ಡೆಹರಾಡೂನ್ (ಉತ್ತರಖಂಡ್):ಕೇರಳದ ಉದ್ಯಮಿ ಕೊಲೆ ಪ್ರಕರಣದಲ್ಲಿ 5 ಆರೋಪಿಗಳನ್ನು ಪೊಲೀಸರು ಬಂಧಿಸಿದ್ದು, ಇನ್ನೂ ನಾಲ್ಕು ಮಂದಿ ಪರಾರಿಯಾಗಿದ್ದಾರೆ.
ಆರೋಪಿಗಳೆಲ್ಲರೂ ಕೇರಳ ರಾಜ್ಯದವರು ಎಂದು ಹೇಳಲಾಗಿದೆ. ಪೊಲೀಸರ ಪ್ರಕಾರ, ಹಣದ ವ್ಯವಹಾರಕ್ಕಾಗಿ ಕೇರಳದ ಯುವ ಉದ್ಯಮಿ ಅಬ್ದುಲ್ ಶುಕರ್ ಅವರನ್ನು ಕ್ರೂರವಾಗಿ ಹತ್ಯೆ ಮಾಡಲಾಗಿದೆ. ನಂತರ ಆರೋಪಿಗಳು ಮೃತ ದೇಹವನ್ನು ಡೆಹ್ರಾಡೂನ್ ಮ್ಯಾಕ್ಸ್ ಆಸ್ಪತ್ರೆಯಲ್ಲಿ ಬಿಟ್ಟು ತಪ್ಪಿಸಿಕೊಂಡಿದ್ದರು.
ಆಗಸ್ಟ್ 28 ರ ತಡರಾತ್ರಿ ಮ್ಯಾಕ್ಸ್ ಆಸ್ಪತ್ರೆ ಬಳಿ ಕೆಲವು ವ್ಯಕ್ತಿಗಳು ಓರ್ವನ್ನ ಬಿಟ್ಟು ತೆರಳಿದ್ದಾರೆ. ವೈದ್ಯರು ಆತನನ್ನ ಪರೀಕ್ಷಿಸಿದಾಗ ಆತ ಮೃತಪಟ್ಟಿದ್ದಾನೆ ಎಂದು ತಿಳಿದುಬಂದಿದೆ. ಆಸ್ಪತ್ರೆಯ ಆಡಳಿತ ಮಂಡಳಿ ಈ ಘಟನೆಯ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿತ್ತು.
ಘಟನಾ ಸ್ಥಳಕ್ಕೆ ಆಗಮಿಸಿದ ಪೊಲೀಸರು ಆಸ್ಪತ್ರೆಯ ಸಿಸಿಟಿವಿ ಪರಿಶೀಲಿಸಿದಾಗ ಕಾರಿನಲ್ಲಿ ಬಂದ ನಾಲ್ವರು ಓರ್ವ ವ್ಯಕ್ತಿಯನ್ನ ಕರೆತಂದು ಆಸ್ಪತ್ರೆಯ ತುರ್ತು ಚಿಕಿತ್ಸೆ ವಾರ್ಡ್‌ನಲ್ಲಿ ಬಿಟ್ಟು ಹೋಗಿರುವುದು ಧೃಡಪಟ್ಟಿತ್ತು. ಮೊದಲು ವಾಹನ ಪತ್ತೆ ಹಚ್ಚಿದ ಪೊಲೀಸರು ಆ ಮೂಲಕ ಆರೋಪಿಗಳನ್ನ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
485 ಕೋಟಿ ಮೊತ್ತದ ಕ್ರಿಪ್ಟೋಕರೆನ್ಸಿ ಪಾಸ್ವರ್ಡ್ ಪಡೆದುಕೊಳ್ಳುವ ಸಲುವಾಗಿ ಕೇರಳ ಮೂಲದ ಅಬ್ದುಲ್ ಶಕುರ್ಗೆ ಚಿತ್ರಹಿಂಸೆ ನೀಡಿ ಕೊಲೆ ಮಾಡಿರುವುದು ಪೊಲೀಸ್ ವಿಚಾರಣೆಯಲ್ಲಿ ಬೆಳಕಿಗೆ ಬಂದಿದ್ದು, ವಿಚಾರಣೆ ಮುಂದುವರೆದಿದೆ.