ಕರ್ನಾಟಕ

karnataka

ETV Bharat / bharat

ಮೋದಿ-ಕ್ಸಿ ಭೇಟಿಗೆ ಮಹಾಬಲಿಪುರಂ ಆಯ್ಕೆಯ ಉದ್ದೇಶ, ಮಾತುಕತೆಯ ಅಂಶವೇನು ಗೊತ್ತಾ? - ಮಹಾಬಲಿಪುರಂ ಶೃಂಗಸಭೆ

ಅ.11ರಿಂದ 13ರವರೆಗೆ ತಮಿಳುನಾಡಿನ ಮಹಾಬಲಿಪುರಂನಲ್ಲಿ ನಡೆಯುವ ಈ ಅನೌಪಚಾರಿಕ ಶೃಂಗಸಭೆ ಉಭಯ ದೇಶಗಳ ಸಂಬಂಧ ವೃದ್ಧಿ ಹಾಗೂ ನಿಲುವು ಮಂಡನೆ ನಿಟ್ಟಿನಲ್ಲಿ ಮಹತ್ವ ಪಡೆದಿದೆ.

ಪ್ರಧಾನಿ ಮೋದಿ ಜೊತೆಗೆ ಕ್ಸಿ ಜಿನ್​ಪಿಂಗ್

By

Published : Oct 10, 2019, 8:04 PM IST

ಮಹಾಬಲಿಪುರಂ(ತ.ನಾಡು):ಭಾರತ-ಚೀನಾ ನಡುವಿನ ಎರಡನೇ ಅನೌಪಚಾರಿಕ ಶೃಂಗಸಭೆ ನಾಳೆ ತಮಿಳುನಾಡಿನ ಮಹಾಬಲಿಪುರಂನಲ್ಲಿ ಆರಂಭವಾಗಲಿದ್ದು, ವಿಶ್ವದ ಅಗ್ರನಾಯಕರ ಭೇಟಿಗೆ ದಕ್ಷಿಣದ ರಾಜ್ಯ ಸಿದ್ಧವಾಗಿದೆ.

ಸ್ಥಳೀಯರಿಂದ ಮಮಲ್ಲಪುರಂ ಎಂದು ಕರೆಸಿಕೊಳ್ಳುವ ತಮಿಳುನಾಡಿನ ಐತಿಹಾಸಿಕ ಮಹಾಬಲಿಪುರಂನಲ್ಲಿ ಪ್ರಧಾನಿ ಮೋದಿ ಹಾಗೂ ಚೀನಾ ಆಧ್ಯಕ್ಷ ಕ್ಸಿ ಜಿನ್​ಪಿಂಗ್ ಮುಖಾಮುಖಿಯಾಗಲಿದ್ದಾರೆ. 2018ರ ಏಪ್ರಿಲ್​​ನಲ್ಲಿ ಚೀನಾದ ವುಹಾನ್ ನಗರದಲ್ಲಿ ಈ ಇಬ್ಬರೂ ನಾಯಕರು ಒಂದಾಗಿದ್ದರು.

ಭಾರತ-ಚೀನಾ ಸಂಬಂಧದ ಒಂದು ಹಿನ್ನೋಟ

ಅಮೆರಿಕ ಜೊತೆಗಿನ ವಾಣಿಜ್ಯ ಸಮರದಲ್ಲಿ ಬಳಲಿರುವ ಚೀನಾದಲ್ಲೂ ಆರ್ಥಿಕ ಹಿಂಜರಿತ ಬಲವಾಗಿ ಕಾಡುತ್ತಿದೆ. ಭಾರತದ ಆರ್ಥಿಕತೆಯೂ ಹಳಿತಪ್ಪಿದ ರೈಲಿನಂತಾಗಿದೆ. ಆರ್ಥಿಕತೆ ವಿಚಾರದಲ್ಲಿ ಸಮಾನ ದುಃಖಿಗಳ ಭೇಟಿ ಆರ್ಥಿಕ ಕ್ಷೇತ್ರದ ಬಲವರ್ಧನೆ ಹೇಗೆ ಉಪಯುಕ್ತವಾಗಲಿದೆ ಎನ್ನುವುದು ಸದ್ಯದ ಕುತೂಹಲ.

