ನವದೆಹಲಿ: ದೆಹಲಿ ಸರ್ಕಾರ ಮತ್ತು ಲೆಫ್ಟಿನೆಂಟ್ ಗವರ್ನರ್ ಮುಸುಕಿನ ಗುದ್ದಾಟಕ್ಕೆ ಕಾರಣವಾಗಿದ್ದ ಕೋವಿಡ್-19 ರೋಗಿಗಳಿಗೆ 5 ದಿನಗಳ ಸಾಂಸ್ಥಿಕ ಕ್ವಾರಂಟೈನ್ ಆದೇಶವನ್ನು ಲೆಫ್ಟಿನೆಂಟ್ ಗವರ್ನರ್ ಅನಿಲ್ ಬೈಜಾಲ್ ವಾಪಸ್ ಪಡೆದಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿರುವ ಲೆಫ್ಟಿನೆಂಟ್ ಗವರ್ನರ್, ಕೋವಿಡ್-19 ಸೋಂಕಿತರು ಚಿಕಿತ್ಸೆಗಾಗಿ ಆಸ್ಪತ್ರೆಗೆ ಹೋಗುವ ಅವಶ್ಯಕತೆ ಇಲ್ಲ. ಹೋಮ್ ಐಸೊಲೇಷನ್‌ನಲ್ಲಿ ಸೌಲಭ್ಯಗಳು ಇಲ್ಲದವರು ಮಾತ್ರ ಸಾಂಸ್ಥಿಕ ಕ್ವಾರಂಟೈನ್‌ಗೆ ಒಳಗಾಗಬಹುದು ಎಂದು ಸ್ಪಷ್ಟಪಡಿಸಿದ್ದಾರೆ.
ದೆಹಲಿ ಡಿಸಿಎಂ ಮನೀಶ್ ಸಿಸೋಡಿಯಾ ಪ್ರತಿಕ್ರಿಯಿಸಿ, ಲೆಫ್ಟಿನೆಂಟ್ ಗವರ್ನರ್ ಆದೇಶ ಹಿಂಪಡೆದಿರುವುದರಿಂದ ಕೋವಿಡ್-19 ರೋಗಿಗಳಿಗೆ ಹೋಮ್ ಐಸೊಲೇಷನ್ ಮುಂದುವರಿಯಲಿದೆ. ಆದೇಶ ಹಿಂಪಡೆದಿದ್ದಕ್ಕೆ ಅನಿಲ್ ಬೈಜಾಲ್ ಅವರಿಗೆ ಧನ್ಯವಾದ ಸಲ್ಲಿಸುತ್ತೇನೆ ಎಂದಿದ್ದಾರೆ.
ಕೊರೊನಾ ಸೋಂಕಿತರನ್ನು ಕಡ್ಡಾಯವಾಗಿ 5 ದಿನ ಸಾಂಸ್ಥಿಕ ಕ್ವಾರಂಟೈನ್ ಮಾಡಬೇಕು ಎಂಬ ಆದೇಶವನ್ನು ಅನಿಲ್ ಬೈಜಾಲ್ ನೀಡಿದ್ದರು. ಇದಕ್ಕೆ ಸಿಎಂ ಅರವಿಂದ್ ಕೇಜ್ರಿವಾಲ್ ಸರ್ಕಾರ ಆಕ್ಷೇಪ ವ್ಯಕ್ತಪಡಿಸಿ ಪ್ರತ್ಯೇಕವಾದ ಕ್ವಾರಂಟೈನ್ ಯಾಕೆ ಎಂದು ಪ್ರಶ್ನಿಸಿತ್ತು. ಅಲ್ಲದೆ, ಲೆಫ್ಟಿನೆಂಟ್ ಗವರ್ನರ್ ಅವರ ಆದೇಶಕ್ಕೆ ವಿರೋಧ ವ್ಯಕ್ತಪಡಿಸಿತ್ತು.