ ಮಂಗೇಶ್ಕರ್ ಅವರಿಗೆ ಹುಟ್ಟುಹಬ್ಬದ ಶುಭಾಶಯ ತಿಳಿಸಿದರು. ದೇಶದ ವಿವಿಧ ಯುಗಗಳನ್ನು ಕಂಡ ಹಿರಿಯರಾದ ಮಂಗೇಶ್ಕರ್ ಅವರನ್ನು ನಾವು ಸಹೋದರಿ ಎನ್ನುತ್ತೇವೆ. ಅವರೀಗ 90ನೇ ವರ್ಷಕ್ಕೆ ಕಾಲಿರಿಸಿದ್ದಾರೆ ಎಂದು ಹೇಳಿದರು.
ಇ-ಸಿಗರೇಟ್ ಬಗ್ಗೆ ಜನರಲ್ಲಿ ಸಣ್ಣಪ್ರಮಾಣದ ತಿಳುವಳಿಕೆ ಇದೆ. ಆದರೆ ಅವರಿಗೆ ಇ-ಸಿಗರೇಟ್ನ ಗಂಭೀರ ದುಷ್ಪರಿಣಾಮದ ಬಗ್ಗೆ ಗೊತ್ತಿಲ್ಲ ಎಂದರು. ಇದೇ ತಿಂಗಳ ಆರಂಭದಲ್ಲಿ ಕೇಂದ್ರ ಸರ್ಕಾರವು ಇ-ಸಿಗರೇಟ್ ನಿಷೇಧಿಸಿತ್ತು.
ಹೆಣ್ಣುಮಕ್ಕಳನ್ನು ಸನ್ಮಾನಿಸಿ:
ಇದೇ ವೇಳೆ ಪ್ರಧಾನಿ, ರಾಷ್ಟ್ರ ನಿರ್ಮಾಣಕ್ಕಾಗಿ ಹೆಣ್ಣುಮಕ್ಕಳು ನೀಡುತ್ತಿರುವ ಕೊಡುಗೆ ಗಮನಿಸಿ ದೀಪಾವಳಿಯ ಸಂದರ್ಭದಲ್ಲಿ ಅವರನ್ನು ಸನ್ಮಾನಿಸುವ ವಿಶೇಷ ಕಾರ್ಯಕ್ರಮಗಳನ್ನು ಆಯೋಜಿಸಬೇಕು. ಅಲ್ಲದೆ ಅವರ ಸಾಧನೆಯನ್ನು #BharatKiLakshmi ಎಂಬ ಬರಹದಡಿ ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡುವಂತೆ ತಿಳಿಸಿದರು.
ಡ್ಯಾನಿಲ್ ಮೆಡ್ವೆಡೆವ್ ಸ್ಫೂರ್ತಿ:
ಹಾಗೆಯೇ ಇತ್ತೀಚೆಗೆ ನಡೆದ ಯುಎಸ್ ಓಪನ್ ಟೆನ್ನಿಸ್ ಟೂರ್ನಿಯಲ್ಲಿ ರಷ್ಯಾದ ಆಟಗಾರ ಡ್ಯಾನಿಲ್ ಮೆಡ್ವೆಡೆವ್ ಅವರ ಕೆಚ್ಚೆದೆಯ ಆಟವನ್ನು ಮೋದಿ ಕೊಂಡಾಡಿದರು. ಅವರ ಆಟವು ಎಲ್ಲರಿಗೂ ಸ್ಫೂರ್ತಿ ಹಾಗೂ ಕ್ರೀಡಾ ಮನೋಭಾವವನ್ನು ತುಂಬುತ್ತದೆ ಎಂದರು. ಯುಎಸ್ ಓಪನ್ ಟೆನ್ನಿಸ್ ಟೂರ್ನಿಯಲ್ಲಿ ಡ್ಯಾನಿಲ್ ಮೆಡ್ವೆಡೆವ್ ಟೆನಿಸ್ ಲೋಕದ ದಿಗ್ಗಜ ತಾರೆ ರೋಜರ್ ಫೆಡರರ್ ಮಣಿಸಿ ಫೈನಲ್ ತಲುಪಿದ್ದರು. ಬಳಿಕ ಫೈನಲ್ನಲ್ಲಿ ನಡಾಲ್ ವಿರುದ್ಧ ಹೋರಾಡಿ 7-5, 6-3, 5-7, 4-6, 6-4 ಸೆಟ್ಗಳಿಂದ ಸೋತಿದ್ದರು.