ವಯನಾಡು (ಕೇರಳ):ಟ್ಯಾಕ್ಸಿ ಮುಖಾಂತರ ಬೆಂಗಳೂರಿನಿಂದ ಕೇರಳಕ್ಕೆ ಹೋಗುತ್ತಿದ್ದ ತುಂಬುಗರ್ಭಿಣಿಯನ್ನು ಚೆಕ್ಪೋಸ್ಟ್ನಲ್ಲಿ ನಿಲ್ಲಿಸಲಾಗಿತ್ತು. ಕೇರಳ ಸಿಎಂ ಮಧ್ಯಪ್ರವೇಶಿಸಿದ ನಂತರ ಆಕೆ ತಮ್ಮ ತವರು ಜಿಲ್ಲೆಗೆ ಸೇರಿದ್ದಾರೆ.
ಸಿಎಂ ಸೂಚನೆಯ ಆಧಾರದ ಮೇಲೆ ಕಣ್ಣೂರು ಜಿಲ್ಲಾಧಿಕಾರಿ ಅವರು ಆಕೆಗೆ ಅನುಮತಿ ನೀಡಿದ್ದು, ವೈದ್ಯಕೀಯ ತಪಾಸಣೆಗಾಗಿ ಆಕೆಯನ್ನು ಬಾಥೆರಿ ಆಸ್ಪತ್ರೆಗೆ ಕರೆದೊಯ್ಯಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಇನ್ನು ಆಕೆ ಹೆರಿಗೆಗಾಗಿ ತನ್ನ ತವರಾದ ತಲಚೆರಿಗೆ ಮರಳಲು ನಿರ್ಧರಿಸಿ ಬೆಂಗಳೂರಿನ ಪೊಲೀಸರಿಂದ ಅನುಮತಿ ಪಡೆದು, ತನ್ನ ಇಬ್ಬರು ಮಕ್ಕಳು ಮತ್ತು ಸಹೋದರಿಯೊಂದಿಗೆ ಟ್ಯಾಕ್ಸಿಯಲ್ಲಿ ಪ್ರಯಾಣಿಸಿ ಸೋಮವಾರ ರಾತ್ರಿ ಮುತಂಗ ಚೆಕ್ ಪೋಸ್ಟ್ ತಲುಪಿದ್ದರು.
ಆದರೆ ರಾಷ್ಟ್ರವ್ಯಾಪಿ ಲಾಕ್‌ಡೌನ್ ಇದ್ದಿದ್ದರಿಂದ ಅವರಿಗೆ ಕೇರಳಕ್ಕೆ ಪ್ರವೇಶಿಸಲು ಅವಕಾಶವಿರಲಿಲ್ಲ. ಆದರೆ ಈಕೆ ಗರ್ಭಿಣಿ ಆಗಿದ್ದರಿಂದ ಅನುಮತಿ ನೀಡಿ ಬಥೇರಿ ತಾಲೂಕು ಆಸ್ಪತ್ರೆಗೆ ಕರೆದೊಯ್ಯಲು ಅನುಮತಿ ನೀಡಲಾಯಿತು. ಇದಕ್ಕೆ ವಿರೋಧ ವ್ಯಕ್ತಪಡಿಸಿದ ಮಹಿಳೆ, ತಾನು ನನ್ನ ತವರಾದ ತಲಚೆರಿಗೆ ಹೋಗಲು ಅನುಮತಿ ಪಡೆದುಕೊಂಡಿದ್ದೇನೆ ಎಂದು ಹೇಳಿದಳು. ಆದರೆ ಆಕೆ ಬಳಿ ಯಾವುದೇ ದಾಖಲೆಗಳು ಇರಲಿಲ್ಲ. ಈ ಹಿನ್ನೆಲೆ ನಾಲ್ಕುಗಂಟೆಗಳ ಕಾಲ ಇಲ್ಲೇ ಕಾಲಕಳೆಯಬೇಕಾಯಿತು. ಈ ವೇಳೆ ಆಕೆಗೆ ಎಲ್ಲಾ ರೀತಿಯ ಸೌಕರ್ಯ ಒದಗಿಸಿದೆವು. ಇನ್ನು ಆಕೆ ಮತ್ತೆ ಮೈಸೂರು ಸಮೀಪದ ತನ್ನ ಸಂಬಂಧಿಕರ ಮನೆಗೆ ತೆರಳಿ ಇಂದು ಮುಂಜಾನೆ ಮತ್ತೆ ಇಲ್ಲಿಗೆ ಬಂದಿದ್ದಾರೆ ಎಂದು ಪೊಲೀಸ್ ಅಧಿಕಾರಿಯೋರ್ವರು ತಿಳಿಸಿದ್ದಾರೆ.
ಕಣ್ಣೂರು ಜಿಲ್ಲಾಡಳಿತ ಈಕೆ ಒಬ್ಬಳೆ ಪ್ರಯಾಣ ಮಾಡಲು ವಾಹನದ ಪಾಸ್ ನೀಡಿತ್ತು. ಈ ಕಾರಣಕ್ಕಾಗಿ ಆಕೆಯನ್ನು ಪೊಲೀಸರ ಭದ್ರತೆ ಜೊತೆ ಜಿಲ್ಲಾ ಗಡಿಯವರೆಗೆ ಕರೆದೊಯ್ದು ಬಿಡಲಾಯಿತು. ಇನ್ನುಳಿದವರನ್ನು ಮತ್ತೆ ಕೇರಳ ಗಡಿಯಿಂದ ವಾಪಸ್ ಬೆಂಗಳೂರಿಗೆ ಕಳುಹಿಸಲಾಯಿತು ಎಂದು ವಯನಾಡು ಜಿಲ್ಲಾ ಪೊಲೀಸ್ ಮುಖ್ಯಸ್ಥ ಆರ್ ಇಲಾಂಗೊ ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ.
ಲಾಕ್‌ಡೌನ್ ಪ್ರೋಟೋಕಾಲ್ ಪ್ರಕಾರ ನಾಲ್ಕು ಸಂದರ್ಭಗಳಲ್ಲಿ ಮಾತ್ರ ಅಂತರರಾಜ್ಯ ಪ್ರಯಾಣವನ್ನು ಅನುಮತಿಸಲಾಗುವುದು ಆದರೆ, ಈ ನಾಲ್ಕರಲ್ಲಿ ಈ ರೀತಿಯ ಪ್ರಕರಣ ಇಲ್ಲ ಎಂದು ಕೂಡ ಸ್ಪಷ್ಟನೆ ನೀಡಿದ್ದಾರೆ. ಕೇರಳದ ಗಡಿಯಲ್ಲಿರುವ ಕರ್ನಾಟಕ ಮತ್ತು ತಮಿಳುನಾಡು ಗ್ರಾಮಗಳ ಜನರಿಗೆ ಮಾನವೀಯತೆ ಆಧಾರದಲ್ಲಿ ವೈದ್ಯಕೀಯ ಚಿಕಿತ್ಸೆಗಾಗಿ ಕೇರಳಕ್ಕೆ ಪ್ರವೇಶಿಸಲು ಅವಕಾಶ ನೀಡಲಾಗುತ್ತಿದೆ ಎಂದು ತಿಳಿಸಿದ್ದಾರೆ.