ಕೊಲ್ಲಂ(ಕೇರಳ): ಅನುಮತಿ ಪತ್ರ ಇದ್ದರೂ ಆಟೋದಲ್ಲಿ ತೆರಳಲು ಅವಕಾಶ ನೀಡದಿದ್ದಕ್ಕೆ ವ್ಯಕ್ತಿಯೋರ್ವ ತನ್ನ 65 ವರ್ಷದ ತಂದೆಯನ್ನು ಆಸ್ಪತ್ರೆಯಿಂದ ಮನೆಯವರೆಗೆ ಹೊತ್ತುಕೊಂಡೇ ಹೋದ ಘಟನೆ ಕೇರಳದಲ್ಲಿ ನಡೆದಿದೆ.
ಕುಲತುಪುಳ ಮೂಲದ 65 ವರ್ಷದ ವ್ಯಕ್ತಿಯನ್ನು ಮೂತ್ರ ಸೋಂಕಿನ ಕಾರಣದಿಂದ ಪುಣಲೂರು ತಾಲೂಕು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಗುಣಮುಖರಾದ ಬಳಿಕ ತಂದೆಯನ್ನು ಕರೆತರಲು ಆತನ ಪುತ್ರ ರಾಯ್ಮನ್ ಆಟೋದಲ್ಲಿ ಆಸ್ಪತ್ರೆಗೆ ತೆರಳುವಾಗ ಪೊಲೀಸರು ತಡೆದಿದ್ದಾರೆ. ಹೀಗಾಗಿ ರಾಯ್ಮನ್ ನಡೆದುಕೊಂಡೇ ಆಸ್ಪತ್ರೆಗೆ ತೆರಳಿದ್ದಾರೆ.
ಆಸ್ಪತ್ರೆಯಿಂದ ತಂದೆಯನ್ನು ಕರೆದುಕೊಂಡು ಬರುವಾಗ ಆಸ್ಪತ್ರೆ ಅಧೀಕ್ಷಕರ ಪತ್ರದೊಂದಿಗೆ ಬಂದಿದ್ದಾರೆ. ಆದರೆ ಪೊಲೀಸರು ಆಟೋದಲ್ಲಿ ತೆರಳಲು ಅನುಮತಿ ನೀಡಿಲ್ಲ. ಪೊಲೀಸರ ಭಯದಿಂದ ಆಟೋ ಚಾಲಕರು ಕೂಡ ನೆರವಿಗೆ ಬರಲಿಲ್ಲ. ಹೀಗಾಗಿ ವೃದ್ಧ ತಂದೆಯನ್ನು ಹೆಗಲ ಮೇಲೆ ಹೊತ್ತುಕೊಂಡು ಕಿಲೋ ಮೀಟರ್ಗೂ ಹೆಚ್ಚು ದೂರ ನಡೆದುಕೊಂಡೇ ಹೋಗಿದ್ದಾರೆ. ಅವರ ಜೊತೆ ಆತನ ತಾಯಿ ಕೂಡ ಕಾಲ್ನಡಿಗೆಯಲ್ಲಿ ತೆರಳಿದ್ದಾರೆ.
ಈ ವೇಳೆ ಅಕ್ಕ ಪಕ್ಕದಲ್ಲಿ ಇತರೆ ವಾಹನಗಳು ಸಂಚರಿಸುತ್ತಿದ್ದರೂ ಯಾರೊಬ್ಬರೂ ಇವರ ಸಹಾಯಕ್ಕೆ ಬಂದಿಲ್ಲ. ಈ ಬಗ್ಗೆ ಮಾತನಾಡಿರುವ ರಾಯ್ಮನ್, ಪಾಸ್ಗಾಗಿ ಪೊಲೀಸ್ ಠಾಣೆಗೆ ತೆರಳಿದ್ದಾಗ ಅಫಿಡವಿಟ್ ಸಾಕು, ಪಾಸ್ ಅವಶ್ಯಕತೆ ಇಲ್ಲವೆಂದು ತಿಳಿಸಿದ್ದರು ಎಂದಿದ್ದಾರೆ. ಘಟನೆಯನ್ನು ಗಂಭೀರವಾಗಿ ಪರಿಗಣಿಸಿರುವ ಕೇರಳ ಮಾನವಹಕ್ಕುಗಳ ಆಯೋಗ ಸುಮೋಟೊ (ಸ್ವಯಂಪ್ರೇರಿತ) ದೂರು ದಾಖಲಿಸಿಕೊಂಡಿದೆ.