ರಾಂಚಿ:ಬಹುಕೋಟಿ ಮೇವು ಹಗರಣ ಪ್ರಕರಣದಲ್ಲಿ ದೋಷಿಯಾಗಿರುವ ಆರ್‌ಜೆಡಿ ನಾಯಕ ಲಾಲು ಪ್ರಸಾದ್ ಯಾದವ್ ಸಲ್ಲಿಸಿದ್ದ ಜಾಮೀನು ಅರ್ಜಿ ವಿಚಾರಣೆ ಇಂದು ಜಾರ್ಖಂಡ್ ಹೈಕೋರ್ಟ್‌ನಲ್ಲಿ ನಡೆಯಲಿದೆ.
ಅರ್ಜಿಯನ್ನು ಹೈಕೋರ್ಟ್ ನ್ಯಾಯಮೂರ್ತಿ ಅಪರೇಶ್ ಕುಮಾರ್ ಸಿಂಗ್ ಅವರು ವಿಚಾರಣೆ ನಡೆಸಲಿದ್ದಾರೆ. ಇದಕ್ಕೂ ಮೊದಲು ಲಾಲು ಪ್ರಸಾದ್ ಅವರ ಪರವಾಗಿ ನ್ಯಾಯಾಲಯಕ್ಕೆ ಅನೇಕ ಬಾರಿ ಅರ್ಜಿಯನ್ನು ಸಲ್ಲಿಸಲಾಗಿದ್ದರೂ ವಿಚಾರಣೆಯನ್ನು ಮುಂದೂಡಲಾಗಿತ್ತು. ಇನ್ನು ಸದ್ಯ ಲಾಲು 42 ತಿಂಗಳ ಜೈಲು ಶಿಕ್ಷೆಯನ್ನು ಪೂರ್ಣಗೊಳಿಸಿದ್ದಾರೆ.
1992 – 93ರಲ್ಲಿ ಚಾಯಿಬಾಸಾ ಖಜಾನೆಯಿಂದ ₹33.67 ಕೋಟಿ ಹಣವನ್ನು ಅಕ್ರಮವಾಗಿ ಪಡೆದ ಪ್ರಕರಣಕ್ಕೆ ಸಂಬಂಧಿಸಿದಂತೆ ಆರ್‌ಜೆಡಿ ಅಧ್ಯಕ್ಷ ಲಾಲು ಸೇರಿದಂತೆ ಒಟ್ಟು 16 ಮಂದಿಗೆ ಜೈಲು ಶಿಕ್ಷೆ ವಿಧಿಸಲಾಗಿತ್ತು. ಆ ಅವಧಿಯಲ್ಲಿ ಲಾಲು ಅವರೇ ಬಿಹಾರದ ಮುಖ್ಯಮುಂತ್ರಿ ಆಗಿದ್ದರು. ಈಗಾಗಲೇ ಲಾಲು ಅವರ ವಿರುದ್ಧ 4 ಕೇಸ್ಗಳು ದಾಖಲಾಗಿದ್ದು, ಅದರಲ್ಲಿ 3ಕ್ಕೆ ಜಾಮೀನು ದೊರೆತಿದೆ.
ಅರ್ಜಿದಾರರ ಪರ ವಕೀಲ ಕಪಿಲ್ ಸಿಬಲ್ ಮತ್ತು ಸಿಬಿಐ ವಕೀಲ ರಾಜೀವ್ ಸಿನ್ಹಾ ಅವರು ವಿಡಿಯೋ ಕಾನ್ಫರೆನ್ಸ್ ಮೂಲಕ ವಾದ ಮಂಡಿಸಿದ್ದರು. ಇನ್ನು ವಿಚಾರಣೆ ವೇಳೆ ರಾಜೀವ್ ಸಿನ್ಹಾ ಅವರು ಜಾಮೀನು ನೀಡುವುದನ್ನು ವಿರೋಧಿಸಿದ್ದರು.