ಸಂವಿಧಾನವನ್ನು ಅಂಗೀಕರಿಸಿದ ನೆನಪಿಗಾಗಿ ಪ್ರತಿವರ್ಷ ನವೆಂಬರ್ 26ರಂದು ಸಂವಿಧಾನ ದಿನ (ರಾಷ್ಟ್ರೀಯ ಕಾನೂನು ದಿನ) ಎಂದು ಆಚರಿಸುತ್ತೇವೆ. ಭಾರತವು ತನ್ನದೇ ಆದ ಸಂವಿಧಾನವನ್ನು ಅಳವಡಿಸಿಕೊಂಡ ದಿನ 1950 ಜನವರಿ 26. ಸಂವಿಧಾನವು 1949ರ ನವೆಂಬರ್ 26ರಲ್ಲಿಯೇ ಸಿದ್ಧಗೊಂಡು ಸಂಸತ್ನ ಅಂಗೀಕಾರ ಪಡೆದುಕೊಂಡಿತ್ತು. ಆದರೂ ಅದರ ಅಳವಡಿಕೆಗೆ ಜನವರಿ 26ರವರೆಗೂ ಕಾಯಲಾಯಿತು. ಬಳಿಕ ಅಂದಿನಿಂದ ಭಾರತದ ಇತಿಹಾಸದಲ್ಲಿ ಹೊಸಯುಗವೂ ಆರಂಭಗೊಂಡಿತು.
ಇಲ್ಲಿವೆ ನೋಡಿ.. ಪ್ರತಿಯೊಬ್ಬರೂ ತಿಳಿದುಕೊಳ್ಳಬೇಕಾದ ಭಾರತದ ಸಂವಿಧಾನದ ಕುತೂಹಲಕಾರಿ ಸಂಗತಿಗಳು ಇಂತಿವೆ
*ಸಂವಿಧಾನದ ಕರಡು ರಚನೆಯಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಅವರ ಪಾತ್ರ ಬಹು ದೊಡ್ಡದು. ಮಾನವೀಯ ಮೌಲ್ಯಗಳ ರಕ್ಷಣೆಗೆ ಶ್ರಮಿಸಿದ ಅಂಬೇಡ್ಕರ್ ಅವರ ಕಾರ್ಯಕ್ಕೆ ಇಡೀ ಭಾರತ ಇಂದಿಗೂ ಅವರನ್ನು ನೆನೆಯುತ್ತದೆ.
* 448 ವಿಧಿಗಳು, 12 ಅನುಚ್ಛೇದಗಳು, 25 ಭಾಗಗಳನ್ನು ಹೊಂದಿರುವ ಈ ಸಂವಿಧಾನವು ವಿಶ್ವದ ಅತಿದೊಡ್ಡ ಲಿಖಿತ ಸಂವಿಧಾನವಾಗಿದೆ.
* ಭಾರತದ ಮೂಲ ಸಂವಿಧಾನವನ್ನು ಕೈಬರಹದಲ್ಲಿ ಸಿದ್ದಪಡಿಸಿದ್ದು ಪ್ರೇಮ್ ಬಿಹಾರಿ ನರೈನ್ ರೈಜಾಡಾ. ಸುಂದರವಾದ ಕ್ಯಾಲಿಗ್ರಫಿಯೊಂದಿಗೆ ಇಟಾಲಿಕ್ ಶೈಲಿಯಲ್ಲಿ ಅವರು ಅದನ್ನು ಬರವಣಿಗೆಗೆ ಇಳಿಸಿದರು. ಅಲ್ಲದೆ, ಈ ಸಂವಿಧಾನ ಪೂರ್ಣಗೊಳಿಸಲು ತೆಗೆದುಕೊಂಡ ಕಾಲಾವಧಿ 6 ತಿಂಗಳು. ಮತ್ತೊಂದೆಡೆ, ನಂದಲಾಲ್ ಬೋಸ್ ಮತ್ತು ಶಾಂತಿನಿಕೇತನ ಕಲಾವಿದರ ತಂಡದೊಂದಿಗೆ ಸಂವಿಧಾನದ ಪ್ರತಿಯೊಂದು ಪುಟವೂ ಸೊಗಸಾಗಿ ಮೂಡಿ ಬರುವಂತೆ ಶ್ರಮಿಸಿದರು.
* 1946ರ ಡಿಸೆಂಬರ್ 9 ರಂದು ನಡೆದ ಸಂವಿಧಾನ ಸಭೆ, ಸ್ವತಂತ್ರ ಭಾರತದ ಮೊದಲ ಸಂಸತ್ತು. ಅಂದು ಸಭೆ ಸೇರಿದಾಗ ಡಾ.ಸಚ್ಚಿದಾನಂದ ಸಿನ್ಹಾ ಅವರು ಸಭೆಯ ಮೊದಲ ಹಂಗಾಮಿ ಅಧ್ಯಕ್ಷರಾಗಿ ನೇಮಕಗೊಂಡರು.