ತಿರುವನಂತಪುರಂ: ರಾಹುಲ್ ಗಾಂಧಿ ಕೇರಳದ ವಯನಾಡಿನಿಂದ ಸ್ಪರ್ಧಿಸುತ್ತಿರುವುದು ಎಡರಂಗದ ವಿರುದ್ಧ ಸೆಣಸಾಡಲು. ಸಿಪಿಐ(ಎಂ) ಖಂಡಿತಾ ರಾಹುಲ್ರನ್ನು ಮಣಿಸಲಿದೆ ಎಂದು ಕೇರಳ ಸಿಎಂ ಪಿಣರಾಯಿ ವಿಜಯನ್ ತಿರುಗೇಟು ಹೇಳಿದ್ದಾರೆ.
ಅಮೇಥಿಯೊಂದಿಗೆ ಕೇರಳದ ವಯನಾಡಿನಲ್ಲಿಯೂ ರಾಹುಲ್ ಗಾಂಧಿ ಸ್ಪರ್ಧಿಸುತ್ತಿದ್ದಾರೆ ಎಂದು ಕಾಂಗ್ರೆಸ್ ಇಂದು ಘೋಷಿಸಿದೆ. ಈ ಹಿನ್ನೆಲೆಯಲ್ಲಿ ಪ್ರತಿಕ್ರಿಯಿಸಿರುವ ಸಿಎಂ ಪಿಣರಾಯಿ, ರಾಹುಲ್ ಗಾಂಧಿ ಇಲ್ಲಿ ಸ್ಪರ್ಧಿಸುತ್ತಿರುವುದು ಬಿಜೆಪಿ ವಿರುದ್ಧ ಹೋರಾಡಲು ಅಲ್ಲ. ನಮ್ಮೊಂದಿಗೆ ಹೋರಾಡಲು ಎಂದರು.
ರಾಹುಲ್ ಸೋಲು ಖಚಿತ ಎಂದ ಕೇರಳ ಸಿಎಂ ಪಿಣರಾಯಿ ವಿಜಯನ್ ರಾಹುಲ್ ಕೇರಳದ 20 ಲೋಕಸಭೆ ಕ್ಷೇತ್ರಗಳಲ್ಲಿ ಒಂದು ಕ್ಷೇತ್ರದಿಂದ ಸ್ಪರ್ಧಿಸುತ್ತಿದ್ದಾರೆ ಅಷ್ಟೇ. ಇದರಲ್ಲಿ ಯಾವುದೇ ವಿಶೇಷತೆ ಇಲ್ಲ. ಅವರು ಬಿಜೆಪಿ ಸ್ಪರ್ಧಿಸುತ್ತಿರುವ ಕ್ಷೇತ್ರದಲ್ಲಿ ಸ್ಪರ್ಧಿಸಬೇಕಿತ್ತು. ಆದರೆ, ಇಲ್ಲಿ ಸ್ಪರ್ಧಿಸುತ್ತಿರುವುದು ಎಡರಂಗದ ವಿರುದ್ಧ ಹೋರಾಟವಲ್ಲದೆ, ಮತ್ತೇನೂ ಅಲ್ಲ. ನಾವು ಖಂಡಿತ ಅವರೊಂದಿಗೆ ಸೆಣಸಾಡುತ್ತೇವೆ ಎಂದರು.
ಸಿಪಿಐ(ಎಂ)ನ ಪ್ರಧಾನ ಕಾರ್ಯದರ್ಶಿ ಪ್ರಕಾಶ್ ಕಾರಟ್ ಸಹ ಇದೇ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಎಡರಂಗದ ವಿರುದ್ಧ ರಾಹುಲ್ರನ್ನು ಅಭ್ಯರ್ಥಿಯನ್ನಾಗಿ ಮಾಡಿರುವುದು ಕೇರಳದಲ್ಲಿ ನಮ್ಮನ್ನು ಟಾರ್ಗೆಟ್ ಮಾಡಿದ್ದಾರೆ ಎಂಬುದನ್ನು ಸ್ಪಷ್ಟಪಡಿಸುತ್ತದೆ. ನಾವು ಇದನ್ನು ಖಂಡಿಸುತ್ತೇವೆ ಹಾಗೂ ಖಂಡಿತಾ ರಾಹುಲ್ರನ್ನು ಮಣಿಸುತ್ತೇವೆ ಎಂದು ಹೇಳಿದರು.