ಹೈದರಾಬಾದ್: ದೆಹಲಿಯ ನಿಜಾಮುದ್ದೀನ್ ಪ್ರದೇಶದ ಮಸೀದಿಯೊಂದರಲ್ಲಿ ನಡೆದ, 2000 ಜನ ಭಾಗವಹಿಸಿದ್ದ ಮುಸ್ಲಿಂ ಧಾರ್ಮಿಕ ಸಮಾವೇಶದ ಕಾರಣದಿಂದ ಭಾರತದಲ್ಲಿ ಕೋವಿಡ್-19 ಸೋಂಕಿನ ಪ್ರಕರಣಗಳು ವ್ಯಾಪಕವಾಗಿ ಹರಡುತ್ತಿರುವುದು ಆತಂಕಕ್ಕೆ ಕಾರಣವಾಗಿದೆ.
ತಬ್ಲೀಘಿ ಜಮಾತ್ ಎಂದು ಕರೆಯಲಾದ ಈ ಧಾರ್ಮಿಕ ಸಮಾವೇಶದ ಬಗೆಗಿನ ಕುತೂಹಲಕಾರಿ ವಿಷಯಗಳು ಇಲ್ಲಿವೆ.
ತಬ್ಲೀಘಿ ಜಮಾತ್ (ಶಾಂತಿ ಪ್ರಚಾರಕ ಸಮಾಜ) ಇದೊಂದು ಸುನ್ನಿ ಮುಸ್ಲಿಂ, ಲಾಭ ರಹಿತ ಸಮಾಜ ಸೇವಾ ಸಂಘಟನೆಯಾಗಿದೆ. ಈ ಜಮಾತ್ ಚಳವಳಿಯನ್ನು 1927 ರಲ್ಲಿ ಮುಹಮ್ಮದ್ ಇಲಿಯಾಸ್ ಅಲ್-ಕಂಧಲಾವಿ ಎಂಬುವರು ಆರಂಭಿಸಿದರು. 2010 ರಷ್ಟೊತ್ತಿಗೆ ದೇಶ-ವಿದೇಶಗಳಲ್ಲಿ 80 ಮಿಲಿಯನ್ಗೂ ಅಧಿಕ ಜನ ಇದರ ಅನುಯಾಯಿಗಳಾಗಿ ಗುರುತಿಸಿಕೊಂಡರು. ಇಸ್ಲಾಂ ಧರ್ಮದ 'ಸುವರ್ಣ ಯುಗ'ವನ್ನು ಮರಳಿ ಸ್ಥಾಪಿಸುವುದು ತಬ್ಲೀಘಿ ಜಮಾತ್ನ ಮುಖ್ಯ ಗುರಿಯಾಗಿದೆ. ಸಾಮಾನ್ಯ ಮುಸ್ಲಿಮರಿಗೆ ಆಮಂತ್ರಣ (ತಬ್ಲೀಘ್) ನೀಡುವ ಮೂಲಕ ಇಸ್ಲಾಂನ ಆರು ಪ್ರಮುಖ ಅಡಿಪಾಯಗಳಡಿಯಲ್ಲಿ ಪ್ರವಾದಿ ಮಹಮ್ಮದ್ ಅವರು ಹೇಳಿದಂತೆ ಇಸ್ಲಾಂ (ಖಿಲಾಫತ್) 'ಸುವರ್ಣ ಯುಗ' ವನ್ನು ಸ್ಥಾಪಿಸುವುದು ತಬ್ಲೀಘಿ ಜಮಾತ್ನ ಉದ್ದೇಶ ಎಂದು ಜಾರ್ಜ್ಟೌನ್ ವಿವಿಯ ಬರ್ಕಲೇ ಸೆಂಟರ್ ಪ್ರಕಟಿಸಿದ ವರದಿಯೊಂದರಲ್ಲಿ ಹೇಳಲಾಗಿದೆ.
