ನವದೆಹಲಿ: ಮಹಾರಾಷ್ಟ್ರದ ನಾಸಿಕ್ನಲ್ಲಿ ನಡೆದಿದ್ದ ಭೀಕರ ರಸ್ತೆ ಅಪಘಾತದಲ್ಲಿ 25 ಜನರು ಸಾವನ್ನಿಪ್ಪಿರುವುದಕ್ಕೆ ರಾಷ್ಟ್ರಪತಿ ರಾಮ್ನಾಥ್ ಕೋವಿಂದ್, ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ವಿವಿಧ ಗಣ್ಯರು ಟ್ವೀಟ್ ಮೂಲಕ ಸಂತಾಪ ಸೂಚಿಸಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿ ಸಂತಾಪ ಸೂಚಿಸಿರುವ ರಾಷ್ಟ್ರಪತಿ ರಾಮ್ನಾಥ್ ಕೋವಿಂದ್, "ಮಹಾರಾಷ್ಟ್ರದ ನಾಸಿಕ್ನಲ್ಲಿ ನಡೆದ ಭೀಕರ ಅಪಘಾತದ ಬಗ್ಗೆ ಕೇಳಿ ಬೇಸರವಾಯಿತು. ದುಖಃತಪ್ತ ಕುಟುಂಬಕ್ಕೆ ದೇವರು ದುಃಖವನ್ನು ಸಹಿಸಿಕೊಳ್ಳುವ ಶಕ್ತಿ ನೀಡಲಿ ಎಂದು ಪ್ರಾರ್ಥಿಸುವೆ. ಗಾಯಾಳುಗಳು ಆದಷ್ಟು ಬೇಗ ಚೇತರಿಸಿಕೊಳ್ಳಲಿ" ಎಂದು ಹಾರೈಸುವೆ ಎಂದಿದ್ದಾರೆ.
ಪ್ರಧಾನಿ ಮೋದಿ ಟ್ವೀಟ್ ಮಾಡಿ, "ಮಹಾರಾಷ್ಟ್ರದ ನಾಸಿಕ್ ಜಿಲ್ಲೆಯಲ್ಲಿ ಸಂಭವಿಸಿದ ಅಪಘಾತ ದುರಾದೃಷ್ಟಕರ. ವಿಷಯ ತಿಳಿದು ದುಃಖವಾಯಿತು, ದುಃಖತಪ್ತ ಕುಟುಂಬಗಳಿಗೆ ಸಮಾಧಾನ ಹೇಳಲು ಬಯಸುತ್ತೇನೆ. ಗಾಯಾಳುಗಳು ಬೇಗ ಗುಣಮುಖರಾಗಲಿ ಎಂದು ಹಾರೈಸುವೆ" ಎಂದು ಬರೆದುಕೊಂಡಿದ್ದಾರೆ.
ಇದನ್ನೂ ಓದಿ: ಆಟೋ ಸಮೇತ ಬಾವಿಗೆ ಬಿದ್ದ ಬಸ್... 25 ಮಂದಿ ದುರ್ಮರಣ!
ರಕ್ಷಣಾ ಸಚಿವ ರಾಜ್ನಾಥ್ ಸಿಂಗ್ ಟ್ವೀಟ್ ಮಾಡಿ,"ನಾಸಿಕ್ನಲ್ಲಿ ನಡೆದ ಅಪಘಾತದ ಸುದ್ದಿ ತಿಳಿದು ಬೇಸರವಾಯಿತು. ದುರಂತದಲ್ಲಿ ಪ್ರಾಣ ಕಳೆದುಕೊಂಡ ಕುಟುಂಬಗಳಿಗೆ ಹೃದಯಾಂತರಾಳದ ಸಂತಾಪ ಸೂಚಿಸುತ್ತಿದ್ದೇನೆ. ಗಾಯಗೊಂಡವರು ಶೀಘ್ರ ಗುಣಮುಖರಾಗಲಿ" ಎಂದಿದ್ದಾರೆ. ಇನ್ನು ಗೃಹ ಸಚಿವ ಅಮಿತ್ ಶಾ ಕೂಡ ಇದೇ ರೀತಿ ಸಂತಾಪ ಸೂಚಿಸಿದ್ದಾರೆ.
ಇನ್ನು, ಈ ಬಗ್ಗೆ ಟ್ವೀಟ್ ಮಾಡಿರುವ ಮಹಾರಾಷ್ಟ್ರ ಮಾಜಿ ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್, "ಮಾಲೆಗಾಂವ್-ಡಿಯೋಲಾ ರಸ್ತೆಯಲ್ಲಿ ಮಹಾರಾಷ್ಟ್ರ ರಾಜ್ಯ ರಸ್ತೆ ಸಾರಿಗೆ ನಿಗಮದ ಬಸ್ ಮತ್ತು ಆಟೋರಿಕ್ಷಾ ನಡುವೆ ಡಿಕ್ಕಿ ಸಂಭವಿಸಿ 25ರಿಂದ 30 ಜನರು ಸಾವನ್ನಪ್ಪಿದ್ದು, ಇತರರನ್ನು ರಕ್ಷಣೆ ಮಾಡಲಾಗಿದೆ. ದುರ್ಘಟನೆಯಲ್ಲಿ ತಮ್ಮ ಪ್ರೀತಿ ಪಾತ್ರರನ್ನು ಕಳೆದುಕೊಂಡವರಿಗೆ ನಾನು ಸಂತಾಪ ಸೂಚಿಸುತ್ತೇನೆ. ಗಾಯಾಳುಗಳ ಶೀಘ್ರ ಚೇತರಿಕೆಗೆ ಪ್ರಾರ್ಥಿಸುತ್ತೇನೆ" ಎಂದಿದ್ದಾರೆ.