ನವದೆಹಲಿ:ಹರಿಯಾಣದಲ್ಲಿ ಬಿಜೆಪಿ-ಜೆಜೆಪಿ ಮೈತ್ರಿ ಸರ್ಕಾರದ ಪರ್ವ ಶುರುವಾಗಿದೆ. ಇಂದು ಮುಖ್ಯಮಂತ್ರಿ ಮನೋಹರ್ ಲಾಲ್ ಖಟ್ಟರ್ ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿ ನೂತನ ಸರ್ಕಾರದ ಮೊದಲ ಸಂಪುಟ ಸಭೆ ಕರೆದಿದ್ದಾರೆ.
ಖಟ್ಟರ್ ನೇತೃತ್ವದಲ್ಲಿ ನಡೆದ ಸಂಪುಟ ಸಭೆಯಲ್ಲಿ ಹರಿಯಾಣ ಉಪಮುಖ್ಯಮಂತ್ರಿ ಹಾಗೂ ಜೆಜೆಪಿ ಮುಖ್ಯಸ್ಥ ದುಶ್ಯಂತ್ ಚೌಟಾಲಾ ಪಾಲ್ಗೊಂಡಿದ್ದರು. ಸಭೆಯಲ್ಲಿ ರೈತರು ಹಾಗೂ ವಿದ್ಯಾರ್ಥಿಗಳಿಗೆ ಸಂಬಂಧಿಸಿದಂತೆ ಕೆಲ ಪ್ರಮುಖ ನಿರ್ಧಾರಗಳನ್ನು ತೆಗೆದುಕೊಂಡಿದ್ದಾರೆ.
ಇನ್ನು ಇದೇ ನವೆಂಬರ್ ನಾಲ್ಕರಿಂದ ಹರಿಯಾಣ ವಿಧಾನಸಭಾ ಕಲಾಪ ಆರಂಭವಾಗಲಿದ್ದು, ಕಲಾಪವನ್ನುದ್ದೇಶಿಸಿ ಹರಿಯಾಣ ರಾಜ್ಯಪಾಲ ಸತ್ಯದೇವ್ ನಾರಾಯಣ್ ಆರ್ಯ ಮಾತನಾಡಲಿದ್ದಾರೆ. ಅಲ್ಲದೆ ಸಂಪುಟಕ್ಕೆ ಆಯ್ಕೆಗೊಂಡ ನೂತನ ಸದಸ್ಯರ ಪ್ರಮಾಣ ವಚನ ಸ್ವೀಕಾರವೂ ನಡೆಯಲಿದೆ.
ಸಂಪುಟ ಸಭೆ ಬಳಿಕೆ ಡಿಸಿಎಂ ದುಶ್ಯಂತ್ ಚೌಟಾಲಾ ಜೊತೆ ಎರಡನೇ ಸುತ್ತಿನ ಸಭೆ ನಡೆಸಿದ ಖಟ್ಟರ್, ಸಂಪುಟ ವಿಸ್ತರಣೆ ಬಗ್ಗೆ ಚರ್ಚೆ ನಡೆಸಿದ್ದಾರೆ. ಇದರ ಜೊತೆಗೆ ದೆಹಲಿಯಲ್ಲಿ ಬಿಜೆಪಿ ಕಾರ್ಯಕಾರಿಣಿ ಅಧ್ಯಕ್ಷ ಜೆಪಿ ನಡ್ಡಾರನ್ನು ಭೇಟಿ ಮಾಡಿದ್ದಾರೆ.
ಸಂಪುಟ ಸಭೆಯ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಖಟ್ಟರ್, ಭತ್ತದ ಸಂಗ್ರಹಕ್ಕೆ ಗುರಿ ನಿಗದಿಪಡಿಸುವುದರಲ್ಲಿ ಹರಿಯಾಣ ರಾಜ್ಯ ಮುಂದಿದೆ. ನಾವು ಹರಿಯಾಣದ ರೈತರು ಉತ್ಪಾದಿಸುವ ಭತ್ತದ ಪ್ರತಿಯೊಂದು ಧಾನ್ಯವನ್ನು ಸಂಗ್ರಹಿಸುತ್ತೇವೆ ಎಂದು ಅವರು ಹೇಳಿದರು.