ಮಧ್ಯಾಹ್ನ ವೇಳೆಗೆ ಚೆನ್ನೈಗೆ ಆಗಮಿಸಲಿರುವ ಕ್ಸಿ, ಸಂಜೆ ಟೀ ವೇಳೆಗೆ(ಸುಮಾರು 5 ಗಂಟೆಗೆ) ಮೋದಿಯನ್ನು ಭೇಟಿಯಾಗಲಿದ್ದಾರೆ. ಕ್ಸಿ ಆಗಮನಕ್ಕೂ ಮುನ್ನ ಮಹಾಬಲಿಪುರಂನಲ್ಲಿರುವ ಐತಿಹಾಸಿಕ ಶೋರ್ ದೇವಸ್ಥಾನದಲ್ಲಿ ಉಭಯ ದೇಶಗಳ ಸಾಂಸ್ಕೃತಿಕ ವಿನಿಮಯದ ಸಂಕೇತವಾಗಿ ಬುದ್ಧನ ವಿಗ್ರಹ ಪ್ರತಿಷ್ಠಾಪನೆ ಮಾಡಲಾಗಿದೆ.

ಕ್ಸಿ-ಜಿನ್​ಪಿಂಗ್ ಭೇಟಿ

ತಮಿಳುನಾಡಿನಲ್ಲಿರುವ ಯುನೆಸ್ಕೋ ಮಾನ್ಯತೆ ಪಡೆದಿರುವ ವಿಶ್ವಪ್ರಸಿದ್ಧ ಐತಿಹಾಸಿಕ ತಾಣಗಳಿಗೆ ಇಬ್ಬರು ನಾಯಕರು ಭೇಟಿ ನೀಡಲಿದ್ದಾರೆ. ಭಾರತದ ವಾಸ್ತುಶೈಲಿ, ಇತಿಹಾಸವನ್ನು ವಿಶ್ವಕ್ಕೆ ಸಾರುವ ಪ್ರಯತ್ನ ಇಲ್ಲಿ ನಡೆಯಲಿದೆ. ಕ್ಸಿ, ಶುಕ್ರವಾರ ಭಾರತಕ್ಕೆ ಆಗಮಿಸಲಿದ್ದು, ಮಹಾಬಲಿಪುರಂನಲ್ಲಿರುವ ಶತಮಾನಗಳ ಇತಿಹಾಸವಿರುವ ದೇವಸ್ಥಾನಕ್ಕೆ ಭೇಟಿ ನೀಡಲಿದ್ದಾರೆ.

ವುಹಾನ್ ಭೇಟಿಯಲ್ಲೇನಾಗಿತ್ತು..?

2018ರ ಏಪ್ರಿಲ್ ತಿಂಗಳಲ್ಲಿ ಚೀನಾದ ವುಹಾನ್​ ನಗರದಲ್ಲಿ ಮೋದಿ-ಕ್ಸಿ ಭೇಟಿಯಾಗಿ ಮೊದಲ ಅನೌಪಚಾರಿಕ ಶೃಂಗಸಭೆ ನಡೆಸಿದ್ದರು. ಈ ವೇಳೆ ಸಾಂಸ್ಕೃತಿಕ ವಿನಿಮಯ, ವ್ಯವಹಾರ ವೃದ್ಧಿ, ಹತ್ತು ವಿವಿಧ ಕ್ಷೇತ್ರಗಳಲ್ಲಿ ಸಹಕಾರ ಸೇರಿದಂತೆ ಹಲವಾರು ವಿಚಾರಗಳು ಪ್ರಸ್ತಾಪವಾಗಿದ್ದವು. ಈ ಭೇಟಿಯ ಬಳಿಕ ಉಭಯ ದೇಶಗಳ ಸಹಕಾರ ಅತ್ಯುತ್ತಮವಾಗಿದೆ ಎಂದು ಎರಡೂ ದೇಶಗಳು ಒಪ್ಪಿಕೊಂಡಿವೆ.

