ಶ್ರೀನಗರ:ಶಾಂತಿಯುತ ಮತ್ತು ಘನತೆಯ ಜೀವನವನ್ನು ಪ್ರಾರಂಭಿಸಲು ಇಲ್ಲಿನ ಪರಿಸರವು ಅನುಕೂಲಕರವಾಗಿದೆ. ಹಾಗಾಗಿ ಯುವಕರು ಉಗ್ರಗಾಮಿತ್ವವನ್ನು ಬಿಟ್ಟು ತಮ್ಮ ಮನೆಗಳಿಗೆ ಮರಳಬೇಕು ಎಂದು ಲೆಫ್ಟಿನೆಂಟ್ ಜನರಲ್ ಬಿ.ಎಸ್.ರಾಜು ಹೇಳಿದ್ದಾರೆ.
ಲೆಫ್ಟಿನೆಂಟ್ ಜನರಲ್ ಬಿ.ಎಸ್.ರಾಜು ಮಾಧ್ಯಮಗಳೊಂದಿಗೆ ಕಾಶ್ಮೀರದ ಪರಿಸ್ಥಿತಿಯನ್ನು ವಿವರಿಸಿದರು. "ಸ್ಥಳೀಯ ಯುವಕರು ಉಗ್ರಗಾಮಿ ಹಾದಿಯನ್ನು ಬದಲಾಯಿಸುವಂತೆ ನಾನು ಮನವಿ ಮಾಡುತ್ತೇನೆ. ಬದಲಾಗಿ, ಬಂದೂಕು ಹಿಡಿದು ಸೇನೆಯೊಂದಿಗೆ ಯುದ್ಧಕ್ಕೆ ಬಂದರೆ ಅಂಥವರ ವಿರುದ್ಧ ಮುಲಾಜಿಲ್ಲದೆ ಕ್ರಮ ಕೈಗೊಳ್ಳಲಾಗುವುದು" ಎಂದರು.
ದಕ್ಷಿಣ ಕಾಶ್ಮೀರದ ಪರಿಸ್ಥಿತಿಯ ಕುರಿತು ಮಾತನಾಡಿದ ಮೇಜರ್ ಜನರಲ್ ಹೆಚ್.ಎಸ್.ಸಾಹಿ ಅವರು, "ಕಾಶ್ಮೀರ ಕಣಿವೆಯ ಒಟ್ಟಾರೆ ಪರಿಸ್ಥಿತಿ ಶಾಂತಿಯುತವಾಗಿದೆ. ಹಿಂದಿನ ದಿನಗಳಿಗೆ ಹೋಲಿಸಿದರೆ ಉಗ್ರಗಾಮಿತ್ವ ಸಂಬಂಧಿತ ಚಟುವಟಿಕೆಗಳು ಕಡಿಮೆಯಾಗಿವೆ. ಇತ್ತೀಚೆಗೆ ವೃತ್ತಿಪರ ಪರೀಕ್ಷೆಗಳಲ್ಲಿ ಅನೇಕರು ಸಾಧನೆ ಮಾಡುತ್ತಿರುವುದರಿಂದ ಯುವಕರು ತಮ್ಮ ಭವಿಷ್ಯದತ್ತ ಗಮನಹರಿಸಲು ಪ್ರಾರಂಭಿಸಿದ್ದಾರೆ. ಕುಲ್ಗಮ್, ಅನಂತ್‌ನಾಗ್, ಪುಲ್ವಾಮಾ ಮತ್ತು ಶೋಪಿಯನ್ ಜಿಲ್ಲೆಗಳೂ ಸೇರಿದಂತೆ ಕಾಶ್ಮೀರದ ದಕ್ಷಿಣ ಭಾಗಗಳಲ್ಲಿನ ಪರಿಸ್ಥಿತಿ ಸಾಮಾನ್ಯವಾಗಿದೆ. ಆರ್ಥಿಕ ಚಟುವಟಿಕೆಗಳು ಅಲ್ಲಿ ತಲೆಎತ್ತಿಕೊಳ್ಳುತ್ತಿವೆ" ಎಂದು ಹೇಳಿದರು.
"ಸೈನ್ಯವು ಉಗ್ರರ ಒಳನುಸುಳುವಿಕೆಯನ್ನು ತಡೆಯುವಲ್ಲಿ ಸಮರ್ಥವಾಗಿದೆ. ಮುಂದೆ ಚಳಿಗಾಲ ಇರುವುದಿಂದ ನಮ್ಮ ಪ್ರಯತ್ನಗಳು ಹೆಚ್ಚಾಗಬಹುದು. ಆದರೆ ನಮ್ಮ ಸೈನಿಕರು ಜಾಗರೂಕತೆಯನ್ನು ಕಾಯ್ದುಕೊಳ್ಳುತ್ತಿದ್ದಾರೆ" ಎಂದು ಅವರು ತಿಳಿಸಿದರು.