ಹೈದರಾಬಾದ್:ಅನಿರ್ದಿಷ್ಟಾವಧಿ ಮುಷ್ಕರದಲ್ಲಿ ಭಾಗಿಯಾಗಿದ್ದ ತೆಲಂಗಾಣ ರಾಜ್ಯ ಸಾರಿಗೆ ನಿಗಮದ ಸುಮಾರು 48 ಸಾವಿರ ನೌಕರರನ್ನು ವಜಾ ಮಾಡುವಂತೆ ಮುಖ್ಯಮಂತ್ರಿ ಕೆ. ಚಂದ್ರಶೇಖರ್ ರಾವ್ ಆದೇಶ ಹೊರಡಿಸಿದ್ದು, ಸಿ.ಎಂ. ನಿರ್ಧಾರದಿಂದ ನೌಕರರು ಬೆಚ್ಚಿಬಿದ್ದಿದ್ದಾರೆ.
ಇನ್ನೊಂದೆಡೆ ಕೆಸಿಆರ್ ಅವರು ನೌಕರರು ಕರ್ತವ್ಯಕ್ಕೆ ಹಾಜರಾಗಲು ಬೆದರಿಕೆ ತಂತ್ರ ಅನುಸರಿಸುತ್ತಿದ್ದಾರಾ? ಎಂಬ ಚರ್ಚೆ ಕೇಳಿಬಂದಿದೆ.
ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ 48 ಸಾವಿರಕ್ಕೂ ಅಧಿಕ ತೆಲಂಗಾಣ ರಾಜ್ಯ ಸಾರಿಗೆ ಸಂಸ್ಥೆಯ ಸಿಬ್ಬಂದಿ ಶುಕ್ರವಾರ ರಾತ್ರಿಯಿಂದ ಪ್ರತಿಭಟನೆಗೆ ಆರಂಭಿಸಿದ್ದರು. ಶನಿವಾರ ಸಂಜೆ 6 ಗಂಟೆ ಒಳಗಾಗಿ ಪ್ರತಿಭಟನೆ ನಿಲ್ಲಿಸುವಂತೆ ಸರ್ಕಾರ ಗಡುವು ನೀಡಿತ್ತು. ಆದರೆ, ಗಡುವನ್ನು ಪರಿಗಣಿಸಿದ 48 ಸಾವಿರ ನೌಕರರನ್ನು ಸಿಎಂ ಕೆಸಿಆರ್ ವಜಾಗೆ ಆದೇಶಿಸಿದ್ದಾರೆ.
"ಹಬ್ಬದ ಸಮಯದಲ್ಲಿ ಬಸ್ ಚಾಲಕರು, ನಿರ್ವಾಹಕರು ಹಾಗೂ ಸಿಬ್ಬಂದಿ ಪ್ರತಿಭಟನೆ ಮಾಡುತ್ತಿರುವುದು ಅತಿದೊಡ್ಡ ಅಪರಾಧ. ಇದರಿಂದ ಸರ್ಕಾರಕ್ಕೆ 1,200 ಕೋಟಿ ರೂ. ನಷ್ಟ ಉಂಟಾಗಿದೆ. ಸಾಲದ ಮೊತ್ತ 5,000 ಕೋಟಿಗೆ ಏರಿಕೆ ಆಗಿದೆ” ಎಂದು ಸಿಎಂ ಕೆಸಿಆರ್ ಹೇಳಿದ್ದಾರೆ.