ಪ್ರಧಾನಿ ಮೋದಿ ಜೊತೆಗೆ ಕ್ಸಿ ಜಿನ್​ಪಿಂಗ್

ಮಹಾಬಲಿಪುರಂ ಸಂಪೂರ್ಣ ಸಜ್ಜು:

ಉಭಯ ನಾಯಕರ ಭೇಟಿಗೆ ಮಹಾಬಲಿಪುರಂ ಸಂಪೂರ್ಣವಾಗಿ ಸಿದ್ಧವಾಗಿದೆ. ಭದ್ರತೆಯನ್ನು ಗರಿಷ್ಠಮಟ್ಟಕ್ಕೆ ಹೆಚ್ಚಿಸಲಾಗಿದ್ದು, ಎಲ್ಲೆಡೆ ಸಿಸಿ ಕ್ಯಾಮೆರಾ ಮೂಲಕ ತೀವ್ರ ನಿಗಾ ವಹಿಸಲಾಗಿದೆ. ರಸ್ತೆಯನ್ನು ಸರಿಪಡಿಸಲಾಗಿದ್ದು, ಇಕ್ಕೆಲೆಗಳಲ್ಲಿ ಮಾರ್ಗಸೂಚಿಗಳನ್ನು ಹಾಕಲಾಗಿದೆ.

ದೆಹಲಿ ಹೊರತಾದ ಭೇಟಿ ಇದೇ ಮೊದಲಲ್ಲ..!

ಸಾಮಾನ್ಯವಾಗಿ ಪ್ರಧಾನಿ ಜೊತೆಗಿನ ಇತರೆ ದೇಶದ ನಾಯಕ ಭೇಟಿ-ಮಾತುಕತೆ ಎಂದರೆ ರಾಷ್ಟ್ರ ರಾಜಧಾನಿ ದೆಹಲಿ ಆಯೋಜನೆಯಾಗಿರುತ್ತದೆ. ಆದರೆ ಕ್ಸಿ-ಮೋದಿ ಭೇಟಿ ದಕ್ಷಿಣದ ಮಹಾಬಲಿಪುರಂನಲ್ಲಿ ಆಯೋಜನೆಯಾಗಿದೆ.

ಅಷ್ಟಕ್ಕೂ ಈ ರೀತಿಯ ಅರ್ಥಾತ್ ದೆಹಲಿ ಹೊರತಾದ ಭೇಟಿ-ಸಭೆ ನಡೆಯುತ್ತಿರುವುದು ಇದೇ ಮೊದಲೇನಲ್ಲ. ಈ ಹಿಂದೆ ಜಪಾನ್ ಪ್ರಧಾನಿ ಶಿಂಜೋ ಅಬೆ ಅಹಮದಾಬಾದ್​ನಲ್ಲಿ ಸಭೆ ಸೇರಿದ್ದರು. ಈ ವೇಳೆ ಸಾಬರಮತಿ ಆಶ್ರಮ ಹಾಗೂ ಸಿದಿ ಸಯ್ಯದ್ ಮಸೀದಿಗೆ ಭೇಟಿ ನೀಡಿದ್ದರು. ಕಳೆದ ಬಾರಿ ಕ್ಸಿ ಅಹಮಹಾಬಾದ್​ನಲ್ಲಿ ಬಂದಿದ್ದಲ್ಲದೆ ಸಾಬರಮತಿ ಆಶ್ರಮಕ್ಕೆ ವಿಸಿಟ್ ಕೊಟ್ಟಿದ್ದರು.