ಮೂಲ ಸುನ್ನಿ ಇಸ್ಲಾಂನ ಆಚಾರ, ವಿಚಾರ, ವೇಷಭೂಷಣ, ನಡವಳಿಕೆಗಳ ಬಗ್ಗೆ ತಬ್ಲೀಘಿ ತನ್ನ ಗಮನ ಕೇಂದ್ರೀಕರಿಸಿದೆ. ತಬ್ಲೀಘಿ ಜಮಾತ್ ಇದು 20 ನೇ ಶತಮಾನದ ಅತ್ಯಂತ ಪ್ರಭಾವಶಾಲಿ ಧಾರ್ಮಿಕ ಚಳವಳಿಗಳಲ್ಲೊಂದಾಗಿ ಗುರುತಿಸಲ್ಪಟ್ಟಿದೆ.
ಈ ಸಮಾಜದ ಧರ್ಮ ಪ್ರಚಾರಕರು 40 ದಿನಗಳ ಕಾಲ ತಮ್ಮ ನೆರೆಹೊರೆಯವರೊಂದಿಗೆ ಸಂವಾದ ನಡೆಸುತ್ತಾರೆ, ಅವರನ್ನು ಮಸೀದಿಯಲ್ಲಿ ನಡೆಯುವ ನಮಾಜ್ ಹಾಗೂ ಪ್ರವಚನಗಳಿಗೆ ಆಹ್ವಾನಿಸುತ್ತಾರೆ. ಅಲ್ಪಾವಧಿಯ ಪ್ರವಚನ ಮಾಲೆಗಳಿಗೆ ಹಾಜರಾಗುವಂತೆ ಅನುಯಾಯಿಗಳನ್ನು ಆಹ್ವಾನಿಸಲಾಗುತ್ತದೆ. ಇದನ್ನು ಖುರುಜ್ ಎಂದು ಕರೆಯಲಾಗಿದ್ದು, ಈ ಅವಧಿ ಕೆಲ ದಿನಗಳಿಂದ ಹಿಡಿದು ಕೆಲವು ತಿಂಗಳುಗಳವರೆಗೂ ಮುಂದುವರೆಯಬಹುದು.
ಈಗ ಕೆಲ ದಿನಗಳ ಹಿಂದೆ ದೆಹಲಿಯ ನಿಜಾಮುದ್ದೀನ್ ಪ್ರದೇಶದಲ್ಲಿ ನಡೆದ ತಬ್ಲೀಘಿ ಜಮಾತ್ ಸಮಾವೇಶದ ನಂತರ ಲಾಕ್ಡೌನ್ ಕಾರಣದಿಂದ ಅಲ್ಲಿ ನೆರೆದಿದ್ದವರೆಲ್ಲ ಅಲ್ಲಿಯೇ ಉಳಿದುಕೊಂಡರು. ಇನ್ನು ಕೆಲವರು ತಮ್ಮ ತಮ್ಮ ರಾಜ್ಯಗಳಿಗೆ ಮರಳಿ ಕೋವಿಡ್ ಸೋಂಕು ವ್ಯಾಪಕವಾಗಿ ಹರಡಲು ಕಾರಣರಾದರು. ಈ ಸಮಾವೇಶದಲ್ಲಿ ಪಾಲ್ಗೊಂಡು ತೆಲಂಗಾಣದ ಕರೀಮನಗರಕ್ಕೆ ಹಾಗೂ ತಮಿಳುನಾಡಿನ ಈರೋಡ್ ಜಿಲ್ಲೆಗೆ ಹೋದ ಇಂಡೋನೇಶಿಯಾದವರೇ ಅಲ್ಲೆಲ್ಲ ಕೋವಿಡ್ ಸೋಂಕು ವ್ಯಾಪಕವಾಗಿ ಹರಡಲು ಕಾರಣರಾದರು ಎಂಬುದು ಬೆಳಕಿಗೆ ಬಂದಿದೆ.