ಜಮ್ಮು: ಜಮ್ಮು ಮತ್ತು ಕಾಶ್ಮೀರದಲ್ಲಿ ಕಳೆದೊಂದು ವಾರದಿಂದ ಧಾರಾಕಾರ ಮಳೆಯಾಗುತ್ತಿದ್ದು, ಜಮ್ಮು-ಶ್ರೀನಗರ ರಾಷ್ಟ್ರೀಯ ಹೆದ್ದಾರಿಯಲ್ಲಿ ಭೂ ಕುಸಿತ ಉಂಟಾಗಿ ಸಂಚಾರ ಕಡಿತಗೊಂಡಿದೆ.
ಇದಲ್ಲದೆ ರಾಮ್ಬನ್ ಜಿಲ್ಲೆಯ ಹಲವೆಡೆ ಭೂ ಕುಸಿತ ಉಂಟಾಗಿದೆ. ಇದರ ಜೊತೆಗೆ ಈ ಹೆದ್ದಾರಿಯ ಹಲವು ಭಾಗಗಳಲ್ಲಿ 300ಕ್ಕೂ ಹೆಚ್ಚಿನ ವಾಹನಗಳು ಸಿಲುಕಿಕೊಂಡಿವೆ.
ಈಗಾಗಲೇ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಹಾಗೂ ಗಡಿ ರಸ್ತೆ ಸಂಸ್ಥೆ ರಸ್ತೆಯನ್ನು ಸಂಚಾರಕ್ಕೆ ಅನುವು ಮಾಡಿಕೊಡಲು ಕಾರ್ಯಾಚರಣೆ ಆರಂಭಿಸಿದ್ದು, ರಸ್ತೆಗೆ ಕುಸಿದಿರುವ ಮಣ್ಣನ್ನು ಮೇಲೆತ್ತುವ ಕಾರ್ಯ ಮಾಡುತ್ತಿದೆ.
ಈ ನಡುವೆ ಲಡಾಖ್ ಸಂಪರ್ಕಿಸುವ ಕಾರ್ಗಿಲ್-ಶ್ರೀನಗರ ಹೆದ್ದಾರಿ ಟ್ರಾಫಿಕ್ನಿಂದ ಮುಕ್ತವಾಗಿದ್ದು, ವಾಹನ ಸಂಚಾರ ಎಂದಿನಂತಿದೆ. ಇನ್ನು ಕಿಶ್ತ್ವರ್-ಪದ್ದಾರ್ ಅಂತರ್ ಜಿಲ್ಲಾ ರಸ್ತೆ ಸಂಚಾರ ಮುಕ್ತವಾಗಿದ್ದು, ಭೂ ಕುಸಿತವನ್ನು ತೆರವುಗೊಳಿಸಲಾಗಿದೆ.