ಪ್ರಾನ್ಸ್​ ಅಧ್ಯಕ್ಷ ಇಮ್ಯಾನ್ಯುಯೆಲ್ ಮ್ಯಾಕ್ರೋನ್ ಪ್ರಧಾನಿ ಮೋದಿ ಜೊತೆಗೆ ಉತ್ತರ ಪ್ರದೇಶದ ವಾರಣಾಸಿ ಹಾಗೂ ಮಿರ್ಜಾಪುರಕ್ಕೆ ಭೇಟಿ ನೀಡಿದ್ದರು. ಜರ್ಮನ್ ಚಾನ್ಸೆಲರ್ ಏಂಜೆಲಾ ಮಾರ್ಕೆಲ್ ಬೆಂಗಳೂರಿನಲ್ಲಿ ಹಾಗೂ ಇಸ್ರೇಲಿ ಪ್ರಧಾನಿ ಬೆಂಜಮಿನ್ ನೆತಾನ್ಯಾಹು ಅಹಮದಾಬಾದ್​ನಲ್ಲಿ ಪ್ರಧಾನಿ ಜೊತೆಗೆ ಮಾತುಕತೆ ನಡೆಸಿದ್ದರು.

ದೆಹಲಿ ಹೊರತಾದ ಮಾತುಕತೆಯ ಪ್ರಾಮುಖ್ಯತೆ ಏನು...?

ಇನ್​ಕ್ರೆಡಿಬಲ್ ಇಂಡಿಯಾ(Incredible India) ಪರಿಕಲ್ಪನೆ ಹಾಗೂ ಭಾರತದ ಪ್ರವಾಸೋದ್ಯಮದ ಉತ್ತೇಜನಕ್ಕೆ ದೆಹಲಿ ಹೊರತಾದ ಭೇಟಿ ಉತ್ತೇಜನ ನೀಡುತ್ತವೆ ಎನ್ನುವುದು ತಜ್ಞರ ಅಭಿಮತ. ಜಾಗತಿಕ ನಾಯಕರು ಐತಿಹಾಸಿಕ, ಪೌರಾಣಿಕ ಹಾಗೂ ಪ್ರೇಕ್ಷಣೀಯ ಸ್ಥಳಗಳಿಗೆ ಭೇಟಿ ನೀಡುವುದರಿಂದ ಸ್ಥಳ ಪ್ರಾಮುಖ್ಯತೆ ಸಹಜವಾಗಿ ಹೆಚ್ಚುತ್ತದೆ.

ಮಹಾಬಲಿಪುರಂ ಆಯ್ಕೆ ಹಿಂದಿನ ಉದ್ದೇಶವೇನು..?

ಪ್ರಧಾನಿ ಮೋದಿ- ಕ್ಸಿ ಜಿನ್​ಪಿಂಗ್ ದಕ್ಷಿಣದ ಮಹಾಬಲಿಪುರಂನಲ್ಲಿ ಮಾತುಕತೆ ನಡೆಸುತ್ತಿರುವ ವಿಚಾರದ ಹಿಂದೆ ಉಭಯ ದೇಶಗಳ ಒಂದು ಸಂಬಂಧವೂ ಅಡಗಿದೆ.

ತಮಿಳುನಾಡು ರಾಜಧಾನಿ ಚೆನ್ನೈನಿಂದ 50ಕಿ.ಮೀ ದೂರದಲ್ಲಿರುವ ಮಹಾಬಲಿಪುರಂನಲ್ಲಿ ಶೃಂಗಸಭೆ ಏರ್ಪಡಿಸುವ ಮೂಲಕ ಡ್ರಾವಿಡಿಯನ್ ರಾಜ್ಯಗಳ ಬಗ್ಗೆ ಮೋದಿ ಹಾಗೂ ಬಿಜೆಪಿ ಹೆಚ್ಚಿನ ಕಾಳಜಿ ಹೊಂದಿದೆ ಎನ್ನುವ ಸಂದೇಶ ರವಾನೆಯಾಗುತ್ತದೆ. ರಾಷ್ಟ್ರೀಯ ಪಕ್ಷ ನೆಲೆ ಕಳೆದುಕೊಂಡಿರುವ ತಮಿಳುನಾಡಿನಲ್ಲಿ ಕೇಸರಿ ಬಲವರ್ಧನೆಗೆ ಇದು ಪೂರಕ ಎನ್ನುವ ಮಾತೂ ಇದೆ. ಆದರೆ ಮಹಾಬಲಿಪುರಂ ಜೊತೆಗೆ ಚೀನಾ ದೇಶಕ್ಕೆ ಅತಿಪುರಾತನ ಸಂಬಂಧವೂ ಇದೆ.

