ಹೈದರಾಬಾದ್: ವಿಶ್ವದ ಎಲ್ಲಾ ದೇಶಗಳಲ್ಲಿ ಕೋವಿಡ್19 ರೋಗಿಗಳ ಸಂಖ್ಯೆ ಹೆಚ್ಚುತ್ತಿರುವ ಈ ಸಂದರ್ಭದಲ್ಲಿ ಈ ಮಾರಣಾಂತಿಕ ವೈರಸ್‍ನ ವಿರುದ್ಧದ ಹೋರಾಟಕ್ಕೆ ದೊಡ್ಡ ಸವಾಲಾಗಿರುವುದು ಕೆಲವು ಅಗತ್ಯ ಔಷಧಗಳ ಕೊರತೆ. ಕೊರೊನಾ ವೈರಸ್ ಹಾವಳಿಯ ಕೇಂದ್ರಬಿಂದುವಾಗಿ ಈಗ ಪರಿವರ್ತನೆಗೊಂಡಿರುವ ಅಮೆರಿಕ ಸೇರಿದಂತೆ ಹಲವಾರು ರಾಷ್ಟ್ರಗಳಲ್ಲಿ ಅಗತ್ಯ ಔಷಧಗಳ ಕೊರತೆ ಎದುರಾಗಿದೆ. ಇದು ಕೋವಿಡ್ 19ರ ವಿರುದ್ಧದ ಹೋರಾಟದಲ್ಲಿ ಸ್ಥಳೀಯ ಸರಕಾರಗಳಿಗೆ ದೊಡ್ಡ ಸವಾಲಾಗಿ ಪರಿಣಮಿಸಿದೆ. ಹಲವು ಮಾಧ್ಯಮ ವರದಿಗಳು, ಕೋವಿಡ್ 19 ರ ಚಿಕಿತ್ಸೆಯಲ್ಲಿ ಅತ್ಯಂತ ನಿರ್ಣಾಯಕ ಪಾತ್ರವಹಿಸುವ ಔಷಧಗಳ ಕೊರತೆ ಬಗ್ಗೆ ಬೆಟ್ಟು ಮಾಡಿವೆ.
ಅತಿ ಹೆಚ್ಚಿನ ಬೇಡಿಕೆ ಕಾರಣಕ್ಕಾಗಿ ನೋವು ನಿವಾರಕ ಮೆದುಳಿಗೆ ಸಂಬಂಧಿಸಿದ ಔಷಧಗಳಾದ ಫೆಂಟಾನಿಲ್, ಮಿದೊಝೋಲಾಮ್, ಹಾಗೂ ಪ್ರೊಫಾಫೋಲ್, ರಕ್ತದ ಒತ್ತಡಕ್ಕೆ ಸಂಬಂಧಿಸಿದ ವೆಸೊಫ್ರೆಸರ್‍ಗಳ ಲಭ್ಯತೆ ಕಡಿಮೆಯಾಗುತ್ತಿದೆ. ಮೆಡ್‍ಸ್ಕೇಪ್ ವೈದ್ಯಕೀಯ ವರದಿ ಪ್ರಕಾರ ಅಮೆರಿಕದಲ್ಲಿ 3000ಕ್ಕೂ ಅಧಿಕ ಆಸ್ಪತ್ರೆಗಳಿಗೆ ಹಾಗೂ ಆರೋಗ್ಯ ಸೇವಾ ಪೂರೈಕೆದಾತ ಸಂಸ್ಥೆಗಳಿಗೆ ಔಷಧಗಳನ್ನು ಪೂರೈಕೆ ಮಾಡುವ ವಿಝೆಂಟ್ ಔಷಧ ಸೇವಾ ಕಂಪನಿಯ ಉಪಾಧ್ಯಕ್ಷ ಡನ್ ಕಿಸ್ನರ್ ಈ ಬಗ್ಗೆ ಈಗಾಗಲೆ ಮಾಹಿತಿ ನೀಡಿದ್ದಾರೆ. "ಈ ಹಿಂದೆ ವೆಂಟಿಲೇಟರ್ಗೆ ಸಂಬಂಧಿಸಿದ ಶೇ.95%ರಷ್ಟು ಔಷಧಗಳನ್ನು ಆಸ್ಪತ್ರೆಗಳು ಪಡೆಯುತ್ತಿದ್ದವು. ಆದರೆ ಕಳೆದ ಒಂದು ತಿಂಗಳಲ್ಲಿ ಇದು 60%-70%ಕ್ಕೆ ಇಳಿದಿದೆ," ಎಂದು ಅವರು ಪತ್ರಿಕೆಗೆ ಮಾಹಿತಿ ನೀಡಿದ್ದಾರೆ. ಸಮಸ್ಯೆಯ ತೀವ್ರತೆ ಎಷ್ಟಿದೆಯೆಂದು ಅಂದಾಜಿಸಬೇಕೆಂದರೆ, ಪೋರ್ಟ್‍ಲ್ಯಾಂಡ್‍ನ ಒರೆಗಾನ್ ಆರೋಗ್ಯ ಮತ್ತು ವಿಜ್ಞಾನ ವಿಶ್ವವಿದ್ಯಾನಿಲಯದ ತುರ್ತು ಚಿಕಿತ್ಸಾ ವೈದ್ಯ ಡಾ. ಎಷ್ಟರ್ ಚೂಹು ಅವರು ಟ್ವೀಟ್ ಒಂದನ್ನು ಗಮನಿಸಬೇಕು. ಅಗತ್ಯ ಔಷಧಗಳ ಪೂರೈಕೆ ಇಲ್ಲದೇ, ಇಲ್ಲಿರುವ ವೆಂಟಿಲೇಟರ್ಗಳನ್ನ ಬಳಸಲು ಸಾಧ್ಯವಿಲ್ಲ ಹಾಗೂ ರೋಗಿಗಳನ್ನು ಬದುಕಿಸಲು ಸಾಧ್ಯವಿಲ್ಲ. "ಈ ಸಾಂಕ್ರಾಮಿಕ ರೋಗ ಅತಿ ತೀವ್ರತೆಯ ಮಟ್ಟ ತಲುಪುವ ಮುನ್ನವೇ ನಾವು ಔಷಧಗಳ ಕೊರತೆ ಎದುರಿಸಲಾರಂಭಿಸಿದ್ದೇವೆ," ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ. ಉತ್ತರ ಕೆರೋಲಿನಾದ ಚಾರ್ಲೊಟ್‍ನ ಆರೋಗ್ಯ ರಕ್ಷಣೆ ಸೇವಾ ಸಂಸ್ಥೆ ಪ್ರೀಮಿಯರ್ ಇತ್ತೀಚೆಗೆ ಬಿಡುಗಡೆಗೊಳಿಸಿರುವ ವರದಿ ಪ್ರಕಾರ ಕೋವಿಡ್19 ವಿರುದ್ಧ ಬಳಸಲ್ಪಡುವ 15 ಔಷಧಗಳ ಕೊರತೆ ಈಗಾಗಲೆ ಉದ್ಭವಿಸಿದ್ದು ಅಥವಾ ಪೂರೈಕೆಯಲ್ಲಿ ಕೊರತೆಯಾಗಿದೆ ಅದರಲ್ಲೂ ಮುಖ್ಯವಾಗಿ ನ್ಯೂಯಾರ್ಕ್‍ನಲ್ಲಿ ಈ ಕೊರತೆ ಎದುರಾಗಿದೆ.