ನವದೆಹಲಿ: ನವದೆಹಲಿ ವಿಧಾನಸಭಾ ಚುನಾವಣೆಯಲ್ಲಿ ಆಪ್ ಪಕ್ಷದ ಪರ ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಪತ್ನಿ ಹಾಗೂ ಮಗಳು ಪ್ರಚಾರದ ಅಖಾಡಕ್ಕೆ ಇಳಿದಿದ್ದಾರೆ. ಪತ್ನಿ ಸುನೀತಾ ಹಾಗೂ ಮಗಳು ಹರ್ಷಿತಾ ಆಪ್ ಪರವಾಗಿ ಪ್ರಚಾರದಲ್ಲಿ ತೊಡಗಿಕೊಂಡಿದ್ದಾರೆ. ಪತ್ನಿ ಸುನೀತಾ ತಮ್ಮ ಸೇವೆಯಿಂದ ಸ್ವಯಂ ನಿವೃತ್ತಿ ತೆಗೆದುಕೊಂಡಿದ್ದು ಈ ಚುನಾವಣೆಯಲ್ಲಿ ಅರವಿಂದ್ ಕೇಜ್ರೀವಾಲ್ ಪರ ನಿಂತಿದ್ದಾರೆ.
ರಂಗೇರಿದ ದೆಹಲಿ ಸಮರ: ಕೇಜ್ರಿವಾಲ್ ಪರ ಪತ್ನಿ ಹಾಗೂ ಮಗಳು ಪ್ರಚಾರದ ಅಖಾಡಕ್ಕೆ..!
ದೆಹಲಿ ವಿಧಾನಸಭಾ ಚುನಾವಣೆಯಲ್ಲಿ ಗೆಲ್ಲಲು ಎಲ್ಲಾ ಪಕ್ಷಗಳು ಕಸರತ್ತು ನಡೆಸುತ್ತಿವೆ. ಆಪ್ ಪಕ್ಷದ ಪ್ರಚಾರವೂ ಕೂಡಾ ಜೋರಾಗುತ್ತಿದೆ. ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಕೂಡಾ ರಾಷ್ಟ್ರೀಯ ಪಕ್ಷಗಳಿಗೆ ಸೆಡ್ಡು ಹೊಡೆಯುವಂತೆ ಪ್ರಚಾರ ನಡೆಸುತ್ತಿದ್ದಾರೆ. ಈಗ ಕೇಜ್ರಿವಾಲ್ ಪತ್ನಿ ಹಾಗೂ ಮಗಳೂ ಕೂಡಾ ಪ್ರಚಾರದ ಅಖಾಡಕ್ಕಿಳಿದ್ದಾರೆ.
ಈಟಿವಿ ಭಾರತದೊಂದಿಗೆ ಮಾತನಾಡಿದ ಅವರು ಅರವಿಂದ್ ಕೇಜ್ರಿವಾಲ್ ಚುನಾವಣೆ ನಿಮಿತ್ತ ಬ್ಯುಸಿಯಾಗಿದ್ದು ಪ್ರಚಾರದಲ್ಲಿ ತೊಡಗಿ ತಮ್ಮ ಆರೋಗ್ಯ ಕೆಡಿಸಿಕೊಳ್ಳುತ್ತಿದ್ದಾರೆ ಎಂದು ಕಳಕಳಿ ವ್ಯಕ್ತಪಡಿಸಿದ್ದಾರೆ. ಜೊತೆಗೆ ಜನರ ಸಂತೋಷ ಅವರಿಗೆ ಶಕ್ತಿ ನೀಡುತ್ತಿದೆ ಎಂದರು. ಕೇಜ್ರಿವಾಲ್ ಮಗಳು ಹರ್ಷಿತಾ ತಮ್ಮ ನೌಕರಿಯಿಂದ ದೀರ್ಘ ರಜೆ ತೆಗೆದುಕೊಂಡಿದ್ದು ತಂದೆಯ ಪರವಾಗಿ ಪ್ರಚಾರದಲ್ಲಿ ತೊಡಗಿಕೊಂಡಿದ್ದಾರೆ. ದೆಹಲಿ ಜನರಲ್ಲಿ ಆಪ್ ಪರವಾಗಿ ಜನಾಭಿಪ್ರಾಯ ಮೂಡಿಸಲು ಮುಂದಾಗಿದ್ದಾರೆ.
ಈ ಬಗ್ಗೆ ಮಾತನಾಡಿರುವ ಅವರು '' ಆಪ್ ದೆಹಲಿಯಲ್ಲಿ ಜಾರಿಗೊಳಿಸಿದ ಎಲ್ಲಾ ಯೋಜನೆಗಳು ಕೂಡಾ ಸಾರ್ವಕಾಲಿಕವಾಗಿದ್ದು ಸಕಾರಾತ್ಮಕವಾಗಿವೆ'' ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಜೊತೆಗೆ '' ದೆಹಲಿ ಸರ್ಕಾರದ ಅಡಿಯಲ್ಲಿ ಸಾಕಷ್ಟು ಇಲಾಖೆಗಳು ಬರದೇ ಇದ್ದರೂ ಕೂಡಾ ಮಹಿಳಾ ಸುರಕ್ಷತೆಯಂತಹ ವಿಚಾರಗಳ ಬಗ್ಗೆ ಆಪ್ ತೀವ್ರ ಕಾಳಜಿ ವಹಿಸಿದೆ. ಮೊದಲ ಬಾರಿಗೆ ಮಾತಿಗಿಂತ ಕೆಲಸಕ್ಕೆ ಆದ್ಯತೆ ನೀಡಲಾಗಿದೆ'' ಎಂದು ಆಪ್ ಸರ್ಕಾರವನ್ನು ಶ್ಲಾಘಿಸಿದರು. ಬಿಜೆಪಿ ವಿರುದ್ಧವೂ ವಾಗ್ದಾಳಿ ನಡೆಸಿದ ಕೇಜ್ರಿವಾಲ್ ಕುಟುಂಬ ಬಿಜೆಪಿ ದೆಹಲಿಯಲ್ಲಿ ಸರಿಯಾದ ಗುರಿಯನ್ನು ಹೊಂದಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.