ಕರ್ನಾಟಕ

karnataka

ETV Bharat / bharat

ನಮ್ಮಲ್ಲಿ ಭಯ ಹುಟ್ಟಿಸಲು ಹತ್ಯೆಗಳು ನಡೆಯುತ್ತಿದೆ: ಕಾಶ್ಮೀರಿ ಪಂಡಿತ್​ ಸಂಘಟನೆ ಖಂಡನೆ - ಕಾಶ್ಮೀರ ಪಂಡಿತರಿಗೆ ಭಯ

1990ರ ದಶಕದಿಂದಲೂ ಸಹ ಕಾಶ್ಮೀರ ಪಂಡಿತರಿಗೆ ಭಯ ಹುಟ್ಟಿಸುವ ಸಲುವಾಗಿ ಅವರ ಹತ್ಯೆಗಳನ್ನು ಮಾಡಲಾಗುತ್ತಿದೆ. ಇತ್ತೀಚೆಗೆ ನಡೆದ ಸರ್ಪಂಚ್ ಅಜಯ್ ಪಂಡಿತ್ ಅವರ ಹತ್ಯೆಯೂ ಸಹ ಕಾಶ್ಮೀರಿ ಪಂಡಿತರಲ್ಲಿ ಭಯದ ವಾತಾವರಣ ಹುಟ್ಟುಹಾಕಲು ನಡೆದ ಷಡ್ಯಂತ್ರವಾಗಿದೆ ಎಂದು ಸಂಘಟನೆಗಳು ಹೇಳಿವೆ

Kashmiri Pandit's killing attempt
ಸಾಂದರ್ಭಿಕ ಚಿತ್ರ

By

Published : Jun 10, 2020, 2:54 AM IST

ಜಮ್ಮು: ಅನಂತ್‌ನಾಗ್ ಜಿಲ್ಲೆಯಲ್ಲಿ ನಡೆದ ಸರ್ಪಂಚ್ ಅಜಯ್ ಪಂಡಿತ್​ ಅವರ ಹತ್ಯೆಯನ್ನು ಹಲವಾರು ಕಾಶ್ಮೀರಿ ಪಂಡಿತ್ ಸಂಘಟನೆಗಳು ಖಂಡಿಸಿದ್ದು, ಕಾಶ್ಮೀರ ಕಣಿವೆಯ ಅಲ್ಪಸಂಖ್ಯಾತರಲ್ಲಿ ಭಯ ಹುಟ್ಟಿಸುವ ಪ್ರಯತ್ನ ಇದಾಗಿದೆ ಎಂದು ಕಿಡಿಕಾರಿದ್ದಾರೆ.

ಕಾಶ್ಮೀರದಲ್ಲಿ ವಾಸಿಸುತ್ತಿರುವ ಕಾಶ್ಮೀರಿ ಪಂಡಿತರು ಮತ್ತು ಇತರ ಅಲ್ಪಸಂಖ್ಯಾತ ಸಮುದಾಯದವರಿಗೆ ಸಾವಿನ ಬಗ್ಗೆ ಭಯ ಹುಟ್ಟಿಸುವ ಷಡ್ಯಂತ್ರ ಇದು ಎಂದು ಆರೋಪಿಸಿರುವ ಕಾಶ್ಮೀರಿ ಪಂಡಿತ್ ಸಂಘಟನೆಗಳು, ಈ ನಿಟ್ಟಿನಲ್ಲಿ ಕಾಶ್ಮೀರಿ ಪಂಡಿತರಿಗೆ ಹಾಗೂ ಕಣಿವೆಯ ಅಲ್ಪಸಂಖ್ಯಾತರಿಗೆ ಭದ್ರತೆ ಒದಗಿಸುವಂತೆ ಕೇಂದ್ರ ಸರ್ಕಾರವನ್ನು ಒತ್ತಾಯಿಸಿವೆ.

