ಕೇರಳ/ತ್ರಿಶೂರ್:'ವೃದ್ಧರ ಪ್ರೇಮವಿವಾಹ' ಇದು ಕೇಳಲು ಹೊಸದಾಗಿದ್ದರೂ, ಕೇರಳದ ವೃದ್ಧಾಶ್ರಮವೊಂದು ಇದಕ್ಕೆ ಸಾಕ್ಷಿಯಾಗಿದೆ. ಇಬ್ಬರು ವೃದ್ಧರ ಪರಿಚಯ ಪ್ರೀತಿಗೆ ತಿರುಗಿ ಅವರ ದಾಂಪತ್ಯ ಜೀವನಕ್ಕೆ ದಾರಿಯಾಗಿದೆ.
ಕೊಚಾನಿಯನ್ ಮೆನನ್ (67) ಹಾಗೂ ಲಕ್ಷ್ಮಿ ಅಮ್ಮಲ್ (66) ಕಳೆದ ಶನಿವಾರ ಪ್ರೇಮ ವಿವಾಹ ಮಾಡಿಕೊಂಡ ವೃದ್ಧ ದಂಪತಿ. ಇವರು ಕೇರಳದ ರಾಮವರ್ಮಪುರಂ ವೃದ್ಧಾಶ್ರಮದಲ್ಲಿ ಹಿಂದೂ ಸಂಪ್ರದಾಯದಂತೆ ವಿವಾಹವಾದರು.
ಗಂಡನ ಮರಣಾನಂತರ ಲಕ್ಷ್ಮಿ ಅಮ್ಮಲ್ ಎರಡು ವರ್ಷಗಳಿಂದ ವೃದ್ಧಾಶ್ರಮದಲ್ಲೇ ಇದ್ದರು. ಕಳೆದ ಎರಡು ತಿಂಗಳ ಹಿಂದೆ ಕೊಚಾನಿಯನ್ ಮೆನನ್ ವೃದ್ಧಾಶ್ರಮಕ್ಕೆ ಬಂದಿದ್ದರಂತೆ. ಈ ವೇಳೆ ಒಬ್ಬರನ್ನೊಬ್ಬರು ಭೇಟಿಯಾದಾಗ ಪ್ರೇಮಾಂಕುರವಾಗಿತ್ತು. ಯಾರೂ ಇಲ್ಲದೆ ಅನಾಥರಾಗಿದ್ದ ಈ ವೃದ್ಧರ ಪ್ರೇಮ ವಿವಾಹಕ್ಕೆ ಆಶ್ರಮದ ಮಂಡಳಿ ಕೂಡ ಗ್ರೀನ್ ಸಿಗ್ನಲ್ ನೀಡಿದೆ.