ರೈತರು ಭತ್ತದ ಹುಲ್ಲನ್ನು ಸುಡುವುದನ್ನು ತಪ್ಪಿಸಲು ರಾಜ್ಯ ಸರ್ಕಾರವು ಸಬ್ಸಿಡಿ ದರದಲ್ಲಿ ಡಿಕಂಪೋಸರ್ಗಳನ್ನು ಒದಗಿಸುತ್ತದೆ. ಈ ಬಗ್ಗೆ ಹೆಚ್ಚಿನ ವಿವರಗಳೊಂದಿಗೆ ನಾಳೆ ನಿರ್ಧಾರವನ್ನು ಪ್ರಕಟಿಸುತ್ತೇನೆ ಎಂದು ಖಟ್ಟರ್ ಹೇಳಿದ್ದಾರೆ.
ಇನ್ನು ಎಚ್‌ಟಿಎಟಿ ಪರೀಕ್ಷೆಗಳ ಕೇಂದ್ರಗಳು ಒಂದೋ ಜಿಲ್ಲೆಯೊಳಗೆ ಅಥವಾ ಪಕ್ಕದ ಜಿಲ್ಲೆಯಲ್ಲಿ ಇರುವಂತೆ ಮಾಡುತ್ತೇವೆ. ಈ ಪರೀಕ್ಷಾ ಕೇಂದ್ರಗಳು 50 ಕಿ.ಮೀ ವ್ಯಾಪ್ತಿಯೊಳಗೆ ಇರುತ್ತವೆ ಎಂದು ತಿಳಿಸಿದರು.
90 ವಿಧಾನಸಭಾ ಕ್ಷೇತ್ರಗಳ ಪೈಕಿ ಆಡಳಿತ ಪಕ್ಷ ಬಿಜೆಪಿ 40 ಕ್ಷೇತ್ರಗಳಲ್ಲಿ ಗೆಲುವು ದಾಖಲು ಮಾಡಿತ್ತು. ಕಾಂಗ್ರೆಸ್ 31 ಕ್ಷೇತ್ರ, ದುಷ್ಯಂತ್ ಚೌಟಾಲ ನೇತೃತ್ವದ ಜೆಜೆಪಿ ಪಕ್ಷ 10 ಸ್ಥಾನಗಳಲ್ಲಿ ಗೆಲುವು ದಾಖಲು ಮಾಡಿತ್ತು. ಆ ಬಳಿಕ ಸುದ್ದಿಗೋಷ್ಠಿ ನಡೆಸಿದ್ದ ಚೌಟಾಲ, ತಮ್ಮ ಅಜೆಂಡಾ ಬೆಂಬಲಿಸುವವರಿಗೆ ಬೆಂಬಲ ನೀಡುವುದಾಗಿ ಘೋಷಿಸಿದ್ದರು. ಹೀಗಾಗಿ ಸರ್ಕಾರ ರಚನೆಗೆ 46 ಸಂಖ್ಯಾಬಲ ಬೇಕಿದ್ದ ಹರಿಯಾಣದಲ್ಲಿ ಬಿಜೆಪಿ ಹಾಗೂ ಜೆಜೆಪಿ ಮೈತ್ರಿಯೊಂದಿಗೆ 50 ಸ್ಥಾನಗಳು ದೊರಕಿದೆ. ಹೀಗಾಗಿ ಬಿಜೆಪಿ ಹಾಗೂ ಜೆಜೆಪಿ ಮೈತ್ರಿ ಮಾಡಿಕೊಂಡು ಸರ್ಕಾರ ರಚನೆ ಮಾಡಿದೆ.