ಮಹಾಬಲಿಪುರಂ ಅನ್ನು 9ನೇ ಶತಮಾನದಲ್ಲಿ ಪಲ್ಲವರು ಆಳ್ವಿಕೆ ನಡೆಸುತ್ತಿದ್ದರು. ಕ್ರಿಸ್ತಶಕ 650ರಿಂದ ಕ್ರಿಸ್ತಶಕ 750 ಅವಧಿಯನ್ನು ಪಲ್ಲವರ ಸುವರ್ಣಯುಗ ಎಂದು ಕರೆಯಲಾಗುತ್ತದೆ. ಪಲ್ಲವಯರ ಪ್ರಮುಖ ರಾಜ ಒಂದನೇ ನರಸಿಂಹವರ್ಮನ್​ ಯಾವುದೇ ಯುದ್ಧವನ್ನೂ ಸೋತಿರಲಿಲ್ಲ. ಸೋಲನ್ನೆ ಕಾಣದ ಈ ರಾಜ ನೆರೆಹೊರೆಯ ದೇಶಗಳೊಂದಿಗೆ ಉತ್ತಮ ಬಾಂಧವ್ಯ ಹೊಂದಿದ್ದ ಎಂದು ಇತಿಹಾಸ ಹೇಳುತ್ತದೆ. ಈತನ ಆಳ್ವಿಕೆಯಲ್ಲಿ ಚೀನಾ ಜೊತೆಗೆ ವ್ಯಾಪಾರ, ರಕ್ಷಣಾ ಸಂಬಂಧ ಅತ್ಯುತ್ತಮವಾಗಿತ್ತು.

ಇದಲ್ಲದೆ ಪಲ್ಲವರ ಕಾಲದಲ್ಲೇ ಜೀವಿಸಿದ್ದ ಬುದ್ಧ ಸನ್ಯಾಸಿ ಬೋಧಿಧರ್ಮನ್​ ಸಹ ಮಹಾಬಲಿಪುರಂನಿಂದ ಕ್ರಿಸ್ತಶಕ 527ರಲ್ಲಿ ಚೀನಾಗೆ ತೆರಳಿದ್ದ ಎನ್ನುತ್ತದೆ ಇತಿಹಾಸ. ಇದರ ಜೊತೆಗೆ ಪಲ್ಲವರ ಕಾಲದಲ್ಲಿ ಚೀನಾ ಜೊತೆಗಿನ ಸಂಬಂಧ ಉತ್ತಮವಾಗಿತ್ತು ಎಂದು ಹಲವು ಸಂಶೋಧನೆಗಳಲ್ಲೂ ಸಾಬೀತಾಗಿದೆ. ಈ ರೀತಿಯ ವಿಶೇಷ ಹಿನ್ನೆಲೆಯಲ್ಲೇ ಮೋದಿ-ಕ್ಸಿ ಭೇಟಿ ಇದೇ ಐತಿಹಾಸಿಕ ಜಾಗದಲ್ಲಿ ನಡೆಯಲಿದೆ. ​

ಮಾತುಕತೆಯ ಅಂಶಗಳೇನಿರಲಿದೆ..?

1.ಗಡಿ ವಿವಾದ:

ಕ್ಸಿ-ಜಿನ್​ಪಿಂಗ್ ಮಾತುಕತೆಗೆ ನಿರ್ದಿಷ್ಟವಾದ ಅಂಶಗಳಿಲ್ಲ. ಆದರೆ ಉಭಯ ದೇಶಗಳ ಕೆಲ ಭಿನ್ನಾಭಿಪ್ರಾಯ ಸರಿಪಡಿಸಲು ಉತ್ತಮ ವೇದಿಕೆಯಾಗಲಿದೆ. ಉಭಯ ದೇಶಗಳ ನಾಯಕರ ಭೇಟಿಯಲ್ಲಿ ಗಡಿ ವಿಚಾರದಲ್ಲಿ ದೇಶಗಳು ಶಾಂತಿ ಕಾಪಾಡುವ ಬಗ್ಗೆ ಹೆಚ್ಚಿನ ಬೆಳಕು ಚೆಲ್ಲುವ ಸಾಧ್ಯತೆ ಇದೆ. ಚೀನಾ- ಭಾರತ ನಡುವೆ ಪ್ರಮುಖವಾಗಿ ಗಡಿ ವಿಚಾರದಲ್ಲಿ ಭಿನ್ನಾಭಿಪ್ರಾಯಗಳಿವೆ. ಪ್ರಧಾನಿಗಳು ಬದಲಾದರೂ ಈ ವಿಚಾರ ಮಾತ್ರ ಬಗೆಹರಿದಿಲ್ಲ.

