ತಿರುವನಂತಪುರಂ(ಕೇರಳ): ಪ್ರವೇಶ ಪ್ರಕ್ರಿಯೆಯಲ್ಲಿ ಮಗುವಿನ ಪೋಷಕರು ಜಾತಿ ಮತ್ತು ಧರ್ಮದ ಅಂಕಣಗಳನ್ನು ಭರ್ತಿ ಮಾಡಿಲ್ಲ ಎಂಬ ಕಾರಣಕ್ಕೆ ಸರ್ಕಾರಿ ಅನುದಾನಿತ ಶಾಲೆಯೊಂದು ಮಗುವಿಗೆ ಪ್ರವೇಶಾತಿಯನ್ನೇ ನಿರಾಕರಿಸಿರುವ ಘಟನೆ ನಡೆದಿದೆ.
ಪಟ್ಟೋಮ್ನ ಸೇಂಟ್ ಮೇರಿಸ್ ಹೈಯರ್ ಸೆಕೆಂಡರಿ ಶಾಲೆಯಲ್ಲಿ ತಮ್ಮ ಮಗನಿಗೆ ಪ್ರವೇಶ ಪಡೆಯಲು ಬಯಸುತ್ತಿದ್ದ ದಂಪತಿ ಪ್ರವೇಶ ಪ್ರಕ್ರಿಯೆ ವೇಳೆ ಧರ್ಮ ಮತ್ತು ಜಾತಿ ಅಂಕಣವನ್ನು ಭರ್ತಿ ಮಾಡಿಲ್ಲ.
ನಜೀಮ್ ಮತ್ತು ಧನ್ಯಾ ದಂಪತಿ ಯಾವುದೇ ಧಾರ್ಮಿಕ ಗಡಿರೇಖೆಗಳಿಲ್ಲದೆ ತಮ್ಮ ಮಗುವನ್ನು ಬೆಳೆಸಲು ಬಯಸುವುದರಿಂದಲೇ ಅವರು ಧರ್ಮ ಮತ್ತು ಜಾತಿ ಅಂಕಣವನ್ನು ಭರ್ತಿ ಮಾಡದಿರಲು ಕಾರಣ ಎಂದು ತಿಳಿಸಿದ್ದಾರೆ.
ಫೆಬ್ರವರಿ 19 ರಂದು ನಮ್ಮ ಮಗುವಿನ ಪ್ರವೇಶ ಪ್ರಕ್ರಿಯೆಗಾಗಿ ನಾವು ಶಾಲೆಗೆ ತಲುಪಿದಾಗ ಜಾತಿ-ಧರ್ಮದ ಅಂಕಣಗಳನ್ನು ಏಕೆ ಖಾಲಿ ಬಿಟ್ಟಿದ್ದೇವೆ ಎಂದು ಕೇಳಲಾಯಿತು. ನಾವು ನಮ್ಮ ವಿಚಾರವನ್ನು ವಿವರಿಸಿದಾಗ, ಶಾಲಾ ಆಡಳಿತವು ಧರ್ಮ ಮತ್ತು ಜಾತಿ ಅಂಕಣವನ್ನು ಭರ್ತಿ ಮಾಡಿದರೆ ಮಾತ್ರವೇ ಮಗುವಿಗೆ ಪ್ರವೇಶ ನೀಡಲಾಗುವುದು ಎಂದಿದ್ದಾರೆ ಎಂದು ಧನ್ಯಾ ಸುದ್ದಿಗಾರರಿಗೆ ತಿಳಿಸಿದ್ದಾರೆ.
ಸರ್ಕಾರ ಒದಗಿಸುವ ಅನೇಕ ಪ್ರಯೋಜನಗಳು ಧರ್ಮವನ್ನು ಆಧರಿಸಿವೆ. ಹೀಗಾಗಿ ನಾವು ಅಂಕಣವನ್ನು ಭರ್ತಿ ಮಾಡಲು ಒತ್ತಾಯಿದ್ದೇವೆ ಅಷ್ಟೇ. ಭವಿಷ್ಯದಲ್ಲಿ ಅಂತಹ ಪ್ರಯೋಜನಗಳು ವಿದ್ಯಾರ್ಥಿಗೆ ಸಿಗದಿದ್ದರೆ ಅದು ಅವರ ಬೇಜವಾಬ್ದಾರಿಯಾಗುತ್ತದೆ. ಆ ಕುರಿತು ಅವರು ಅಫಿಡವಿಟ್ ಸಲ್ಲಿಬೇಕು ಎಂದು ಪೋಷಕರನ್ನು ಕೇಳಿದೆವು ಅಷ್ಟೇ ಎಂದು ಶಾಲಾ ಆಡಳಿತ ಮಂಡಳಿ ಸ್ಪಷ್ಟ ಪಡಿಸಿದೆ. ಆದರೆ, ಇಂತಹ ಅನಗತ್ಯ ವಿವಾದ ನಡೆಯುತ್ತಿರುವುದು ದುರದೃಷ್ಟಕರ ಎಂದು ಶಾಲಾ ಆಡಳಿತ ಮಂಡಳಿ ಅಭಿಪ್ರಾಯಪಟ್ಟಿದೆ.