ಭೋಪಾಲ್: ಮಧ್ಯಪ್ರದೇಶ ಮಾಜಿ ಮುಖ್ಯಮಂತ್ರಿ ಕಮಲ್ನಾಥ್ ಇತ್ತೀಚೆಗೆ ಒಂದಿಲ್ಲೊಂದು ವಿವಾದದ ಸುಳಿಯಲ್ಲಿ ಸಿಲುಕುತ್ತಲೇ ಇದ್ದಾರೆ. ಇದೀಗ ಬಿಜೆಪಿ ನಾಯಕಿ ಇಮಾರ್ತಿ ದೇವಿಯವರಿಗೆ ‘ಐಟಂ’ ಅನ್ನೋ ಪದ ಬಳಸುವ ಮೂಲಕ ಮತ್ತೆ ವಿವಾದದಲ್ಲಿ ಸಿಲುಕಿದ್ದಾರೆ.
ಈ ಪದ ಬಳಕೆ ಬಗ್ಗೆ ಪ್ರತಿಕ್ರಿಯಿಸಿರುವ ಇಮಾರ್ತಿ ದೇವಿ, ಕಮಲ್ನಾಥ್ನನ್ನು ನನ್ನ ಹಿರಿಯ ಸಹೋದರ ಎಂದುಕೊಂಡಿದ್ದೆ, ಆದರೆ ಅವರು ನನ್ನ ಬಗ್ಗೆ ಅಗೌರವದ ಮಾತನ್ನಾಡಿದ್ದಾರೆ. ಈ ಬಗ್ಗೆ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾಗಾಂಧಿ ಅವರು ಪರಿಶೀಲಿಸಿ ಕಮಲ್ನಾಥ್ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದ್ದಾರೆ.
ಮಧ್ಯಪ್ರದೇಶದ 28 ವಿಧಾನಸಭಾ ಕ್ಷೇತ್ರಗಳಲ್ಲಿ ಉಪಚುನಾವಣೆ ನಡೆಯುತ್ತಿರುವ ಈ ಸಮಯದಲ್ಲಿ ಕಮಲ್ನಾಥ್ ಅವರ ಈ ಹೇಳಿಕೆ ಕಾಂಗ್ರೆಸ್ ಪಕ್ಷಕ್ಕೆ ಮುಜುಗರವನ್ನುಂಟು ಮಾಡಿದೆ. ಕಮಲ್ ಅವರ ಈ ಮಾತಿಗೆ ಸಿಎಂ ಶಿವರಾಜ್ ಸಿಂಗ್ ಚೌಹಾಣ್ ವಿರೋಧ ವ್ಯಕ್ತಪಡಿಸಿದ್ದು, ನಿನ್ನೆ ಮೌನವ್ರತ ಮಾಡಿದ್ದರು.
ಉಪಚುನಾವಣಾ ಸಂದರ್ಭದಲ್ಲಿ ಕಾಂಗ್ರೆಸ್ನ ಈ ಹೇಳಿಕೆಯ ರಾಜಕೀಯ ಲಾಭವನ್ನ ಪಡೆಯಲು ಬಿಜೆಪಿ ಯತ್ನಿಸುತ್ತಿದೆ. ಗ್ವಾಲಿಯರ್ ಹಾಗೂ ಚಂಬಲ್ ಪ್ರದೇಶದಲ್ಲಿ ಹೆಚ್ಚಾಗಿ ದಲಿತ ಸಮುದಾಯವರಿದ್ದಾರೆ. ಕಮಲ್ ಅವರ ಈ ಮಾತು ದಲಿತ ಮಹಿಳೆಗೆ ಅವಮಾನ ಎಂದು ಹೇಳಿರುವ ಬಿಜೆಪಿ, ದಲಿತ ಮತಗಳನ್ನ ಪಡೆಯಲು ದಾರಿ ಮಾಡಿಕೊಂಡಿದೆ. ಅಲ್ಲದೆ ಬಿಎಸ್ಪಿ ನಾಯಕಿ ಮಾಯಾವತಿ ಕೂಡ ಕಮಲ್ನಾಥ್ ಹೇಳಿಕೆ ಖಂಡಿಸಿದ್ದು, ಇದೊಂದು ನಾಚಿಕೆಗೇಡಿನ ಹೇಳಿಕೆ. ಕಾಂಗ್ರೆಸ್ ಹೈಕಮಾಂಡ್ ಸಾರ್ವಜನಿಕವಾಗಿ ಇಮಾರ್ತಿ ಅವರ ಬಳಿ ಕ್ಷಮೆಯಾಚಿಸಬೇಕೆಂದು ಒತ್ತಾಯಿಸಿದ್ದಾರೆ.
ಮತ್ತೆ ಅಧಿಕಾರಕ್ಕೇರುವ ಕನಸು ಕಂಡಿದ್ದ ಕಮಲ್ನಾಥ್ಗೆ ಈ ಪದಬಳಕೆ ಮತ್ತಷ್ಟು ಹಿನ್ನಡೆಯನ್ನುಂಟು ಮಾಡಿದೆ. ಇಡೀ ದಲಿತ ಸಮುದಾಯ ಮಾಜಿ ಸಿಎಂ ವಿರುದ್ಧ ತಿರುಗಿ ಬಿದ್ದಿದ್ದು, ಗ್ವಾಲಿಯರ್ ಮತ್ತು ಚಂಬಲ್ ಪ್ರದೇಶದಲ್ಲಿ ಪ್ರತಿಭಟನೆಗಳು ನಡೆಯುತ್ತಿವೆ.
ಈ ಹೇಳಿಕೆ ಬಗ್ಗೆ ಪ್ರತಿಕ್ರಿಯಿಸಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ನಮ್ಮ ಪಕ್ಷದ ನಾಯಕರೊಬ್ಬರು ಈ ರೀತಿಯ ಹೇಳಿಕೆ ನೀಡಿರುವುದು ತಪ್ಪು ಎಂದಿದ್ದಾರೆ.
ತಾವಾಡಿರುವ ಮಾತಿಗೆ ಸ್ಪಷ್ಟನೆ ನೀಡಿರುವ ಕಮಲ್ನಾಥ್, ನಾನು ಹೇಳಿಕೆ ನೀಡಿದ ಸಂದರ್ಭದ ಬಗ್ಗೆ ವಿವರಿಸಿದ್ದೇನೆ. ಯಾರನ್ನೂ ಅವಮಾನಿಸುವ ಉದ್ದೇಶ ನನ್ನದಾಗಿಲ್ಲದಿದ್ದಾಗ ನಾನ್ಯಾಕೆ ಕ್ಷಮೆಯಾಚಿಸಬೇಕು, ನನ್ನ ಮಾತಿಂದ ಯಾರಿಗಾದರೂ ಅವಮಾನವಾಗಿದ್ದರೆ, ನಾನಿಗಾಗಲೇ ವಿಷಾದ ವ್ಯಕ್ತಪಡಿಸಿದ್ದೇನೆ ಎಂದಿದ್ದಾರೆ.