ತಿರುವನಂತಪುರಂ: ಕಳೆದೆರಡು ತಿಂಗಳು ಕೊರೊನಾ ವೈರಸ್ ವಿರುದ್ಧ ಪರಿಣಾಮಕಾರಿ ಹೋರಾಟ ನಡೆಸಿ ಅದರಿಂದ ಹೊರಬಂದಿದ್ದ ದೇವರ ನಾಡು ಕೇರಳದಲ್ಲಿ ಇದೀಗ ಮತ್ತೊಮ್ಮೆ ಸೋಂಕು ಅಬ್ಬರಿಸುತ್ತಿದೆ. ರಾಜ್ಯದಲ್ಲಿ ಪ್ರತಿದಿನ ನೂರಾರು ಹೊಸ ಪ್ರಕರಣಗಳು ದಾಖಲಾಗುತ್ತಿವೆ.
ಇಂದು ಕೂಡ ರಾಜ್ಯದಲ್ಲಿ 791 ಕೋವಿಡ್ ಪ್ರಕರಣಗಳು ದಾಖಲಾಗಿವೆ. ಈ ಮೂಲಕ ಒಟ್ಟು ಸೋಂಕಿತರ ಸಂಖ್ಯೆ ಇದೀಗ 10,275 ತಲುಪಿದೆ.
ಈ ಬಗ್ಗೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಮುಖ್ಯಮಂತ್ರಿ ಪಿಣರಾಯಿ ವಿಜಯನ್, ತಿರುವನಂತಪುರಂನ ಕೆಲವು ಪ್ರದೇಶಗಳಲ್ಲಿ ಅತಿ ಹೆಚ್ಚಿನ ಪ್ರಮಾಣದಲ್ಲಿ ಸೋಂಕು ಪತ್ತೆಯಾಗುತ್ತಿದೆ. ಇದು ಸಮುದಾಯಕ್ಕೆ ಸೋಂಕು ಹಬ್ಬಿರುವ ಮುನ್ಸೂಚನೆಯಾಗಿದೆ. ಇಂತಹ ಕಠಿಣ ಪರಿಸ್ಥಿತಿ ನಿಭಾಯಿಸಲು ಸರ್ಕಾರ ಎಲ್ಲ ರೀತಿಯಿಂದಲೂ ಕ್ರಮ ಕೈಗೊಳ್ಳುತ್ತಿದೆ ಎಂದಿರುವ ಅವರು ಈ ಜಿಲ್ಲೆಗಳಲ್ಲಿ ನಾಳೆಯಿಂದಲೇ ಲಾಕ್ಡೌನ್ ಜಾರಿಗೊಳ್ಳಲಿದೆ ಎಂದಿದ್ದಾರೆ.
ಕರಾವಳಿ ಪ್ರದೇಶಗಳಲ್ಲಿ ಅತಿ ಹೆಚ್ಚು ಕೋವಿಡ್ ಪ್ರಕರಣ ದಾಖಲಾಗುತ್ತಿರುವುದು ಕಳವಳಕ್ಕೆ ಕಾರಣವಾಗಿದ್ದು, ಪುಲ್ಲುವಿಲಾ ಮತ್ತು ಪೂಂಟುರಾ ಗ್ರಾಮದಲ್ಲಿ ಸೋಂಕು ಸಮುದಾಯಕ್ಕೆ ಹಬ್ಬಿದೆ ಎಂದು ತಿಳಿಸಿದ್ದಾರೆ. ಪುಲ್ಲುವಿಲಾ ಗ್ರಾಮದ 97 ಸ್ಯಾಂಪಲ್ಗಳಲ್ಲಿ 51 ಜನರಿಗೆ ಪಾಸಿಟಿವ್ ಹಾಗೂ ಪೂಂಟುರಾದ 50 ಟೆಸ್ಟ್ಗಳಲ್ಲಿ 26 ಜನರಿಗೆ ಸೋಂಕು ಕಾಣಿಸಿಕೊಂಡಿದೆ ಎಂದು ತಿಳಿಸಿದ್ದಾರೆ.