ಕೊಲ್ಲಂ(ಕೇರಳ): ಗರ್ಭಿಣಿ ಆನೆ ಕೊಲೆ ಪ್ರಕರಣ ದೇಶಾದ್ಯಂತ ಚರ್ಚೆಗೆ ಗ್ರಾಸವಾಗಿದೆ. ಇದರ ವಿರುದ್ಧ ಪ್ರಾಣಿ ಪ್ರಿಯರು ಧ್ವನಿ ಎತ್ತಿದ್ದು, ಪ್ರಕರಣವನ್ನು ತೀವ್ರವಾಗಿ ಖಂಡಿಸಿದ್ದಾರೆ. ಇದರ ಬೆನ್ನಲ್ಲೇ ಕೊಲ್ಲಂ ಜಿಲ್ಲೆಯಲ್ಲೂ ಅದೇ ರೀತಿಯ ಮತ್ತೊಂದು ಅಮಾನವೀಯ ಘಟನೆ ತಡವಾಗಿ ಬೆಳಕಿಗೆ ಬಂದಿದೆ.
ಹೆಣ್ಣಾನೆಯೊಂದು ತೀವ್ರ ರೀತಿಯ ಗಾಯಗಳಿಂದಾಗಿ ಮೃತಪಟ್ಟಿರುವ ವಿಚಾರ ತಡವಾಗಿ ತಿಳಿದುಬಂದಿದೆ. ಆಹಾರ ಅರಸಿ ಕಾಡಿನಿಂದ ನಾಡಿಗೆ ಬಂದಿದ್ದ ಗರ್ಭಿಣಿ ಆನೆಗೆ ಕೆಲ ಕಿಡಿಗೇಡಿಗಳು ಪಟಾಕಿ ತುಂಬಿದ್ದ ಅನಾನಸ್ ನೀಡಿದ್ದರಿಂದ ಅದು ಸ್ಫೋಟಗೊಂಡು ನೀರಿನಲ್ಲೇ ಸಾವನ್ನಪ್ಪಿರುವ ದಾರುಣ ಘಟನೆ ಕೇರಳದ ಮಲಪ್ಪುರಂನಲ್ಲಿ ನಡೆದಿತ್ತು.
15 ವರ್ಷದ ಗರ್ಭಿಣಿ ಕಾಡಾನೆಯೊಂದು ಆಹಾರ ಹುಡುಕುತ್ತ ನಾಡಿಗೆ ಬಂದಿತ್ತು. ಗ್ರಾಮದ ಬೀದಿಗಳಲ್ಲಿ ಆನೆಯನ್ನು ನೋಡಿದ ಸ್ಥಳೀಯ ಕಿಡಿಗೇಡಿಗಳು ಅನಾನಸ್ನಲ್ಲಿ ಪಟಾಕಿಯನ್ನು ಆನೆಯ ಬಾಯಿಗಿಟ್ಟಿದ್ದಾರೆ. ಆನೆ ಈ ಅನಾನಸ್ ಜಗಿದ ತಕ್ಷಣ ಅದು ಸ್ಫೋಟಗೊಂಡಿದೆ. ಸ್ಫೋಟದಿಂದಾಗಿ ಆನೆಯ ಬಾಯಿಗೆ ಗಂಭೀರ ಸ್ವರೂಪದ ಗಾಯಗಳಾಗಿವೆ. ನೋವು ತಾಳಲಾರದೆ ಅದು ತಕ್ಷಣವೇ ವೆಲ್ಲಿಯಾರ್ ನದಿಯಲ್ಲಿ ಹೋಗಿ ನಿಂತಿದ್ದು, ಅಲ್ಲೇ ಕೊನೆಯುಸಿರೆಳೆದಿತ್ತು. ಈ ಬಗ್ಗೆ ಮಲ್ಲಪ್ಪುರಂ ಜಿಲ್ಲೆಯ ಅರಣ್ಯಾಧಿಕಾರಿ ಮೋಹನನ್ ಕೃಷ್ಣನ್ ಎಂಬುವರು ಆನೆಯ ಸಾವಿನ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ವಿವರವಾದ ಪೋಸ್ಟ್ ಹಾಕಿದ ನಂತರ ಈ ಘಟನೆ ಬೆಳಕಿಗೆ ಬಂದಿತ್ತು.