ಡೋಕ್ಲಾಮ್​​​​ನಲ್ಲಿ ಕಾಲುಕೆರೆಯುತ್ತಾ ಗಡಿಯನ್ನು ವಿಸ್ತರಿಸಲು ಹುನ್ನಾರ ನಡೆಸುತ್ತಿರುವ ಚೀನಾ, ನಾಳಿನ ಭೇಟಿಯಲ್ಲಿ ಈ ಬಗ್ಗೆ ಏನು ಹೇಳಲಿದೆ ಎನ್ನುವ ಕುತೂಹಲವೂ ಇದೆ. ಮಸೂದ್ ಅಜರ್​​ನನ್ನು ಜಾಗತಿಕ ಉಗ್ರರ ಪಟ್ಟಿಗೆ ಸೇರಿಸುವ ವಿಚಾರದಲ್ಲಿ ಅಡ್ಡಗಾಲು ಹಾಕಿದ ಅಗ್ರರಾಷ್ಟ್ರ ಚೀನಾ. ಜಾಗತಿಕವಾಗಿ ಒತ್ತಡ ಹೆಚ್ಚಾದ ಬಳಿಕ ಒತ್ತಾಯಪೂರ್ವಕವಾಗಿ ಮಣಿದಿತ್ತು.

2.ಕಾಶ್ಮೀರ ವಿವಾದ:

ಕಾಶ್ಮೀರ ವಿಚಾರದಲ್ಲಿ ತನ್ನ ಮಿತ್ರರಾಷ್ಟ್ರ ಪಾಕಿಸ್ತಾನವನ್ನು ಸಂಪೂರ್ಣವಾಗಿ ದೂರವಿಡಲು ಮನಸ್ಸು ಮಾಡದ ಚೀನಾ ಜಾಗತಿಕಮಟ್ಟದಲ್ಲಿ ಭಾರತದ ವಿರೋಧಕ್ಕೆ ಗುರಿಯಾಗಿತ್ತು. ಪಾಕಿಸ್ತಾನವನ್ನು ಬೆಂಬಲಿಸುತ್ತಲೇ ಬಂದಿರುವ ಚೀನಾ ಹಾಗೂ ಪಾಕಿಸ್ತಾನದ 'ಉಗ್ರ'ನಡೆಯನ್ನು ಎಲ್ಲ ಹಂತದಲ್ಲೂ ಖಂಡಿಸುತ್ತಿರುವ ಭಾರತದ ಮುಖಾಮುಖಿಯಲ್ಲಿ ಭಯೋತ್ಪಾದನೆ ನಿರ್ಮೂಲನೆ ಬಗೆಗಿನ ವಿಚಾರ ಪ್ರಸ್ತಾಪ ಸಹಜ ಸಾಧ್ಯತೆ. ಕಾಶ್ಮೀರ ವಿಶೇಷ ಸ್ಥಾನಮಾನ ರದ್ದತಿ ಬಳಿಕ ಎಲ್ಲ ಜಾಗತಿಕ ವೇದಿಕೆಯಲ್ಲೂ ತನ್ನ ನಿಲುವಿಗೇ ಬದ್ಧವಾಗಿರುವ ಭಾರತ ಕ್ಸಿ ಭಾರತದ ಭೇಟಿಯಲ್ಲೂ ಇದನ್ನೇ ಪ್ರತಿಪಾದಿಸುವ ಸಾಧ್ಯತೆ ನಿಚ್ಚಳವಾಗಿದೆ.

ABOUT THE AUTHOR

...view details