1990ರ ದಶಕದಲ್ಲಿ ಕಾಶ್ಮೀರದ ಕಣಿವೆ ಭಾಗದಲ್ಲಿ ಭಯ ಉಂಟುಮಾಡಲು ಅಲ್ಪಸಂಖ್ಯಾತ ಕಾಶ್ಮೀರಿ ಪಂಡಿತ್ ಸಮುದಾಯವನ್ನು ಗುರಿಯಾಗಿಸಿಕೊಂಡು ಇಸ್ಲಾಮಿಕ್ ಭಯೋತ್ಪಾದಕರು ನಡೆಸಿದಂತೆ ಇದು ಕೂಡ ಯೋಜಿತ ದಾಳಿಯಾಗಿದೆ. ಕಾಶ್ಮೀರ ಪಂಡಿತ್ ಹತ್ಯೆಯನ್ನು ನಾವು ಖಂಡಿಸುತ್ತೇವೆ ಎಂದು ಎಪಿಎಂಸಿಸಿ ಅಧ್ಯಕ್ಷ ವಿನೋದ್ ಪಂಡಿತ್​​ ಹೇಳಿದ್ದಾರೆ.

ಹಲವಾರು ಭಯೋತ್ಪಾದಕ ಸಂಘಟನೆಗಳು ಕಾಶ್ಮೀರಿ ಪಂಡಿತರಿಗೆ ವಸಾಹತು ಪ್ರದೇಶಕ್ಕೆ ತೆರಳದಂತೆ ಬೆದರಿಕೆಯೊಡ್ಡಿದ್ದು, ಒಂದೊಮ್ಮೆ ಈ ಪ್ರದೇಶಕ್ಕೆ ಮರಳಿದರೆ ಅಂತಹವರನ್ನು ಕೊಲ್ಲುವ ಬೆದರಿಕೆ ಹಾಕಿದ್ದಾರೆ. ಇದು ಭಯೋತ್ಪಾದಕರು ಮತ್ತು ಅವರ ಭೂಗತಲೋಕದಿಂದ ಕಾಶ್ಮೀರಿ ಪಂಡಿತರಿಗೆ ಹಾಕಲಾದ ಸ್ಪಷ್ಟ ಬೆದರಿಕೆಯಾಗಿದೆ. 1990ರಿಂದ ಕಾಶ್ಮೀರದಲ್ಲಿ ಏನೂ ಬದಲಾಗಿಲ್ಲ, ಕಾಶ್ಮೀರ ಪಂಡಿತರ ಸ್ಥಿತಿ ಅಂದಿನಿಂದ ಇಂದಿನವರೆಗೂ ಶೋಚನೀಯವಾಗಿಯೇ ಉಳಿದಿದೆ ಎಂದು ವಿನೋದ್ ಪಂಡಿತ್​ ಕಿಡಿಕಾರಿದ್ದಾರೆ.

370ನೇ ವಿಧಿಯನ್ನು ರದ್ದುಪಡಿಸುವುದರಿಂದ ಅಲ್ಪಸಂಖ್ಯಾತ ಕಾಶ್ಮೀರ ಪಂಡಿತರುಗಳು ಕಾಶ್ಮೀರಕ್ಕೆ ಮರಳಬಹುದು ಎಂಬ ಭರವಸೆ ಮೂಡಿದೆ. ಆದರೆ ಈ ಹತ್ಯೆಯು ಕಣಿವೆಯಲ್ಲಿ ಅವರ ಪುನರ್ವಸತಿಯನ್ನು ನಿಲ್ಲಿಸುವ ಹುನ್ನಾರವಾಗಿದೆ ಎಂದು ಎಎಸ್​​ಕೆಪಿಸಿ ಪ್ರಧಾನ ಕಾರ್ಯದರ್ಶಿ ಡಾ.ಟಿ.ಕೆ.ಭಟ್ ಹೇಳಿದ್ದಾರೆ.

ಅಂದಿನಿಂದ ಇಂದಿನವರೆಗೂ ಕಾಶ್ಮೀರ ಪಂಡಿತರ ಸ್ಥಿತಿ ಶೋಚನೀಯವಾಗಿಯೇ ಉಳಿದುಬಿಟ್ಟಿದೆ. ಇನ್ನಾದರೂ ಕೇಂದ್ರ ಸರ್ಕಾರ ನಮ್ಮತ್ತ ಗಮನ ಹರಿಸಿ ನ್ಯಾಯ ಒದಗಿಸಲಿ ಎಂದು ಯುವ ಅಖಿಲ ಭಾರತ ಕಾಶ್ಮೀರಿ ಸಮಾಜವು ಆಗ್ರಹಿಸಿದೆ.

ABOUT THE AUTHOR

...view details